
ಕಲಬುರಗಿ: ಅತಿವೃಷ್ಟಿ ಮತ್ತು ನೆರೆಯಿಂದ ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಘೋಷಣೆ ಮಾಡಿದಂತೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.
ಸಂಪೂರ್ಣ ಬೆಳೆಹಾನಿ ಸಂಭವಿಸಿದ್ದರೂ ಕಡಿಮೆ ಪ‍್ರಮಾಣದಲ್ಲಿ ಹಾನಿ ತೋರಿಸಿ ಪರಿಹಾರ ಮೊತ್ತದಲ್ಲಿ ಕಡಿತ ಮಾಡಲಾಗಿದೆ ಎಂದು ಹಲವು ರೈತರು ದೂರುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸೆ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಯಂತೆ ₹8,500 ಜೊತೆಗೆ ರಾಜ್ಯ ಸರ್ಕಾರದಿಂದ ಪ್ರತ್ಯೇಕವಾಗಿ ಹೆಚ್ಚುವರಿಯಾಗಿ ₹8,500 ಸೇರಿ ₹17,000, ನೀರಾವರಿ ಬೆಳೆಗಳಿಗೆ ₹17,000 + ₹8,500 ಸೇರಿ ₹25,500 ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ₹22,500 + ₹8,500 ಸೇರಿ ₹31,000 ಪರಿಹಾರ ನೀಡ ಲಾಗುವುದು ಎಂದು ಮುಖ್ಯಮಂತ್ರಿ ಕಲಬುರಗಿಯಲ್ಲಿ ಘೋಷಿಸಿದ್ದರು.
ರಾಜ್ಯದಲ್ಲಿ 12.11 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಎಸ್‌ಡಿಆರ್‌ಎಫ್/ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ₹1,218.03 ಕೋಟಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದಿಂದ ₹1,033.60 ಕೋಟಿ ಬೆಳೆ ಪರಿಹಾರ ವಿತರಿಸಲು ಈಚೆಗೆ ಚಾಲನೆ ನೀಡಲಾಗಿತ್ತು.
ಬ್ಯಾಂಕ್ ಖಾತೆಗಳ ಸಮಸ್ಯೆಯಿಂದ ಕೆಲ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈಗ ಪಾವತಿ ಆಗಿರುವ ಪ್ರಕರಣಗಳಲ್ಲೂ ರೈತರ ಖಾತೆಗಳಿಗೆ ಸರ್ಕಾರ ಘೋಷಿಸಿದಂತೆ ಪೂರ್ಣಪ್ರಮಾಣದಲ್ಲಿ ಪರಿಹಾರ ಜಮೆ ಆಗಿಲ್ಲ ಎಂಬುದು ರೈತ ಮುಖಂಡರ ಆರೋಪ.
ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಪರಿಹಾರ ಮತ್ತು ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ ಪರಿಹಾರದ ಹಣ ಪ್ರತ್ಯೇಕ ಕಂತಿನಲ್ಲಿ ರೈತರ ಖಾತೆಗಳಿಗೆ ಜಮಾ ಆಗಿದೆ. ಹೆಚ್ಚಿನ ರೈತರ ಖಾತೆಗಳಿಗೆ ಹೆಕ್ಟೇರ್‌ಗೆ ಎರಡೂ ಕಂತು ಸೇರಿ ₹6,800, ₹10,200, ₹13,600 ಪರಿಹಾರ ಜಮೆ ಆಗಿದೆ ಎಂದು ರೈತರು ದೂರಿದ್ದಾರೆ.
ರೈತರು ಪರಿಹಾರಕ್ಕಾಗಿ ಪಹಣಿ ಮತ್ತು ಬ್ಯಾಂಕ್ ಪಾಸ್‌ಬುಕ್ ಪ್ರತಿ ಹಿಡಿದು ಕೃಷಿ ಇಲಾಖೆ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ‘ಎರಡು ಎಕರೆ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಪರಿಹಾರಕ್ಕಾಗಿ ಹಾದಿ ಕಾಯುತ್ತಿದ್ದೇವೆ’ ಎಂದು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಕೂಬಿಹಾಳದ ಪರಮೇಶ ಹುಬ್ಬಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಮ್ಮದು 4 ಎಕರೆ 22 ಗುಂಟೆ ಜಮೀನು ಇದೆ. ಇನ್ನೂ ಪರಿಹಾರ ಬಂದಿಲ್ಲ’ ಎಂದು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಕಲಗುರ್ತಿಯ ಲಕ್ಕಪ್ಪ ಅಲವತ್ತುಕೊಂಡರು.
‘ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು, ಬೆಳೆಹಾನಿ ಆಗಿರುವಷ್ಟಕ್ಕೆ ಮಾರ್ಗಸೂಚಿ ಅನ್ವಯ ಪರಿಹಾರ ಮೊತ್ತ ವಿತರಿಸಲಾಗುತ್ತಿದೆ’ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಯಾದಗಿರಿ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.