ADVERTISEMENT

ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ‌ಖರ್ಗೆ ನೇಮಕ; ತವರು ಜಿಲ್ಲೆಯಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 7:30 IST
Last Updated 12 ಫೆಬ್ರುವರಿ 2021, 7:30 IST
ಎಂ. ಮಲ್ಲಿಕಾರ್ಜುನ ‌ಖರ್ಗೆ
ಎಂ. ಮಲ್ಲಿಕಾರ್ಜುನ ‌ಖರ್ಗೆ   

ಕಲಬುರ್ಗಿ: ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ‌ಎಂ. ಮಲ್ಲಿಕಾರ್ಜುನ ‌ಖರ್ಗೆ ಅವರು ‌ರಾಜ್ಯಸಭೆ ವಿರೋಧ ಪಕ್ಷದ ‌ನಾಯಕರಾಗಿ ಆಯ್ಕೆಯಾದ ಪ್ರಯುಕ್ತ ‌ತವರು ಜಿಲ್ಲೆ ಕಲಬುರ್ಗಿಯಲ್ಲಿ ಹರ್ಷ ಮನೆ ಮಾಡಿದೆ.

1972ರಲ್ಲಿ ಅಂದಿನ ಅವಿಭಜಿತ ಕಲಬುರ್ಗಿ ಜಿಲ್ಲೆಯ ಗುರುಮಠಕಲ್ (ಇಂದು ಯಾದಗಿರಿ ಜಿಲ್ಲೆ) ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಖರ್ಗೆ ಅವರು ಹಿಂತಿರುಗಿ ನೋಡಲೇ ‌ಇಲ್ಲ. ಸತತ ಒಂಬತ್ತು ಬಾರಿ ವಿಧಾನಸಭಾ ‌ಸದಸ್ಯರಾಗಿ ಆಯ್ಕೆಯಾದರು.

ದೇವರಾಜ ಅರಸು, ಎಂ. ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ, ಎಸ್. ಬಂಗಾರಪ್ಪ, ಎನ್. ಧರ್ಮಸಿಂಗ್ ಸಂಪುಟದಲ್ಲಿ ಗೃಹ, ಕಂದಾಯ, ಸಮಾಜ ಕಲ್ಯಾಣ, ಸಾರಿಗೆ, ಶಿಕ್ಷಣ, ಸಣ್ಣ ನೀರಾವರಿ ಸೇರಿದಂತೆ ‌ವಿವಿಧ ಖಾತೆಗಳನ್ನು ‌ನಿರ್ವಹಿಸಿದ ಅನುಭವಿ.

ADVERTISEMENT

ಕೆಪಿಸಿಸಿ‌ ಅಧ್ಯಕ್ಷರಾಗಿ, ಎಐಸಿಸಿ ಪ್ರಧಾನ ‌ಕಾರ್ಯದರ್ಶಿಯಾಗಿ, ಮಹಾರಾಷ್ಟ್ರ ಪಕ್ಷದ ಉಸ್ತುವಾರಿಯಾಗಿ ಕೆಲಸ ಮಾಡಿರುವ ಖರ್ಗೆ ಅವರು ಗುಲಬರ್ಗಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಡಾ. ಮನಮೋಹನ್ ಸಿಂಗ್ ಸಂಪುಟದಲ್ಲಿ ಕಾರ್ಮಿಕ ಹಾಗೂ ನಂತರ ರೈಲ್ವೆ ‌ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕೇಂದ್ರದಲ್ಲಿ ‌ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಕಸಭೆಯಲ್ಲಿ ‌ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು.

ಕಳೆದ ಲೋಕಸಭಾ ‌ಚುನಾವಣೆಯಲ್ಲಿ ಬಿಜೆಪಿಯ ‌ಡಾ. ಉಮೇಶ ಜಾಧವ ಅವರ ಎದುರು ಪರಾಭವಗೊಂಡರು. ನಂತರ ಕಾಂಗ್ರೆಸ್ ‌ಹೈಕಮಾಂಡ್ ಅವರ ಪಕ್ಷ ನಿಷ್ಠೆಯನ್ನು ಗುರುತಿಸಿ ರಾಜ್ಯಸಭೆಗೆ ಆಯ್ಕೆ ಮಾಡಿತ್ತು.

ಖರ್ಗೆ ಅವರು ‌ಮೂಲತಃ ಬೀದರ್ ಜಿಲ್ಲೆ ವರವಟ್ಟಿ ಗ್ರಾಮದವರು. ಅವರ ತಂದೆ ಕಲಬುರ್ಗಿಯ ಎಂಎಸ್ ಕೆ ಮಿಲ್ ನಲ್ಲಿ‌‌ ಕಾರ್ಮಿಕರಾಗಿದ್ದರಿಂದ ಕಲಬುರ್ಗಿಯಲ್ಲೇ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.