
ಕಲಬುರಗಿಯ ಜಗತ್ ವೃತ್ತದಲ್ಲಿರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮತದಾನಕ್ಕೆ ಸಾಲುಗಟ್ಟಿರುವ ಮತದಾರರು
ಕಲಬುರಗಿ: ಪ್ರತಿಷ್ಠಿತ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕಿನ 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯುತ್ತಿದ್ದು, ಮತದಾನ ಬಿರುಸಿನಿಂದ ಸಾಗಿದೆ.
ನಗರದ ಜಗತ್ ವೃತ್ತದಲ್ಲಿರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮತದಾನದ ಸಾಗಿದ್ದು, ಕಣದಲ್ಲಿರುವ ಸ್ಪರ್ಧಾಳುಗಳು ಮತದಾರರನ್ನು ಕರೆ ತಂದು ಮತ ಹಾಕಿಸುತ್ತಿದ್ದಾರೆ.
9 ಕ್ಷೇತ್ರಗಳಿಗೆ ಒಟ್ಟು 344 ಮತದಾರರಿದ್ದಾರೆ. ಈತನಕ ಗಂಟೆ ತನಕ ಜೇವರ್ಗಿ, ಚಿಂಚೋಳಿ, ಸೇಡಂ ಮತಕ್ಷೇತ್ರಗಳ ಮತದಾನ ಬಹುತೇಕ ಮುಗಿದಿದೆ.
ನಾಲ್ಕು ಕ್ಷೇತ್ರಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಪಟ್ಟಣ ಸಹಕಾರ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಹಾಲಿ ಸೋಮಶೇಖರ ಗೋನಾಯಕ, ಶಹಾಪುರ ತಾಲ್ಲೂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಗುರುನಾಥ ರೆಡ್ಡಿ ಪರ್ವತರೆಡ್ಡಿ, ಯಾದಗಿರಿ ತಾಲ್ಲೂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಬ್ಯಾಂಕ್ ನ ಹಾಲಿ ನಿರ್ದೇಶಕ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನ ರೆಡ್ಡಿ ಕೌಳುರ ಹಾಗೂ ಟಿಎಪಿಸಿಎಂ ಕ್ಷೇತ್ರದಿಂದ ಯಾದಗಿರಿಯ ಬಸವರಾಜ ಸಂಗನಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರ ಮತ ಕ್ಷೇತ್ರದಲ್ಲಿ ಸಚಿವ ಅವರ ಬೆಂಬಲಿಗ ಸುನೀಲಕುಮಾರ ದೊಡ್ಡಮನಿ ಕಣದಲ್ಲಿದ್ದಾರೆ. ಇದೇ ಕ್ಷೇತ್ರದಿಂದ ಹೆಬ್ಬಾಳ ಪಿಕೆಪಿಎಸ್ ದಿಂದ ಸಿದ್ದಪ್ಪಗೌಡ ರಾಜೇಂದ್ರ ಪಾಟೀಲ್ ಪ್ರತಿಸ್ಪರ್ಧಿಯಾಗಿದ್ದಾರೆ.
ಅಫಜಲಪುರ ಪಿಕೆಪಿಎಸ್ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಅಣ್ಣಾರಾವ ಪಾಟೀಲರ ಮೊಮ್ಮಗ ಅಜಯ ಬಸವರಾಜ ಪಾಟೀಲ ಹಾಗೂ ಪ್ರತಿಸ್ಪರ್ಧಿಯಾಗಿ ಕರಜಗಿ ಪಿಕೆಪಿಎಸ್ ನ ರಾಜಕುಮಾರ ಅಪ್ಪಾರಾವ ಜಿಡಗಿ ಕಣದಲ್ಲಿದ್ದಾರೆ.
ಆಳಂದ ಪಿಕೆಪಿಎಸ್ ಕ್ಷೇತ್ರದಿಂದ ಹಾಲಿ ನಿರ್ದೇಶಕ ಅಶೋಕ ಸಾವಳೇಶ್ವರ ಹಾಗೂ ಮಾಜಿ ನಿರ್ದೇಶಕ ಕಡಗಂಚಿಯ ಚಂದ್ರಶೇಖರ ಗುರುಶಾಂತಪ್ಪ ಭೂಸನೂರ ಕಣದಲ್ಲಿ ಇದ್ದಾರೆ.
ಚಿಂಚೋಳಿ ಕ್ಷೇತ್ರದಿಂದ ಗೌತಮ ಪಾಟೀಲ ಹಾಗೂ ಕಳೆದ ಸಲ ಒಂದು ಮತದಿಂದ ಪರಾಭವಗೊಂಡಿದ್ದ ಶೈಲೇಶಕುಮಾರ ಪ್ರಭುಲಿಂಗ ಪ್ರತಿಸ್ಪರ್ಧಿ ಯಾಗಿದ್ದಾರೆ. ತೀವ್ರ ಗಮನ ಸೆಳೆದಿರುವ ಜೇವರ್ಗಿ ತಾಲ್ಲೂಕಿನಿಂದ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲರ ಸಹೋದರ ಜಿ.ಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ ಕಣದಲ್ಲಿದ್ದಾರೆ.
ಉಳಿದಂತೆ ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಕಲಬುರಗಿ ತಾಲ್ಲೂಕಿನಿಂದ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಅವರ ಸಹೋದರ ಕಲ್ಯಾಣರಾವ ಮೂಲಗೆ ಕುಮಸಿ ಹಾಗೂ ಶರಣಬಸಪ್ಪ ಪಾಟೀಲ್ ಅಷ್ಠಗಾ ಹಾಗೂ ಸೇಡಂ ಕ್ಷೇತ್ರದಿಂದ ಹಾಲಿ ನಿರ್ದೇಶಕ ಶಂಕರ ಭೂಪಾಲ ಚಂದ್ರಶೇಖರ ಹಾಗೂ ನಾಗೇಂದ್ರಪ್ಪ ರಾಮಶೆಟ್ಟಿ ಮತ್ತು ಸುರಪುರ ಕ್ಷೇತ್ರದಿಂದ ವಿಠಲ ವೆಂಕಣ್ಣ ಯಾದವ್ ಹಾಗೂ ಶಾಂತರೆಡ್ಡಿ ಗುರುನಾಥರೆಡ್ಡಿ ಚೌಧರಿ ಹಾಗೂ ಇತರೆ ಸಹಕಾರ ಕ್ಷೇತ್ರದ ಡಿ ಕ್ಷೇತ್ರದಿಂದ ಬ್ಯಾಂಕ್ ನ ಹಾಲಿ ಉಪಾಧ್ಯಕ್ಷ ಸುರೇಶ ಸಜ್ಜನ್ ಹಾಗೂ ಜ್ಯೋತಿ ಮರಗೋಳ ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.