ADVERTISEMENT

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌: ಯಾರ ಹೆಗಲಿಗೆ ಚುಕ್ಕಾಣಿ?

ಕೆ–ವೈ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:20 IST
Last Updated 21 ನವೆಂಬರ್ 2025, 6:20 IST
‌ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ
‌ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ   

ಕಲಬುರಗಿ: ಇಲ್ಲಿನ ಕಲಬುರಗಿ–ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಮುಹೂರ್ತ ನಿಗದಿಯಾಗಿದ್ದು, ‘ಅಧ್ಯಕ್ಷ’ ಗಾದಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಹಾಗೂ ಶರಣಬಸಪ್ಪ ದರ್ಶನಾಪುರ ಅವರ ನಡೆಯತ್ತ ಅಭ್ಯರ್ಥಿಗಳ ಚಿತ್ತ ನೆಟ್ಟಿದೆ.

ನವೆಂಬರ್‌ 9ರಂದು ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯ ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಮತದಾನ ನಡೆದಿತ್ತು. ಅದರಲ್ಲಿ ಆರು ಕಾಂಗ್ರೆಸ್‌ ಬೆಂಬಲಿತರು ಗೆಲುವಿನ ನಗೆ ಬೀರಿದ್ದರು. ಇನ್ನುಳಿದ ಎರಡು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ ಒಂದು ಸ್ಥಾನದಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದರು.

ಚುನಾವಣೆಗೂ ಮುನ್ನವೇ ನಾಲ್ಕು ಕ್ಷೇತ್ರಗಳಿಂದ ಕಾಂಗ್ರೆಸ್‌ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರಿಂದ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು. ಕಾಂಗ್ರೆಸ್‌ ಬೆಂಬಲಿತರಿಗೆ ಸರಳ ಬಹುಮತವಿದ್ದು, ಬಹುತೇಕ ಅವಿರೋಧ ಆಯ್ಕೆಯನ್ನೇ ನಿರೀಕ್ಷಿಸಲಾಗಿದೆ.

ADVERTISEMENT

ತೀವ್ರ ಪೈಪೋಟಿ

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ, ಐದನೇ ಸಲ ಡಿಸಿಸಿ ಬ್ಯಾಂಕ್‌ ಪ್ರವೇಶಿಸಿರುವ ಸೋಮಶೇಖರ ಗೋನಾಯಕ ಸೇರಿದಂತೆ ನಾಲ್ವರು ಆಕಾಂಕ್ಷಿಗಳ ನಡುವೆ ‘ಬ್ಯಾಂಕ್‌ ಚುಕ್ಕಾಣಿ’ಗೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

‘ಗೋನಾಯಕ ಅವರು ಈಗೊಮ್ಮೆ ಅಧ್ಯಕ್ಷರಾಗಿದ್ದಾರೆ. ಅವರನ್ನು ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರನ್ನಾಗಿ ನೇಮಿಸಬೇಕು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗಾದಿ ಹೊಣೆ ಈ ಸಲ ಹೊಸಬರಿಗೆ ನೀಡಬೇಕು ಎಂಬ ಚರ್ಚೆ ಒಂದೆಡೆ ಇದೆ. ಗೋನಾಯಕ ಕಳೆದ ಅವಧಿಯಲ್ಲಿ ಬ್ಯಾಂಕ್‌ ಅನ್ನು ನಷ್ಟದಿಂದ ಲಾಭದತ್ತ ಮುನ್ನಡೆಸಿ, ಚುನಾವಣೆಯಲ್ಲೂ ‘ಕೈ’ ಬೆಂಬಲಿತರ ಗೆಲುವಿಗೆ ಶ್ರಮಿಸಿದ್ದಾರೆ. ಹೀಗಾಗಿ ಇನ್ನೊಂದು ಅವಕಾಶ ನೀಡಬೇಕು’ ಎಂಬ ಮಾತುಗಳು ಮತ್ತೊಂದೆಡೆ ಕೇಳಿ ಬರುತ್ತಿವೆ.

ಗೋನಾಯಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿದ್ದರೆ, ಮೂರನೇ ಸಲ ಗೆದ್ದಿರುವ ಆಳಂದದ ಅಶೋಕ ಸಾವಳೇಶ್ವರ, ತಲಾ ಎರಡು ಸಲ ಗೆದ್ದಿರುವ ಶಹಾಪುರದ ಗುರುನಾಥ ರೆಡ್ಡಿ ಹಾಗೂ ಯಾದಗಿರಿಯ ಸಿದ್ರಾಮರೆಡ್ಡಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಮಂಡಿಸುವ ಸಾಧ್ಯತೆಗಳು ಅಧಿಕವಾಗಿವೆ. ಈ ನಡುವೆ, ಜಾತಿ ಲೆಕ್ಕಾಚಾರವೂ ಜೋರಾಗಿದೆ. ‘ಯಾದವ’ ಸಮುದಾಯಕ್ಕೆ ಸೇರಿದ ಸುರಪುರದ ವಿಠಲ ಯಾದವ ಅವರೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

‘ಬೆ.10ರಿಂದ 11 ಗಂಟೆ ತನಕ ನಾಮ‍ಪತ್ರಗಳ ಸಲ್ಲಿಕೆಗೆ ಅವಕಾಶವಿದೆ. ಬಳಿಕ ಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಪ್ರಕಟಣೆ ನಡೆಯಲಿದೆ. ನಂತರ ನಾಮಪತ್ರಗಳ ಹಿಂಪಡೆಯಲು ಅವಕಾಶ ಇರಲಿದೆ. ಅಗತ್ಯ ಬಿದ್ದರೆ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿಯೂ ಆಗಿರುವ ಕೆಕೆಆರ್‌ಡಿಬಿ ಅಧೀನ ಕಾರ್ಯದರ್ಶಿ ಪ್ರಕಾಶ ಬಿ.ಕುದರಿ ತಿಳಿಸಿದ್ದಾರೆ.

ಸಭೆ ಇಂದು

‍‘ಡಿಸಿಸಿ ಬ್ಯಾಂಕ್ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕಲಬುರಗಿಯ ಐವಾನ್‌–ಎ–ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಚಿವರಾದ ಶರಣಪ್ರಕಾಶ ಪಾಟೀಲ ಹಾಗೂ ಶರಣಬಸಪ್ಪ ದರ್ಶನಾಪುರ ಸೇರಿದಂತೆ ಪಕ್ಷದ ನಾಯಕರು ಆಕಾಂಕ್ಷಿಗಳು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ನಿರ್ಧಾರ ಪ್ರಕಟಗೊಳ್ಳಲಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.