ADVERTISEMENT

ಕಲಬುರಗಿ: ಪ್ರಿಯಾಂಕ್‌ ಖರ್ಗೆ ಪರವಾಗಿ ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:33 IST
Last Updated 17 ಅಕ್ಟೋಬರ್ 2025, 7:33 IST
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಕಲಬುರಗಿ: ಸರ್ಕಾರಿ ಶಾಲೆಗಳ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧಿಸುವಂತೆ ಕೋರಿ ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ ಬೆದರಿಸುತ್ತಿರುವುದನ್ನು ಖಂಡಿಸಿ ಗುರುವಾರವೂ ನಗರದ ವಿವಿಧೆಡೆ ಪ್ರತಿಭಟನೆಗಳು ನಡೆದವು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

‘ಸಚಿವ ಪ್ರಿಯಾಂಕ್‌ ಖರ್ಗೆ ಡಾ.ಅಂಬೇಡ್ಕರ್ ತತ್ವ–ಸಿದ್ಧಾಂತಗಳಲ್ಲಿ ಅಚಲ ನಂಬಿಕೆ ಇಟ್ಟವರು. ಜಾತಿರಹಿತ, ವರ್ಗರಹಿತ, ಶೋಷಣೆ ಮುಕ್ತ ಸಮಾಜ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಜಾತಿವಾದಿ–ದೇಶದ್ರೋಹಿಗಳು ಮಕ್ಕಳ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಂಘಟನೆಯ ಚಟುವಟಿಕೆಯನ್ನು ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ನಿರ್ಬಂಧಿಸುವಂತೆ ಪತ್ರ ಬರೆದಿದ್ದನ್ನೆ ನೆಪವಾಗಿಟ್ಟುಕೊಂಡು ಸಚಿವ ಪ್ರಿಯಾಂಕ್‌ ತೇಜೋವಧೆ, ವೈಯಕ್ತಿಕ ನಿಂದನೆ ನಡೆಸಲಾಗುತ್ತಿದೆ. ಇದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಮುಖಂಡ ಸುರೇಶ ಹಾದಿಮನಿ ಮಾತನಾಡಿ, ‘ಭಾರತ ಬುದ್ಧ, ಬಸವಣ್ಣನ ದೇಶ. ಡಾ.ಅಂಬೇಡ್ಕರ್‌ ಬರೆದ ಸಂವಿಧಾನ ಈ ದೇಶದ ಜೀವಾಳ.  100 ವರ್ಷಗಳನ್ನು ಪೂರೈಸಿರುವ ಆರ್‌ಎಸ್‌ಎಸ್‌ ಸಂವಿಧಾನ ಹಾಗೂ ಅಂಬೇಡ್ಕರ್‌ ವಿರುದ್ಧ ನಿರಂತರವಾಗಿ ಮಾತನಾಡುತ್ತ ಬಂದಿದೆ. ದೇಶ ಕಟ್ಟುವುದಾಗಿ ಮಾತನಾಡುವ ಆರ್‌ಎಸ್‌ಎಸ್‌, ಯುವಕರ ಕೈಯಲ್ಲಿ ಲಾಠಿ ಯಾಕೆ ಕೊಡುತ್ತೆ? ಪ್ರಬುದ್ಧ ಭಾರತ ಕಟ್ಟುವ ಮನಸ್ಸಿದ್ದರೆ ಯುವಜನರ ಕೈಯಲ್ಲಿ ಪುಸ್ತಕ ಕೊಡಬೇಕಿತ್ತಲ್ಲ’ ಎಂದು ಹೇಳಿದರು.

‘ಸಂವಿಧಾನ ತೆಗೆದು ಮನುಸ್ಮೃತಿ ತರುವುದು ಆರ್‌ಎಸ್‌ಎಸ್‌ ಹುನ್ನಾರ. ಹೀಗಾಗಿ ಸಂವಿಧಾನವನ್ನು ಪ್ರತಿಪಾದಿಸುವ ಸಚಿವ ಪ್ರಿಯಾಂಕ್‌ ಬೆಳವಣಿಗೆ ಸಹಿಸದೇ ಅವರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಲಾಗುತ್ತಿದೆ. ಸಮಾಜದಲ್ಲಿ ಕೆಟ್ಟ ಆಲೋಚನೆಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಪುಷ್ಟಿಕೊಡುತ್ತಿದೆ. ಕೂಡಲೇ ಈ ರಾಜ್ಯ ಹಾಗೂ ದೇಶದಿಂದ ಆರ್‌ಎಸ್‌ಎಸ್‌ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಬಳಿಕ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಮುಖಂಡರಾದ ಹಣಮಂತರಾವ ದೊಡ್ಡಮನಿ, ಬಿ.ಸಿ.ವಾಲಿ, ಅಂಬಣ್ಣ ಜೀವಣಗಿ, ಉಮೇಶ ನರೋಣ, ಮಹಾದೇವ ತರನಳ್ಳಿ, ಮಲ್ಲಣ್ಣ ಕೊಡಚಿ, ಸುಭಾಶ ಡಾಂಗೆ, ಶಿವಶರಣ ಮಾರಡಗಿ, ಮಹಾಲಿಂಗ ಅಂಗಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮಿಸ್ಬಾ ನಗರ:

ಕಲಬುರಗಿಯ ಎಂಎಸ್‌ಕೆ ಮಿಲ್ ಪ್ರದೇಶದ ಮಿಸ್ಬಾ ನಗರದ ಪ್ರದೇಶದಲ್ಲಿ ರಿಂಗ್‌ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಸಚಿವ ಪ್ರಿಯಾಂಕ್‌ ಖರ್ಗೆ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಲಾಯಿತು. ಈ ವೇಳೆ ಮುಖಂಡರಾದ ಉಬೇದ್‌ ಇನಾಮದಾರ, ಮಸೂದ್‌ ಅಸ್ಲಂಬೇಗ್, ಮಸೂದ್ ಖಾಲಿದ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕರೆ ಮಾಡಿದ ದುಷ್ಕರ್ಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಲಬುರಗಿಯ ಜಲಾಲ್‌ವಾಡಿ ದರ್ಗಾ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು

ಅಂಗಡಿ ಮುಚ್ಚಿ ಟೈರ್‌ ಸುಟ್ಟು ಆಕ್ರೋಶ 

ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧಿಸುವಂತೆ ಕೋರಿ ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಬೆಂಬಲಿಸಿ ಹಾಗೂ ಬೆದರಿಕೆ ಕರೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಲಬುರಗಿಯ ಜಲಾಲ್‌ವಾಡಿ ದರ್ಗಾ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್‌ ಅಲ್ಪಸಂಖ್ಯಾತ ಸಮಿತಿ ಜಿಲ್ಲಾಧ್ಯಕ್ಷ ನಯೀಮ್‌ ಖಾನ್ ಮತ್ತು ನಗರ ಅಧ್ಯಕ್ಷ ಅಜ್ಮಲ್ ಗೋಲಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಟೈರ್ ಸುಟ್ಟು ಘೋಷಣೆ ಮೊಳಗಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಮುಸ್ಲಿಮರು ಸೇರಿದಂತೆ ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಸ್ವಯಂ ಪ್ರೇರಣೆಯಿಂದ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಕುಡಾ ಅಧ್ಯಕ್ಷ ಮಜರ್ ಆಲಂಖಾನ್‌ ಮುಖಂಡರಾದ ಅಹ್ಮದ್‌ ಉಲ್ ಇಸ್ಲಾಂ ಜೈದ್ ಉಲ್ ಇಸ್ಲಾಂ ಸೇರಿದಂತೆ ಹಲವರು ಪಾಲ್ಗೊಡಿದ್ದರು.

ಕ್ರಮಕ್ಕೆ ಒತ್ತಾಯ

‘ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ ಕೋರಿ ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕರೆ ಮಾಡಿ ಬೆದರಿಕೆ ನೀಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಚರ್ಚೆಯ ಮಟ್ಟವನ್ನು ಬಹಳ ಕೀಳುಮಟ್ಟಕ್ಕೆ ಇಳಿಸಿ ವೈಯಕ್ತಿಕ ತೇಜೋವಧೆಗೆ ಯತ್ನಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ ಪಕ್ಷದ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಬಸಲಿಂಗ ಬಿರಾದಾರ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.