ADVERTISEMENT

SC, ST ನಿಗಮದ ಅಧ್ಯಕ್ಷೆ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:54 IST
Last Updated 13 ಜುಲೈ 2025, 2:54 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ‘ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹಾಗೂ ಕೊರಮ, ಕೊರಚ ಸಮುದಾಯದ ಮುಖಂಡರಾದ ಪ್ರಭಾವತಿ ಅವರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜುಲೈ 14ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ಈರಣ್ಣ ಭಜಂತ್ರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಅಂದು ಜಗತ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಪರಿಶಿಷ್ಟ ಜಾತಿಯಲ್ಲಿ 51 ಅಲೆಮಾರಿ ಸಮುದಾಯಗಳಿವೆ. ಆದರೆ, ಮಾಜಿ ಸಚಿವ ಎಚ್‌.ಆಂಜನೇಯ ಅವರು ಕೊರಮ ಮತ್ತು ಕೊರಚ ಸಮುದಾಯಗಳನ್ನು ಹೊರಗಿಟ್ಟು ಜುಲೈ 5ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಪಲ್ಲವಿ ಅವರು ಸಭೆಯಲ್ಲಿ ಹೇಳಿದ್ದಾರೆ. ಆಗ ಮಾಜಿ ಸಚಿವ ಆಂಜನೇಯ ಅವರು ಸಭೆಯಿಂದ ಹೊರ ಹೋಗಿ ಎಂದು ಪಲ್ಲವಿಯವರಿಗೆ ಹೇಳಿ ಅಪಮಾನ ಮಾಡಿದ್ದಾರೆ’ ಎಂದು ಹೇಳಿದರು.

‘ಬಿಜೆಪಿಯಲ್ಲಿರುವ ಅಲೆಮಾರಿ ಜನಾಂಗದ ಲೋಹಿತಾಕ್ಷ, ವೀರೇಶ, ಶಿವ, ಲೋಕೇಶ, ಬಸವರಾಜ, ಶಾಂತಕುಮಾರ ಮತ್ತು ಸುಭಾಷ ಚವಾಣ್ ಎಸ್‌ಸಿ ಮತ್ತು ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ರಕ್ಷಣೆಗೆ ಧಾವಿಸಿದ ಪ್ರಭಾವತಿ ಅವರ ಜೊತೆಗೂ ಗೂಂಡಾಗಳಂತೆ ವರ್ತಿಸಿದ್ದಾರೆ’ ಎಂದರು.

‘ಏಳು ಜನರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕಣ್ಣೆದುರೇ ಇಂಥ ಘಟನೆ ನಡೆಯುತ್ತಿದ್ದರೂ ಅದನ್ನು ತಡೆಯದ ಆಂಜನೇಯ ಅವರನ್ನು ಕೆಪಿಸಿಸಿ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘದ ಕಲಬುರಗಿ ಉಸ್ತುವಾರಿ ಮಂಜುಳಾ ಭಜಂತ್ರಿ, ಕೊರಮ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಿ.ಟಿ.ಜಾಧವ, ಮುಖಂಡರಾದ ಶರಣಬಸಪ್ಪ ಭಜಂತ್ರಿ, ಮಹಾದೇವಿ ಭಜಂತ್ರಿ, ಸಾಯಬಣ್ಣ, ಶ್ರೀಮಂತ ಜಾಧವ ಹಾಗೂ ಮಲ್ಲೇಶಿ ಭಜಂತ್ರಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.