ADVERTISEMENT

ಕಲಬುರಗಿ: ಯೇಸುವಿನ ಆರಾಧನೆ; ಮನೆ ಮಾಡಿದ ಸಂಭ್ರಮ

ವಿದ್ಯುತ್‌ ದೀಪಗಳ ಚಿತ್ತಾರ; ಜಿಲ್ಲೆಯ ಚರ್ಚ್‌ಗಳಲ್ಲಿ ಮನೆ ಮಾಡಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:00 IST
Last Updated 25 ಡಿಸೆಂಬರ್ 2025, 5:00 IST
ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕಲಬುರಗಿಯ ಹಿಂದೂಸ್ಥಾನಿ ಕವನೆಂಟ್‌ ಚರ್ಚ್ ಆವರಣದಲ್ಲಿ ನಿರ್ಮಿಸಿರುವ ಗೋದಲಿ ವಿದ್ಯುತ್‌ ದೀಪಗಳಿಂದ ಬುಧವಾರ ಜಗಮಗಿಸುತ್ತಿರುವುದು     ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕಲಬುರಗಿಯ ಹಿಂದೂಸ್ಥಾನಿ ಕವನೆಂಟ್‌ ಚರ್ಚ್ ಆವರಣದಲ್ಲಿ ನಿರ್ಮಿಸಿರುವ ಗೋದಲಿ ವಿದ್ಯುತ್‌ ದೀಪಗಳಿಂದ ಬುಧವಾರ ಜಗಮಗಿಸುತ್ತಿರುವುದು     ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌   

ಕಲಬುರಗಿ: ನಗರದ ಎಸ್‌.ಬಿ. ಟೆಂಪಲ್‌ ರಸ್ತೆಯ ಸೇಂಟ್‌ ಮೇರಿ ಚರ್ಚ್‌, ಜೆಸ್ಕಾಂ ಕಚೇರಿ ಎದುರಿನ ಹಿಂದೂಸ್ಥಾನ್‌ ಕವನೆಂಟ್‌ ಚರ್ಚ್‌, ವಿಜಯ ವಿದ್ಯಾಲಯ ಬಳಿಯ ಮೆಥೋಡಿಸ್ಟ್‌ ಚರ್ಚ್‌ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ರಂಗು ತುಂಬಿದೆ. ‘ಕರುಣಾಮಯಿ’ ಯೇಸು ಕ್ರಿಸ್ತ್‌ನ ಜನ್ಮದಿನ ಸಂಭ್ರಮಿಸಲು ಕ್ರೈಸ್ತ ಬಾಂಧವರು ಅಣಿಯಾಗಿದ್ದಾರೆ.

ಕ್ರಿಸ್‌ಮಸ್‌ ಅಂಗವಾಗಿ ಎಲ್ಲ ಚರ್ಚ್‌ಗಳನ್ನು ಬಗೆಬಗೆಯ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಒಂದು ಮತ್ತೊಂದನ್ನು ಮೀರಿಸುವಂತೆ ಕ್ರಿಸ್‌ಮಸ್‌ ಟ್ರೀ, ಕ್ರಿಯಾತ್ಮಕ ಗೋದಲಿಗಳನ್ನು ಸ್ಥಾಪಿಸಲಾಗಿದೆ. ಕ್ರೈಸ್ತ ಬಾಂಧವರ ಮನೆ–ಮನಗಳಲ್ಲೂ ಬೆಳಕು ಮೂಡಿದೆ.

ತಿಂಗಳ ಆಚರಣೆ: ನಗರದ ವಿಜಯ ವಿದ್ಯಾಲಯದ ಬಳಿಯ ಮೆಥೋಡಿಸ್ಟ್‌ ಚರ್ಚ್‌ನ ಗಿಡ, ಮರ, ಗೋಡೆ, ಕಟ್ಟಡ ಆದಿಯಾಗಿ ಇಡೀ ಆವರಣ ವಿದ್ಯುತ್ ದೀಪಗಳ ಮಿನುಗಿನಲ್ಲಿ ಹೊಳೆಯುತ್ತಿದೆ.

ADVERTISEMENT

‘ಕ್ರಿಸ್‌ಮಸ್‌ ನಮ್ಮ ಪಾಲಿಗೆ ಆಚರಣೆ. ಅದರಲ್ಲಿ ಕ್ಯಾರಲ್ಸ್ ಹಾಡುವಿಕೆ, ಮನೆ–ಮನೆಗೆ ಯೇಸುವಿನ ಶುಭ ಸಂದೇಶ ತಲುಪಿಸುವುದು, ಮನೆಗಳು, ಚರ್ಚ್‌ಗಳ ಸಿಂಗಾರ, ಗೋದಲಿಗಳ ನಿರ್ಮಾಣ, ವಿಶೇಷ ಪ್ರವಚನಗಳು ನಡೆಯುತ್ತವೆ’ ಎಂದು ಕಲಬುರಗಿಯ ಕ್ರೈಸ್ತ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ನ ಹಿರಿಯ ಸಭಾಪಾಲಕ ಹಾಗೂ ಜಿಲ್ಲಾ ಮೇಲ್ವಿಚಾರಕ ರೆವರೆಂಡ್‌ ಎಸ್‌.ಮನೋಶಾಂತ ಹೇಳಿದರು.

‘ಕ್ರಿಸ್‌ಮಸ್‌ ದಿನ ಹಾಗೂ ಅದಕ್ಕೂ ಹಿಂದಿನ ನಾಲ್ಕು ಭಾನುವಾರಗಳಂದು ಒಂದೊಂದು ಬಣ್ಣದ ಮೊಂಬತ್ತಿ ಬೆಳಗಿ ಪ್ರಾರ್ಥಿಸಲಾಗುತ್ತದೆ. ಮೊದಲ ಭಾನುವಾರ ಯೇಸುಸ್ವಾಮಿ ಭುವಿಯ ಭರವಸೆ ಎಂಬ ಸಂಕೇತವಾಗಿ ಕೆನ್ನೀಲಿ ಬಣ್ಣದ ಕ್ಯಾಂಡಲ್‌ ಬೆಳಗಲಾಗುತ್ತದೆ. 2ನೇ ಭಾನುವಾರ ಯೇಸು ಜಗದ ಶಾಂತಿಯ ಧ್ಯೋತಕವಾಗಿ ನೇರಳೆ ಬಣ್ಣದ ಮೊಂಬತ್ತಿ ಬೆಳಗಿ ಪ್ರಾರ್ಥಿಸಲಾಗುತ್ತದೆ. 3ನೇ ಭಾನುವಾರ ಸಂತೋಷದ ಸಂಕೇತವಾಗಿ ಗುಲಾಬಿ ಬಣ್ಣದ ಮೊಂಬತ್ತಿ ಬೆಳಗಲಾಗುತ್ತದೆ. ನಾಲ್ಕನೇ ಭಾನುವಾರ ಯೇಸು ವಿಶ್ವದ ಜನರನ್ನು ಪ್ರೀತಿಸಿದ ದ್ಯೋತಕವಾಗಿ ಕೆಂಪು ಬಣ್ಣದ ಕ್ಯಾಂಡಲ್‌ ಬೆಳಗಿಸಲಾಗುತ್ತದೆ’ ಎಂದರು.

‘ಕ್ರಿಸ್‌ಮಸ್‌ ದಿನ ವಿಶೇಷ ಪ್ರಾರ್ಥನೆ, ಹಬ್ಬದ ಸಂದೇಶಗಳ ವಿನಿಮಯ, ಕೇಕ್‌ ವಿತರಣೆಯ ಜೊತೆಗೆ ಯೇಸು ಈ ಲೋಕಕ್ಕೆ ಬೆಳಕಾಗಿ ಹಾಗೂ ಪರಿಶುದ್ಧತೆಯ ದ್ಯೋತಕವಾಗಿ ಬಂದಿದ್ದನ್ನು ಸಾರಲು ಶ್ವೇತಬಣ್ಣದ ಮೊಂಬತ್ತಿ ಬೆಳಗಿಸಿ ಪ್ರಾರ್ಥಿಸಲಾಗುತ್ತದೆ’ ಎಂದು ಮನೋಶಾಂತ ಅವರು ವಿವರಿಸಿದರು.

ರಾತ್ರಿಯೇ ಸಂಭ್ರಮ:

ವಿದ್ಯುತ್‌ ದೀಪಗಳ ಚಿತ್ತಾರದಲ್ಲಿ ಮಿಂದೆದ್ದಿರುವ ನಗರದ ಶರಣಬಸವೇಶ್ವರ ದೇವಸ್ಥಾನ ರಸ್ತೆಯ ದೈವಾನುಗ್ರಹ ಮಾತೆಯ ಪ್ರಧಾನಾಲಯದಲ್ಲಿ ಬುಧವಾರ ರಾತ್ರಿ 10.30ರಿಂದಲೇ ಕ್ರಿಸ್‌ಮಸ್‌ ಆಚರಣೆಗೆ ಅಧಿಕೃತ ಚಾಲನೆ ದೊರೆತಿದೆ.

‘ಬುಧವಾರ ರಾತ್ರಿ 10.30ರಿಂದ ಕ್ರಿಸ್‌ಮಸ್‌ ರಾಗ ಹಾಡು ನಡೆಯಿತು. ರಾತ್ರಿ 11 ಗಂಟೆಗೆ ವಿಶೇಷ ಪೂಜೆ, ಪ್ರಾರ್ಥನೆಗಳು ಆರಂಭವಾದವು. ರಾತ್ರಿ 12 ಗಂಟೆಗೆ ಬಾಲ ಯೇಸುವಿನ ಗೋದಲಿ ಉದ್ಘಾಟಿಸಲಾಯಿತು. ಬಳಿಕ ಕಲಬುರಗಿ ಧರ್ಮಪೀಠದ ಧರ್ಮಾಧ್ಯಕ್ಷ ರಾಬರ್ಟ್‌ ಮೈಕಲ್‌ ಮಿರಾಂಡಾ ಅವರು ವಿಶ್ವಶಾಂತಿ, ಭ್ರಾತೃತ್ವಕ್ಕಾಗಿ ಶ್ರಮಿಸಿದ ಕರುಣೆ, ಪ್ರೀತಿಯ ಉಣಬಡಿಸಿದ ಯೇಸುವಿನ ಕುರಿತು, ಕ್ರಿಸ್‌ಮಸ್‌ ಕುರಿತು ಶುಭ ಸಂದೇಶ ನೀಡುವರು. ಬಲಿಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕ್ರಿಸ್‌ಮಸ್‌ ಹಬ್ಬದ ದಿನವಾದ ಗುರುವಾರ ಬೆಳಿಗ್ಗೆ 9 ಗಂಟೆಯಿಂದಲೇ ಕ್ರೈಸ್ತ ಬಾಂಧವರು ಚರ್ಚ್‌ಗೆ ಧಾವಿಸಿ ಯೇಸು ವಿಶ್ವಶಾಂತಿ, ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಲಿದ್ದಾರೆ’ ಎಂದು ದೈವಾನುಗ್ರಹ ಮಾತೆಯ ಪ್ರಧಾನಾಲಯದ ಮುಖ್ಯಗುರು ರೆವರೆಂಡ್‌ ಜೋಸೆಫ್‌ ಪ್ರವೀಣ್ ಹೇಳಿದರು.

ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕಲಬುರಗಿಯ ಸೇಂಟ್‌ ಮೇರಿ ಚರ್ಚ್‌ ಆವರಣ ಬುಧವಾರ ವಿದ್ಯುತ್‌ ದೀಪಗಳ ಚಿತ್ತಾರದಲ್ಲಿ ಮಿಂದೆದ್ದಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
‌ಕಲಬುರಗಿಯ ಸೇಂಟ್‌ಮೇರಿ ಚರ್ಚ್‌ನಲ್ಲಿ ಸ್ಯಾಕ್ಸೋಫೋನ್‌ ನುಡಿಸುತ್ತಿರುವ ಸಾಂತಾ ಕ್ಲಾಸ್‌ ರೂಪಕ... ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ರೆವರೆಂಡ್‌ ಎಸ್‌.ಮನೋಶಾಂತ
ಕ್ರಿಸ್‌ಮಸ್‌ ಆಚರಣೆಗೆ ತಿಂಗಳದ ಸಿದ್ಧತೆ ನಡೆಯುತ್ತದೆ. ಬರೀ ಕಟ್ಟಡಗಳ ಸಿಂಗಾರವಲ್ಲದೇ ಧಾರ್ಮಿಕ ಶ್ರದ್ಧೆ ನಿಷ್ಕಲ್ಮಶ ಪ್ರಾರ್ಥನೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ
ಫಾದರ್‌ ಎಸ್‌.ಮನೋಶಾಂತ ಹಿರಿಯ ಸಭಾಪಾಲಕ ಕ್ರೈಸ್ತ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.