ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಭಾನುವಾರ ಸಂಜೆ ದತ್ತ ಮಹಾರಾಜರ ಭವ್ಯ ರಥೋತ್ಸವ ಜರುಗಿತು.
ಬೆಳಿಗ್ಗೆ ದತ್ತ ಮಹಾರಾಜರಿಗೆ ರುದ್ರಾಭಿಷೇಕ, ಕೇಸರ, ಕಸ್ತೂರಿ ಲೇಪನ, ವಿಶೇಷ ಪುಷ್ಪಗಳಿಂದ ಅಲಂಕರಿಸಿ, ಅರ್ಚನೆ, ಕಾಕಡಾರತಿ, ಮಂಗಳಾರತಿ, ಮಹಾ ನೈವೇದ್ಯ, ಮಧುಕರಿ ಅನ್ನದಾನ, ತೀರ್ಥ ಪ್ರಸಾದ ಜರುಗಿತು.
ನಂತರ ಸಂಜೆ 5ಗಂಟೆಗೆ ದೇವಸ್ಥಾನದ ಗರ್ಭಗುಡಿಯಿಂದ ಬಾಲದತ್ತ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ದತ್ತ ನಿರ್ಗುಣ ಮಠದಿಂದ ರಥೋತ್ಸವ ನಡೆಯಿತು. ಭಕ್ತರು ರಥದ ಮೇಲೆ ಫಲ-ಪುಷ್ಪ ಎಸೆದು ಹರ್ಷೋದ್ಗಾರದ ನಡುವೆ ದತ್ತ ಮಹಾರಾಜ್ ಕೀ ಜೈ ಎಂದು ರಥೋತ್ಸವ ಕಣ್ತುಂಬಿಕೊಂಡರು.
ರಥೋತ್ಸವದ ನಂತರ ರಾತ್ರಿ 8ಗಂಟೆಗೆ ನಿರ್ಗುಣ ಮಠದ ಪ್ರಾಂಗಣದಲ್ಲಿ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ, ಭಜನೆ, ಕೀರ್ತನೆ, ಮಹಾಮಂಗಳಾರತಿ ಜರುಗಿ ಸಂಭ್ರಮದ ದತ್ತ ಜಯಂತಿಗೆ ತೆರೆ ಬಿತ್ತು.
ರಥೋತ್ಸವದಲ್ಲಿ ಸಾಲಕಾರಿ ಕಾರ್ಯದರ್ಶಿ ಚೈತನ್ಯ ಪೂಜಾರಿ, ಮಧುಕರ ಭಟ್ ಪೂಜಾರಿ, ಋಷಿಕೇಶ ಪೂಜಾರಿ, ಪ್ರಸಾದ ಪೂಜಾರಿ, ಉದಯಕುಮಾರ ಪೂಜಾರಿ, ರತ್ನಾಕರ ಪೂಜಾರಿ, ಅಲರ್ಕ ಪೂಜಾರಿ, ಧನಂಜಯ ಪೂಜಾರಿ, ಬಾಲಕೃಷ್ಣ ಪೂಜಾರಿ, ಸದಾಶಿವಭಟ್ ಪೂಜಾರಿ, ಆದಿತ್ಯ ಪೂಜಾರಿ, ಪ್ರಿಯಾಂಕ ಭಟ್ ಪೂಜಾರಿ, ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತಮ್ಮ, ಸಮಿತಿಯ ದತ್ತು ನಿಂಬರಗಿ ಮತ್ತಿತರರು ಇದ್ದರು.
ರಥೋತ್ಸವ ಪ್ರಯುಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.