ADVERTISEMENT

ಕಲಬುರಗಿ | ಲಾಭದ ಹಳಿಗೆ ಮರಳಿದ ಬ್ಯಾಂಕ್: ಸೋಮಶೇಖರ ಗೋನಾಯಕ

ಡಿಸಿಸಿ ಬ್ಯಾಂಕ್‌ನ 99ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸೋಮಶೇಖರ ಗೋನಾಯಕ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:55 IST
Last Updated 2 ಸೆಪ್ಟೆಂಬರ್ 2025, 4:55 IST
ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಹಾಗೂ ನಿರ್ದೇಶಕರು ಚಾಲನೆ ನೀಡಿದರು
ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಹಾಗೂ ನಿರ್ದೇಶಕರು ಚಾಲನೆ ನೀಡಿದರು   

ಕಲಬುರಗಿ: ಮುಂದಿನ ವರ್ಷದಿಂದ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ₹ 40 ಕೋಟಿಯಿಂದ ₹ 50 ಕೋಟಿವರೆಗೆ ಲಾಭ ಗಳಿಸಲಿದ್ದು, ಆಗ ಸದಸ್ಯತ್ವ ಹೊಂದಿರುವ 357 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಾಭಾಂಶ ವಿತರಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಪ್ರಕಟಿಸಿದರು.

ನಗರದ ಎಚ್.ಬಿ. ಕೋಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್‌ನ 99ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘₹ 12 ಕೋಟಿ ಕೂಡಿಟ್ಟ ಹಾನಿ ಹೋಗಲಾಡಿಸಿದರೆ ಲಾಭಾಂಶ ಸರಳವಾಗಿ ಕೊಡಬಹುದಾಗಿದೆ. ಲಾಭಾಂಶ ನೀಡಿದರೆ ಬ್ಯಾಂಕ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಲಾಭ ಹಂಚಿಕೆ ಮಾಡಿದಂತಾಗುತ್ತದೆ. ಮಧ್ಯಮ ಅವಧಿ ಸಾಲವನ್ನೂ ಮುಂದಿನ ವರ್ಷದಲ್ಲಿ ನೀಡಲು ಉದ್ದೇಶಿಸಲಾಗಿದೆ. ಆದ್ದರಿಂದ ಈಗಾಗಲೇ ಮಧ್ಯಮಾವಧಿ ಸಾಲ ಪಡೆದು ಕಟ್ಟದೇ ಬಾಕಿ ಉಳಿಸಿಕೊಂಡಿರುವ ರೈತರು ಹೆಚ್ಚುವರಿ ಬಡ್ಡಿಯಿಂದ ಪಾರಾಗಲು ಈಗಲೇ ಸಾಲ ಮರುಪಾವತಿಸಬೇಕು’ ಎಂದು ಮನವಿ ಮಾಡಿದರು.

‘ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಬ್ಯಾಂಕ್‌ನ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ಸಾಲ ವಿತರಣೆಯಲ್ಲಿ ಶಿಸ್ತು, ವಸೂಲಾತಿಯಲ್ಲಿ ಕಠಿಣ ಕ್ರಮ ಹಾಗೂ ಸರ್ಕಾರದ ಸಹಾಯಧನ ಪಡೆಯಲು ಕಸರತ್ತು ನಡೆಸಿರುವುದು ಹಾಗೂ ಠೇವಣಿ ಪ್ರಮಾಣ ಹೆಚ್ಚಿಸಿರುವುದರಿಂದ ಪ್ರಸ್ತುತ ಬ್ಯಾಂಕ್ ₹ 14 ಕೋಟಿ ಲಾಭ ಹೊಂದಿದೆ. 2023ರ ಆರ್ಥಿಕ ವರ್ಷಾಂತ್ಯಕ್ಕೆ ಎನ್‌ಪಿಎ ಶೇ 8ರಷ್ಟಿತ್ತು. ಆ ಪ್ರಮಾಣವನ್ನು ಶೇ 3.31ಕ್ಕೆ ತಂದಿರುವುದೇ ಬ್ಯಾಂಕ್‌ ಅಭಿವೃದ್ಧಿಗೆ ಹಿಡಿದ ಕನ್ನಡಿ’ ಎಂದು ವಿವರಿಸಿದರು.

ADVERTISEMENT

ಉತ್ತಮವಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮವಾಗಿ ಲಾಭ ಮಾಡಿರುವ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.

ಬ್ಯಾಂಕ್‌ನ ಎಂ.ಡಿ. ಪವನಕುಮಾರ ವಾರ್ಷಿಕ ವರದಿ ಓದಿದರು. ಬ್ಯಾಂಕ್‌ ನಿರ್ದೇಶಕ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಬಸವರಾಜ ಪಾಟೀಲ ಸ್ವಾಗತಿಸಿದರು. ಬಾಪುಗೌಡ ಪಾಟೀಲ ವಂದಿಸಿದರು.

ನಿರ್ದೇಶಕರಾದ ಶಿವಾನಂದ ಮಾನಕರ, ಅಶೋಕ ಸಾವಳೇಶ್ವರ, ಗುರುನಾಥ ರೆಡ್ಡಿ ಹಳಿಸಗರ, ಸಿದ್ರಾಮರೆಡ್ಡಿ ಕೌಳೂರ, ನಿಂಗಣ್ಣ ದೊಡ್ಡಮನಿ, ಮಹಾಂತಗೌಡ ಪಾಟೀಲ, ಕಲ್ಯಾಣರಾವ ಪಾಟೀಲ ಮೂಲಗೆ, ಅಜೀತಕುಮಾರ ಪಾಟೀಲ, ಶಂಕರ ಭೂಪಾಲ ಪಾಟೀಲ, ಇಬ್ರಾಹಿಂ ಶಿರವಾಳ ಶಹಾಪುರ, ಚಂದ್ರಶೇಖರ ತಳ್ಳಳ್ಳಿ ಸೇರಿದಂತೆ ಮುಂತಾದವರಿದ್ದರು.

Quote - ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯಲಾಗಿದ್ದ ಯಕ್ಸಂಬಾ ಸಹಕಾರಿ ಬ್ಯಾಂಕ್‌ ಹಾಗೂ ಸಿದ್ಧಸಿರಿ ಸಹಕಾರಿ ಬ್ಯಾಂಕ್‌ಗೆ ತಲಾ ₹ 40 ಕೋಟಿಯನ್ನು ಮರುಪಾವತಿ ಮಾಡಲಾಗಿದೆ. ಅಪೆಕ್ಸ್ ನಬಾರ್ಡ್‌ಗೆ ₹ 626 ಕೋಟಿ ಸಾಲ ಮರುಪಾವತಿಸಲಾಗಿದೆ. ಇದು ಉತ್ತಮ ಆರ್ಥಿಕ ಸ್ಥಿತಿಗೆ ಹಿಡಿದ ಕನ್ನಡಿ ಸೋಮಶೇಖರ ಗೋನಾಯಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.