ADVERTISEMENT

ಧೈರ್ಯ ಮಾಡಿ ಸಮಸ್ಯೆ ಹೇಳಿಕೊಳ್ಳಿ: ಪ್ರವಾಹ ಸಂತ್ರಸ್ತರ ಕಷ್ಟ ಕೇಳಿದ ಜಿಲ್ಲಾಧಿಕಾರಿ

ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 9:56 IST
Last Updated 19 ಅಕ್ಟೋಬರ್ 2020, 9:56 IST
ಅಫಜಲಪುರ ತಾಲ್ಲೂಕಿನ ಬಂದರವಾಡ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು
ಅಫಜಲಪುರ ತಾಲ್ಲೂಕಿನ ಬಂದರವಾಡ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು   

ಕಲಬರ್ಗಿ: ‘ಅಧಿಕಾರಿಗಳು ಬಂದಾಗ ನೀವು ಸುಮ್ಮನೇ ಕುಳಿತರೇ ಹೇಗೆ? ನೀವು ಸಮಸ್ಯೆ ಹೇಳಿಕೊಂಡರೆ ತಾನೆ ನಮಗೆ ತಿಳಿಯುತ್ತದೆ. ಬಾಯಿ ಬಿಟ್ಟು ಗಟ್ಟಿಯಾಗಿ ಹೇಳಿಕೊಳ್ಳಿ. ಇಲ್ಲದಿದ್ದರೆ ಕಷ್ವಗಳನ್ನು ಸಹಿಸುತ್ತಲೇ ಇರಬೇಕಾಗುತ್ತದೆ. ಸಂತ್ರಸ್ತರ ಸಲುವಾಗಿಯೇ ಇಲ್ಲಿಗೆ ಬಂದಿದ್ದೇವೆ...’

- ಹೀಗೆಂದು ಸಂತ್ರಸ್ತ ಮಹಿಳೆಯರಲ್ಲಿ ಧೈರ್ಯ ತುಂಬಿದ್ದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ. ಪ್ರವಾಹ ಪೀಡಿತ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಹಾಗೂ ಬಂದರವಾಡ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಅವರು, ಅಲ್ಲಿನ ಕಾಳಜಿ ಕೇಂದ್ರದಲ್ಲಿರುವ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು.‌

ಅಧಿಕಾರಿಗಳು ಹೋದಲ್ಲೆಲ್ಲ ಒಬ್ಬರೇ ಮಹಿಳೆ ಪದೇಪದೇ ಒಂದೇ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ಜೋತ್ಸ್ನಾ, ‘ಎಲ್ಲ ಕಡೆ ನೀವು ಒಬ್ಬರೇ ಏಕೆ ಮಾತನಾಡುತ್ತೀರಿ. ಎಲ್ಲರಿಗೂ ಸಮಸ್ಯೆಗಳಿವೆ. ಅವರನ್ನೂ ಮಾತನಾಡಲು ಬಿಡಿ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, 'ಅವರಿಗೆಲ್ಲ ಬಾಯಿ ಸತ್ತಿದೆ ಮೇಡಂ‘ ಎಂದರು.‌

ಇದರಿಂದ ಬೇಸರಗೊಂಡ ಜಿಲ್ಲಾಧಿಕಾರಿ, ‘ಇಲ್ಲಿ ಯಾರಿಗೂ ಬಾಯಿ ಸತ್ತಿಲ್ಲ. ಎಲ್ಲರೂ ಚೆನ್ನಾಗೇ ಮಾತನಾಡಬಲ್ಲಿರಿ. ನೀವು ಸುಮ್ಮನೆ ಕುಳಿತಿದ್ದರೆ ಯಾರೋ ಒಬ್ಬರು ಹೇಳಿದ್ದನ್ನು ಕೇಳಿ ಹೋದಂತೆ ಆಗುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಾಗ ಮುಂದೆ ಬಂದು ಧೈರ್ಯವಾಗಿ ಮಾತನಾಡಿ. ಇಲ್ಲದಿದ್ದರೆ ಪರಿಹಾರ ಸಿಗುವುದಿಲ್ಲ’ ಎಂದ ಅವರು, ಮಹಿಳೆಯರ ಬಳಿ ಹೋಗಿ ಒಬ್ಬೊಬ್ಬರನ್ನಾಗಿ ಮಾತನಾಡಿದರು.

’ಕಾಳಜಿ ಕೇಂದ್ರದ ಆವರಣದಲ್ಲಿರುವ ನೀರನ್ನು ಯಾವುದಕ್ಕೂ ಬಳಸಬೇಡಿ. ಅದು ಮಲಿನವಾಗಿದ್ದು ನಿಮಗೆ ರೋಗಗಳು ಕಾಣಿಸಿಕೊಳ್ಳುತ್ತವೆ. ಶುದ್ಧವಾದ ನಲ್ಲಿ ಅಥವಾ ಬೋರ್‌ವೆಲ್‌ ನೀರು ಮಾತ್ರ ಬಳಸಿ. ಒಂದು ವೇಳೆ ನೀರಿನ ಸಮಸ್ಯೆಯಾಗಿದ್ದರೆ ಹೇಳಿ; ಟ್ಯಾಂಕರ್‌ನಿಂದ ಪೂರೈಸುತ್ತೇವೆ’ ಎಂದರು.

‘ಮಕ್ಕಳಿಗೆ ಎರಡು ಹೊತ್ತು ಹಾಲು, ಬಿಸ್ಕತ್ತು ಕೊಡಲು ಹೇಳಿದ್ದೇವೆ. ನಿಮಗೆ ಚಪಾತಿ, ರೊಟ್ಟಿ, ಅನ್ನ, ಸಾರು, ಪಲ್ಯ, ಉಪ್ಪಿನಕಾಯಿ ಈ ರೀತಿ ಗುಣಮಟ್ಟದ ಊಟವನ್ನು ಪೂರೈಸಲು ಸರ್ಕಾರವೇ ತಿಳಿಸಿದೆ. ಯಾವುದಾದರೂ ಬಂದಿಲ್ಲ ಎಂದಾದರೆ ನೀವು ನಮ್ಮ ಗಮನಕ್ಕೆ ತರಬೇಕು’ ಎಂದೂ ಸಲಹೆ ನೀಡಿದರು.

‘ಕೊರೊನಾ ವೈರಾಣು ಇನ್ನೂ ಹರಡುತ್ತಿರುವ ಕಾರಣ, ಗುಂಪಾಗಿ ಸೇರಬೇಡಿ. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ’ ಎಂದರು.

ಇದಕ್ಕೂ ಮುನ್ನ ಪ್ರವಾಹ ನುಗ್ಗಿ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದ ಅವರು, ಜನರಿಂದ ಮಾಹಿತಿ ಪಡೆದರು. ‘ಪ್ರತಿ ವರ್ಷ ಇದೇ ರೀತಿ ಸಂಕಷ್ಟ ಎದುರಿಸುತ್ತಿದ್ದೇವೆ. ಗ್ರಾಮವನ್ನು ಸ್ಥಳಾಂತರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಮಳೆಗಾಲದಲ್ಲಿ ತಂದು ಶಾಲೆಯಲ್ಲಿ ಇಡುತ್ತಾರೆ. ನೀರು ಇಳಿದ ಮೇಲೆ ಮತ್ತೆ ಹೋಗಿ ಜೀವನ ಕಟ್ಟಿಕೊಳ್ಳುತ್ತೇವೆ. ಅಲ್ಲಿಗೆ ಎಲ್ಲರೂ ಎಲ್ಲವನ್ನೂ ಮರೆತುಬಿಡುತ್ತಾರೆ’ ಎಂದರು.‌

ಇದೇ ವೇಳೆ ಜೋತ್ಸ್ನಾ ಅವರು, ದೇವಲ ಗಾಣಗಾಪುರದ ಕಾಳಜಿ ಕೇಂದ್ರದಲ್ಲಿ ಮಧ್ಯಾಹ್ನದ ಊಟ ಸವಿದರು. ಅವರೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಪಿ. ರಾಜಾ, ಪಾಲಿಕೆ ಆಯುಕ್ತ ಸ್ನೇಹಲ್‌ ಲೋಖಂಡೆ, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಆಕಾಶ್‌ ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.