ಕಲಬುರಗಿ: ‘ನಗರಕ್ಕೆ ದುರ್ನಾತ ಬೀರುವ ರಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹಣ ನೀಡಿ ನೀರು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶುದ್ಧ ನೀರು ಸರಬರಾಜು ಮಾಡಬೇಕು’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ.ಖದೀರ್ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಿಂಗಳಲ್ಲಿ ಕೇವಲ 10 ದಿನ ನೀರು ಪೂರೈಸಲಾಗುತ್ತದೆ. ಆ ನೀರೂ ಶುದ್ಧವಾಗಿರುವುದಿಲ್ಲ. ಪ್ರತಿ ತಿಂಗಳು ₹175 ಕರ ಪಾವತಿಸಿಕೊಳ್ಳಲಾಗುತ್ತದೆ. ರಾಡಿ ನೀರಿಗೆ ಕರ ಕಟ್ಟಬೇಕಾದ ಪರಿಸ್ಥಿತಿ ಇದೆ’ ಎಂದರು.
‘ಎಲ್ ಅಂಡ್ ಟಿ ಕಂಪನಿ ಸರಿಯಾಗಿ ನೀರು ನಿರ್ವಹಣೆ ಮಾಡುತ್ತಿಲ್ಲ. ನಗರದಲ್ಲಿ 55 ವಾರ್ಡ್‌ಗಳಿದ್ದು, ಕೇವಲ 11 ವಾರ್ಡ್‌ಗಳಲ್ಲಿ 24/7 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದೂ ಆಮೆಗತಿಯಲ್ಲಿ ಸಾಗುತ್ತಿದೆ. ಅಲ್ಲಲ್ಲಿ ರಸ್ತೆ ಅಗೆದು ಬಿಡಲಾಗಿದೆ. ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣ ಪ್ರಕಾಶ ಪಾಟೀಲರು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ’ ಎಂದು ಆರೋಪಿಸಿದರು.
ಪಾರ್ಟಿಯ ಬಾಬಾ ಸಾಹೇಬ ಹುಂಡೇಕಾರ ಮಾತನಾಡಿ, ‘ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕು. ವಾರದಲ್ಲಿ ಎಷ್ಟು ದಿನ ನೀರು ಪೂರೈಸಲಾಗುತ್ತದೆಯೋ ಅಷ್ಟಕ್ಕೆ ಮಾತ್ರ ತೆರಿಗೆ ವಿಧಿಸಬೇಕು. ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಮಳೆ ನೀರು ಸಂರಕ್ಷಣೆಗೆ ಮುಂದಾಗುವವರಿಗೆ ಮಾತ್ರ ಕಟ್ಟಡ ನಿರ್ಮಾಣ ಪರವಾನಗಿ ನೀಡಬೇಕು’ ಎಂದು ಒತ್ತಾಯಿಸಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಕಾರ್ಯದರ್ಶಿ ಮುಬೀನ್ ಅಹ್ಮದ್, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅಬ್ದುಲ್ ಸಲೀಂ ಚಿತ್ತಾಪುರಿ ಹಾಗೂ ಸೈಯದ್ ನಸಿರುದ್ದೀನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.