ಕಲಬುರಗಿ: ಆಧುನಿಕ ತಂತ್ರಜ್ಞಾನದ ವೇಗದಲ್ಲಿಯೇ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ವಂಚಕರ ‘ಗಾಳ’ ಬಲಗೊಳ್ಳುತ್ತಿದೆ. ಹಣ ಕಳೆದುಕೊಂಡು ಕೈ ಕೈ ಹಿಸುಕಿಕೊಳ್ಳುತ್ತ ಪೊಲೀಸ್ ಠಾಣೆಗಳಿಗೆ ಎಡತಾಕುವವರ ಸಂಖ್ಯೆ ಹೆಚ್ಚುತ್ತಿದೆ.
ಈಶಾನ್ಯ ಹಾಗೂ ಬಳ್ಳಾರಿ ಪೊಲೀಸ್ ವಲಯಗಳಲ್ಲಿ ಹಂಚಿ ಹೋಗಿರುವ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಠಾಣೆಗಳಲ್ಲಿ 2024ರ ಜನವರಿಯಿಂದ 2025ರ ಆಗಸ್ಟ್ ಅಂತ್ಯದವರೆಗೂ 590 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಡಿಜಿಟಲ್ ಅರೆಸ್ಟ್‌ಗೆ ಸಂಬಂಧಿಸಿದಂತೆ 17 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ: 2024ರ ಜನವರಿಯಿಂದ ಆಗಸ್ಟ್ ಅಂತ್ಯದವರೆಗೂ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಜನರು ವಂಚಕರ ಗಾಳಕ್ಕೆ ಬಿದ್ದಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 184 ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆ ಇದೆ. ನಗರ ಪೊಲೀಸ್ ಕಮೀಷನರೇಟ್ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 80 ಜನರಿಗೆ ವಂಚನೆ ಮಾಡಲಾಗಿದೆ.
ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿಯೂ ಬಳ್ಳಾರಿಯೇ ಮುಂದು: ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿಯೂ ಬಳ್ಳಾರಿ ಜಿಲ್ಲೆ ಮುಂದೆ ಇದೆ. ಈ ಅವಧಿಯಲ್ಲಿ ಒಟ್ಟು ಒಂಬತ್ತು ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿವೆ. ಕಲಬುರಗಿ 3, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ತಲಾ ಎರಡು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ವೇಗ ಪಡೆಯದ ಪ್ರಕರಣಗಳ ತನಿಖೆ: ಸೈಬರ್ ಅಪರಾಧದ ಸಾಧ್ಯತೆಗಳು ಬದಲಾದ ಕಾರಣ ಪ್ರಕರಣಗಳ ತನಿಖೆ ವೇಗ ಪಡೆಯುತ್ತಿಲ್ಲ. ಏಳು ಜಿಲ್ಲೆಗಳಲ್ಲಿ ದಾಖಲಾದ 590 ಪ್ರಕರಣಗಳ ಪೈಕಿ 201 ಪ್ರಕರಣಗಳಲ್ಲಿ ಹಣ ವಸೂಲಿ ಮಾಡಲಾಗಿದೆ. ಇವುಗಳಲ್ಲಿ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಿಗಳ ಸುಳಿವು ಪತ್ತೆಯಾಗಿಲ್ಲ. 17 ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಕೇವಲ 6 ಪ್ರಕರಣಗಳಲ್ಲಿ ಮಾತ್ರ ಹಣ ವಸೂಲಿ ಮಾಡಲಾಗಿದೆ.
ಕಲಬುರಗಿ ಜಿಲ್ಲೆ (ಕಮಿಷನರೇಟ್ ಹೊರತು ಪಡಿಸಿ), ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಡಿಜಿಟಲ್ ಅರೆಸ್ಟ್‌ಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿಲ್ಲ.
ಸಂಶಯಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಹೆಚ್ಚಿನ ಲಾಭದ ಆಮಿಷವೊಡ್ಡಿ ನಕಲಿ ಆ್ಯಪ್ ವೆಬ್‌ಸೈಟ್‌ಗಳ ಮೂಲಕ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಲಾಗುತ್ತಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕು. ಸಂಶಯಾಸ್ಪದ ಕರೆಗಳು ಸಂದೇಶಗಳು ಬಂದರೆ ‘1930’ ‘112’ ಗೆ ಕರೆ ಮಾಡಿಶರಣಪ್ಪ ಎಸ್.ಡಿ ನಗರ ಪೊಲೀಸ್ ಕಮಿಷನರ್ ಕಲಬುರಗಿ
ಸೈಬರ್ ಅಪರಾಧ ಹೆಚ್ಚಳಕ್ಕೆ ಕಾರಣಗಳು
* ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಳ
* ಡಿಜಿಟಲ್ ಸಾಕ್ಷರತೆ ಕೊರತೆ
* ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ
* ಆಧುನಿಕ ತಂತ್ರಜ್ಞಾನದ ದುರುಪಯೋಗ
* ಸೈಬರ್ ಅಪರಾಧಗಳ ಜಾಗತಿಕ ಸ್ವರೂಪ ಬದಲು
* ಡಿಜಿಟಲ್ ಪಾವತಿ ವಿಧಾನಗಳ ವಿಸ್ತರಣೆ
* ಅಧಿಕ ಲಾಭದ ಆಸೆ
‘1930’ ರಾಷ್ಟ್ರೀಯ ಸಹಾಯವಾಣಿ
ಆನ್‌ಲೈನ್ ಅಪರಾಧಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ‘1930’ ರಾಷ್ಟ್ರೀಯ ಹೆಲ್ಪ್‌ಲೈನ್ ಆರಂಭಿಸಿದೆ. ಇದಕ್ಕೆ ಕರೆ ಮಾಡಿ ತಕ್ಷಣ ಸೈಬರ್ ವಂಚನೆಗಳ ಮಾಹಿತಿಯನ್ನು ನೀಡಬಹುದು. ಅಲ್ಲದೆ ವಂಚನೆಗೆ ಒಳಗಾದವರು ಎನ್‌ಸಿಆರ್‌ಪಿ (NCRP) ಪೋರ್ಟಲ್‌ನ ಮೂಲಕವೂ ಸೈಬರ್ ಅಪರಾಧಗಳನ್ನು ವರದಿ ಮಾಡಿ ದೂರುಗಳ ಸ್ಥಿತಿ ತಿಳಿಯಬಹುದು. ರಾಜ್ಯದಲ್ಲಿ 43 ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. ಈ ಠಾಣೆಗಳು ಸೈಬರ್ ಅಪರಾಧಗಳ ತನಿಖೆಗೆ ಮಾತ್ರ ಮೀಸಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.