ADVERTISEMENT

ಬೆಳೆ ನಷ್ಟ ಸರ್ವೆ ಶೀಘ್ರ ಪೂರ್ಣಗೊಳಿಸಲು ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:09 IST
Last Updated 26 ಆಗಸ್ಟ್ 2022, 16:09 IST
ಕಲಬುರಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಶಶೀಲ್ ಜಿ. ನಮೋಶಿ, ದತ್ತಾತ್ರೇಯ ಪಾಟೀಲ ರೇವುರ, ಯಶವಂತ ವಿ. ಗುರುಕರ್, ಡಾ. ಅವಿನಾಶ್ ಜಾಧವ್, ಬಿ.ಜಿ. ಪಾಟೀಲ, ಡಾ. ಗಿರೀಶ್ ಡಿ. ಬದೋಲೆ ಇದ್ದರು
ಕಲಬುರಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಶಶೀಲ್ ಜಿ. ನಮೋಶಿ, ದತ್ತಾತ್ರೇಯ ಪಾಟೀಲ ರೇವುರ, ಯಶವಂತ ವಿ. ಗುರುಕರ್, ಡಾ. ಅವಿನಾಶ್ ಜಾಧವ್, ಬಿ.ಜಿ. ಪಾಟೀಲ, ಡಾ. ಗಿರೀಶ್ ಡಿ. ಬದೋಲೆ ಇದ್ದರು   

ಕಲಬುರಗಿ: ‘ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಆ ಬಗ್ಗೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸರ್ವೆ ಕಾರ್ಯ ಶೀಘ್ರ ಪೂರ್ಣಗೊಳಿಸಿ ವರದಿ ನೀಡಿದರೆ, ಸರ್ಕಾರ ತಕ್ಷಣ ಪರಿಹಾರ ನೀಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ನಗರದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಬರಲು ಸಿದ್ಧವಿದೆ. ಹೀಗಾಗಿ, ತುರ್ತಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಅನಸೂಯಾ ಹೂಗಾರ ಅವರಿಗೆ ಸೂಚಿಸಿದರು.

ಶಾಸಕ ಡಾ. ಅವಿನಾಶ್ ಜಾಧವ್ ಮಾತನಾಡಿ, ‘ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸುತ್ತಿರುವ ಯೂನಿವರ್ಸಲ್ ಸೋಂಪೊ ವಿಮಾ ಕಂಪನಿ ಸಿಬ್ಬಂದಿ ರೈತರ ಕರೆ ಸ್ವೀಕರಿಸುವುದಿಲ್ಲ ಎಂಬ ಆರೋಪವಿದೆ. ಇದಕ್ಕೆ ಕಾರಣ ಕೊಡಿ’ ಎಂದು ಕಂಪನಿ ಪ್ರತಿನಿಧಿಗೆ ಸೂಚಿಸಿದರು.

ADVERTISEMENT

ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ನಿರಾಣಿ, ‘ರೈತರ ಬೆಳೆ ವಿಮೆ ವಿಷಯದಲ್ಲಿ ಕಂಪನಿ ಪ್ರತಿನಿಧಿಗಳು ನಿರ್ಲಕ್ಷಿಸಬಾರದು. ರೈತರ ಕರೆಗೆ ಸ್ಪಂದಿಸಬೇಕು. ಅಧಿಕಾರಿಗಳೊಂದಿಗೆ ಬೆಳೆ ಹಾನಿ ಸರ್ವೆಗೆ ತಂಡವನ್ನು ಕಳಿಸಬೇಕು’ ಎಂದರು.

ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯು ಮೊದಲ 10 ಸ್ಥಾನಗಳಲ್ಲಿ ಇರುವಂತೆ ನೋಡಿಕೊಳ್ಳುವಂತೆ ಮುರುಗೇಶ ನಿರಾಣಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಅವರಿಗೆ ಸೂಚಿಸಿದರು.

‘ಹೊಸದಾಗಿ 15 ಸಾವಿರ ಶಿಕ್ಷಕ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಅದರ ಜೊತೆಗೆ ಅತಿಥಿ ಶಿಕ್ಷಕರ ನೇಮಕಾತಿಗೂ ಅನುಮತಿ ನೀಡಲಾಗಿದೆ. ಸುಸಜ್ಜಿತ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಏನಾದರೂ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ನಿತ್ಯ ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಕ್ರೆಪ್ಪಗೌಡ, ‘ರಾಜ್ಯ ಸರ್ಕಾರ ಶಾಲಾ ವಿದ್ಯಾರ್ಥಿಗಳ ಶೂ ಹಾಗೂ ಸಾಕ್ಸ್‌ ಖರೀದಿಗೆ ಹಣ ಬಿಡುಗಡೆ ಮಾಡಿದೆ. ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಭೆ ನಡೆಸುವೆ’ ಎಂದರು.

ಹಾಲಿನ ಉತ್ಪನ್ನ ಹೆಚ್ಚಿಸಿ: ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳನ್ನೊಳಗೊಂಡ ರೈತರ ಸಹಕಾರ ಹಾಲು ಒಕ್ಕೂಟವು ನಿತ್ಯ 55 ಸಾವಿರ ಲೀಟರ್ ಖರೀದಿಸುತ್ತದೆ. ಇದು ಬಹಳ ಕಡಿಮೆಯಾಯಿತು. ಕಲಬುರಗಿಗಿಂತ ಚಿಕ್ಕ ಜಿಲ್ಲೆಯಾಗಿರುವ ಕೋಲಾರದಲ್ಲಿ ನಿತ್ಯ 4.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಲ್ಲಿಯೂ ಹಾಲಿನ ಖರೀದಿ ಪ್ರಮಾಣವನ್ನು ಹೆಚ್ಚಿಸಿರಿ ಎಂದು ಸಚಿವರು ಒಕ್ಕೂಟದ ಪರವಾಗಿ ಹಾಜರಾಗಿದ್ದ ಅಧಿಕಾರಿಗೆ ಸೂಚಿಸಿದರು.

ಎಮ್ಮೆ ಹಾಲನ್ನು ಕೊಟ್ಟರೂ ಅದನ್ನು ಆಕಳ ಹಾಲು ಎಂದು ಕೆಎಂಎಫ್‌ ಅಧಿಕಾರಿಗಳು ಪರಿಗಣಿಸುತ್ತಾರೆ. ನಾನೇ ಸ್ವತಃ ಎಮ್ಮೆ ಹಾಲು ಕೊಟ್ಟರೂ ಅದನ್ನು ಏಕೆ ಆಕಳ ಹಾಲೆಂದು ಪರಿಗಣಿಸುತ್ತೀರಿ ಎಂದು ಶಾಸಕ ಸುಭಾಷ್ ಗುತ್ತೇದಾರ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಹಾಲಿನಲ್ಲಿರುವ ಫ್ಯಾಟ್ ಪ್ರಮಾಣ ನಿಗದಿತ ಮಿತಿಗಿಂತ ಕಡಿಮೆ ಇದ್ದರೆ ಅದನ್ನು ಆಕಳ ಹಾಲು ಎಂದು ಪರಿಗಣಿಸುತ್ತೇವೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ಸರ್ಕಾರದಿಂದ ನೀಡಲಾಗುವ ಪ್ರೋತ್ಸಾಹಧನ ಸೇರಿಸಿ ₹ 33ರಂತೆ ಹಾಲು ಉತ್ಪಾದಕರ ಖಾತೆಗೆ ಜಮಾ ಮಾಡುತ್ತೇವೆ ಎಂದರು.

‘ಎಷ್ಟೇ ಆಕಳಿದ್ದರೂ ನನ್ನ ಮನೆಗೆ ಕರೆತನ್ನಿ’

ಕೆಡಿಪಿ ಸಭೆಯಲ್ಲಿ ವರದಿ ಮಂಡಿಸಿದ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ಸರ್ಕಾರವು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಆಕಳ ಸಂರಕ್ಷಣೆಗೆ ಯಾರು ಬೇಕಾದರೂ ಆಕಳನ್ನು ದತ್ತು ಪಡೆಯಬಹುದಾಗಿದೆ. ಅವುಗಳನ್ನು ವಿವಿಧ ಗೋಶಾಲೆಯಲ್ಲಿ ಇರಿಸಲಾಗಿದ್ದು, ವರ್ಷಕ್ಕೆ ₹ 11 ಸಾವಿರ ಪಾವತಿಸಿ ದತ್ತು ಪಡೆಯಬಹುದು ಎಂದರು.

ಸಚಿವ ಮುರುಗೇಶ ನಿರಾಣಿ ತಾವು ಐದು ಆಕಳನ್ನು ಪಡೆಯುವುದಾಗಿ ಪ್ರಕಟಿಸಿದರು. ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ 11, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ಹಾಗೂ ಶಶೀಲ್ ಜಿ. ನಮೋಶಿ ತಲಾ ಐದು ಆಕಳನ್ನು ದತ್ತು ಪಡೆಯುವುದಾಗಿ ಘೋಷಿಸಿದರು. ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರು ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ಸಚಿವರು ಹಾಗೂ ಅಧಿಕಾರಿಗಳು ಕುತೂಹಲದಿಂದ ಕಾಯುತ್ತಿದ್ದಾಗ ಎಷ್ಟು ಬೇಕಾದರೂ ಆಕಳನ್ನು ತಂದು ನನ್ನ ಮನೆಗೆ ಬಿಡಿ. ಸಾಕಷ್ಟು ಜಾಗವಿದೆ, ಸಾಕುತ್ತೇನೆ ಎಂದು ಹೇಳಿದರು!

ಉದ್ಯಮಿಗಳು, ವ್ಯಾಪಾರಸ್ಥರು ಸಹ ದತ್ತು ಪಡೆಯಬಹುದಾಗಿದ್ದು, ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ ಬರೆಯಿರಿ ಎಂದು ಸಚಿವ ನಿರಾಣಿ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ಶಿಷ್ಟಾಚಾರ ಉಲ್ಲಂಘನೆ!
ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿ.ಪಂ. ಅಧ್ಯಕ್ಷರು, ಸಂಪುಟ ದರ್ಜೆಯ ಸ್ಥಾನಮಾನ ಪಡೆದ ನಿಗಮ, ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ಆದರೆ, ಶಾಸಕರಾದ ಸುಭಾಷ್ ಗುತ್ತೇದಾರ, ಡಾ. ಅವಿನಾಶ್ ಜಾಧವ್, ವಿಧಾನಪರಿಷತ್ ಸದಸ್ಯರಾದ ಸುನೀಲ್ ವಲ್ಯಾಪುರೆ, ಶಶೀಲ್ ನಮೋಶಿ, ಬಿ.ಜಿ. ಪಾಟೀಲ ಹಾಗೂ ಕುರಿ, ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ವೇದಿಕೆಯಲ್ಲಿ ಕುಳಿತುಕೊಳ್ಳುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದರು.

ಕೆಡಿಪಿ ಸಭೆಯ ಶಿಷ್ಟಾಚಾರದ ಬಗ್ಗೆ ವಿವರಿಸಲು ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿ.ಪಂ. ಸಿಇಒ ಡಾ. ಗಿರೀಶ್ ಡಿ. ಬದೋಲೆ ಮುಂದಾಗಲಿಲ್ಲ. ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ವೇದಿಕೆ ಮುಂಭಾಗದಲ್ಲಿ ಆಸನಗಳನ್ನು ಕಾಯ್ದಿರಿಸಲಾಗಿತ್ತು. ಆದರೆ, ಸಚಿವರು ಬರುತ್ತಿದ್ದಂತೆಯೇ ವಿಧಾನಪರಿಷತ್ ಸದಸ್ಯರೂ ವೇದಿಕೆ ಏರಿದರು.

ವೇದಿಕೆಯಲ್ಲಿ ಅವಕಾಶವಿಲ್ಲದಿದ್ದರೂ ವೇದಿಕೆಗೆ ಬಂದ ಸುಭಾಷ್ ಗುತ್ತೇದಾರ ಅವರಿಗಾಗಿ ಸಭೆ ನಿರ್ವಹಿಸುತ್ತಿದ್ದ ಸಿಇಒ ಡಾ. ಗಿರೀಶ್ ತಮ್ಮ ಕುರ್ಚಿ ಬಿಟ್ಟುಕೊಟ್ಟು ಪಕ್ಕದಲ್ಲಿ ಕುಳಿತರು.

ಕಳೆದ ಬಾರಿ ನಡೆದ ಕೆಡಿ‍‍ಪಿ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಅವರಿಗೆ ವೇದಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಆಸನ ಇರಬೇಕಿದ್ದರೂ ಆಸನ ಇರಲಿಲ್ಲ. ಹೀಗಾಗಿ, ಪ್ರತಿಭಟನಾರ್ಥವಾಗಿ ವೇದಿಕೆಯ ಕೆಳಗಡೆ ಕುಳಿತಿದ್ದರು. ಇದನ್ನು ಸಭೆಯಲ್ಲಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದಾಗ ಸಿಂಗ್ ಅವರಿಗೆ ವೇದಿಕೆಗೆ ಕರೆಯಲಾಯಿತು.

**
ಖಾಸಗಿ ವಿಮಾ ಸಂಸ್ಥೆ ಯೂನಿವರ್ಸಲ್ ಸೋಂಪೊ ರೈತರಿಗೆ ಸ್ಪಂದಿಸುತ್ತಿಲ್ಲ ಎಂದ ಮೇಲೆ ಬೆಳೆ ವಿಮೆ ಮಾಡಿಸುವ ಹೊಣೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ವಹಿಸಲು ಏನಡ್ಡಿ?
-ಬಿ.ಜಿ. ಪಾಟೀಲ,ವಿಧಾನಪರಿಷತ್ ಸದಸ್ಯ

*

ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಮಾಡುವ ಬಗ್ಗೆ ಜಿಲ್ಲೆಯ ಅಧಿಕಾರಿಗಳು ಎಂದಾದರೂ ಬೆಂಗಳೂರಿಗೆ ಹೋಗಿ ಇಲಾಖೆ ಆಯುಕ್ತರೊಂದಿಗೆ ಮಾತನಾಡಿದ್ದೀರಾ? ಎಲ್ಲ ಕೆಲಸ ನಮಗೆ ವಹಿಸಿದರೆ ಹೇಗೆ?
-ರಾಜಕುಮಾರ ಪಾಟೀಲ ತೇಲ್ಕೂರ,ಕೆಕೆಆರ್‌ಟಿಸಿ ಅಧ್ಯಕ್ಷ, ಶಾಸಕ

*

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಡಿಡಿಪಿಐ, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ನಿರಂತರವಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸಚಿವ ನಿರಾಣಿ ಅವರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು
-ಶಶೀಲ್ ಜಿ. ನಮೋಶಿ,ವಿಧಾನಪರಿಷತ್ ಸದಸ್ಯ

*

ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ, ಸಮುದಾಯ ಆರೋಗ್ಯ ಕೇಂದ್ರಗಳನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಅಗತ್ಯ ಸಿಬ್ಬಂದಿ ಮಂಜೂರಾಗಿಲ್ಲ
-ಡಾ. ರಾಜಶೇಖರ ಮಾಲಿ,ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.