ADVERTISEMENT

ಬಾಂದಾರ: ಕಲುಷಿತ ನೀರು ಹೊರಕ್ಕೆ

ಉಸ್ತುವಾರಿ ಸಚಿವರಿಗೆ ಪ್ರಿಯಾಂಕ್ ಖರ್ಗೆ ಒತ್ತಡ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:45 IST
Last Updated 13 ಮೇ 2022, 2:45 IST
ಬಾಂದಾರಿನಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಹೊರಗೆ ಹರಿಸಿರುವುದು
ಬಾಂದಾರಿನಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಹೊರಗೆ ಹರಿಸಿರುವುದು   

ಚಿತ್ತಾಪುರ: ತಾಲ್ಲೂಕಿನ ಮುಡಬೂಳ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆಯಲ್ಲಿ ಸಂಗ್ರಹವಾಗಿದ್ದ ಕಲುಷಿತ ನೀರನ್ನು ಗುರುವಾರ ಹೊರಕ್ಕೆ ಹರಿಸಲಾಯಿತು.

ಕಳೆದ ಮಳೆಗಾಲ ಮತ್ತು ಚಳಿಗಾಲ ಮುಗಿಯುತ್ತಿದ್ದಂತೆ ನೀರು ಸಂಗ್ರಹಕ್ಕಾಗಿ ಸೇತುವೆಗೆ ಕಬ್ಬಿಣದ ಗೇಟ್ ಅಳವಡಿಸಲಾಗಿತ್ತು. ಆದರೆ ಬಾಂದಾರಿ ನಲ್ಲಿ ಸಂಗ್ರಹವಾಗಿದ್ದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿತ್ತು. ಈ ನೀರನ್ನು ಜನರು–ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿತ್ತು.

ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಲುಷಿತ ನೀರಿನ ಕುರಿತು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಚರ್ಚಿಸಿ, ಕಲುಷಿತ ನೀರು ಹೊರಹರಿಸಲು ಎಂದು ಒತ್ತಾಯಿಸಿದ್ದರು. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತುರ್ತಾಗಿ ಕಲುಷಿತ ನೀರನ್ನು ಹೊರಗೆ ಹರಿಸುತ್ತಿದ್ದಾರೆ.

ADVERTISEMENT

ಕಾಗಿಣಾ ನದಿಯೇ ಚಿತ್ತಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಜೀವಾಳ. ಪ್ರಸ್ತುತ ಮುಡಬೂಳ ಬಾಂದಾರಿನ ಕಲುಷಿತ ನೀರೇ, ಶುದ್ಧಿಕರಣ ಘಟಕಕ್ಕೆ ಪೂರೈಕೆಯಾಗುತ್ತಿದೆ. ಅಲ್ಲಿ ನೀರು ಶುದ್ಧಗೊಳಿಸುವಾಗ ಏರುಪೇರಾದರೆ ಅನಾರೋಗ್ಯದ ಆತಂಕ ಎದುರಾಗಿದೆ.

ಜನಜಾನುವಾರು ಆರೋಗ್ಯ ಕಾಪಾಡುವುದು ಆಡಳಿತದ ಮುಖ್ಯ ಜವಾಬ್ಧಾರಿ. ಹೀಗಾಗಿ ತುರ್ತಾಗಿ ನೀರು ಹೊರಕ್ಕೆ ಬಿಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಿಯಾಂಕ್ ಅವರು ಒತ್ತಾಯಿಸಿ ಕಲುಷಿತ ನೀರು ನದಿಗೆ ಹರಿದು ಹೋಗುವಂತೆ ಮಾಡಿದ್ದಾರೆ.

ಬೇಸಿಗೆಯಾಗಿದ್ದರಿಂದ ಬಿಸಿಲಿನ ಝಳ ಮತ್ತು ಅಶುದ್ಧ ಹಾಗೂ ಕಲುಷಿತ ನೀರು ಸೇವನೆಯಿಂದ ಜನರಿಗೆ ಅನಾರೋಗ್ಯ ಉಂಟಾಗುವುದು ಸಾಮಾನ್ಯ. ಈಗಾಗಲೇ ಪಟ್ಟಣದಲ್ಲಿ ಕೆಲವು ಜನರಿಗೆ ವಾಂತಿ–ಭೇದಿ ಹರಡಿದ್ದರಿಂದ ಮುನ್ನೆಚ್ಚರಿಕೆ ವಹಿಸಿ, ಜನರ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವ ಮುಂಚೆಯೆ ಶಾಸಕ ಪ್ರಿಯಾಂಕ್ ಅವರು ಆಡಳಿತಕ್ಕೆ ಚುರುಕೊಗೊಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.