ADVERTISEMENT

ಎರಡು ದಶಕಗಳಿಂದ ಗುರುಭವನಕ್ಕೆ ಪರದಾಟ

ನಗರದಲ್ಲಿ ಸೂಕ್ತ ಸ್ಥಳಕ್ಕೆ ಹುಡುಕಾಟ, ಕಲ್ಯಾಣ ನಿಧಿಯಲ್ಲಿ ಕೊಳೆಯುತ್ತಿದೆ ₹ 25 ಲಕ್ಷ ಅನುದಾನ

ಸಂತೋಷ ಈ.ಚಿನಗುಡಿ
Published 5 ಸೆಪ್ಟೆಂಬರ್ 2019, 19:45 IST
Last Updated 5 ಸೆಪ್ಟೆಂಬರ್ 2019, 19:45 IST
ಕಲಬುರ್ಗಿಯ ದರ್ಗಾ ರಸ್ತೆಯಲ್ಲಿರುವ ಪಾಳುಬಿದ್ದ ಗುರುಭವನ
ಕಲಬುರ್ಗಿಯ ದರ್ಗಾ ರಸ್ತೆಯಲ್ಲಿರುವ ಪಾಳುಬಿದ್ದ ಗುರುಭವನ   

ಕಲಬುರ್ಗಿ: ಬರೋಬ್ಬರಿ 20 ವರ್ಷ ಉರುಳಿವೆ. ಜಿಲ್ಲೆಯ ಶಿಕ್ಷಕರ ಚಟುವಟಿಕೆಗೆ ಒಂದು ಗುರುಭವನ ಕಟ್ಟುವ ಕನಸು ಇನ್ನೂ ಈಡೇರಿಲ್ಲ. ಭವನಕ್ಕೆ ಸೂಕ್ತ ಜಾಗ ಸಿಗದ ಕಾರಣ ಶಿಕ್ಷಕರು ಇನ್ನೂ ಬಾಡಿಗೆ ಕಟ್ಟಡದಲ್ಲೇ ಸಭೆ– ಸಮಾರಂಭ ನಡೆಸುವಂತಾಗಿದೆ.

ಹೈದರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಸರ್ಕಾರ ಎರಡು ವರ್ಷಗಳ ಹಿಂದೆಯೇ ತಲಾ ₹ 1 ಕೋಟಿ ಅನುದಾನ ಮಂಜೂರು ಮಾಡಿದೆ. ಆದರೆ, ಎಲ್ಲಿಯೂ ಸರಿಯಾದ ಜಾಗವಿಲ್ಲ. ಕಲಬುರ್ಗಿಯಲ್ಲಿ ಕೂಡ ಇದರ ಕೊರತೆ ಕಾಡುತ್ತಿದೆ. ಹೀಗಾಗಿ, ಇಲಾಖೆಯಲ್ಲಿ ಅನುದಾನ ಕೊಳೆಯುತ್ತ ಬಿದ್ದಿದೆ.

ಕೆಲ ವರ್ಷದ ಹಿಂದೆ ಎಸ್‌ಟಿಬಿಟಿ ಪ್ರದೇಶದಲ್ಲಿ ಪ್ರಜ್ಞಾ ಶಾಲೆಯ ಪಕ್ಕದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ, ಇದು ಚಿಕ್ಕದಾಗಿದೆ ಎಂಬ ತಕರಾರು ಕೇಳಿಬಂತು. ಜಿಲ್ಲಾಧಿಕಾರಿಗಳು ಹೊಸ ಜಾಗ ಗುರುತಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯರಾಗಿದ್ದ ಶರಣಪ್ಪ ಮಟ್ಟೂರ ಸಲಹೆ ನೀಡಿದ್ದರು. ಇದಾಗಿ ಎರಡು ವರ್ಷ ಕಳೆದರೂ ಯಾರೂ ಇದರ ಬಗ್ಗೆ ತುಟಿಬಿಚ್ಚಿಲ್ಲ.

ADVERTISEMENT

ಅನಿವಾರ್ಯವಾಗಿ ಶಿಕ್ಷಕರು ಈಗ ರಂಗಮಂದಿರ, ಖಾಸಗಿ ಕಟ್ಟಡ, ಕಲ್ಯಾಣ ಮಂಡಪ ಮುಂತಾದೆಡೆ ಬಾಡಿಗೆ ಕೊಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ.

ಶೌಚಾಲಯವಾದ ಗುರುಭವನ ಕಟ್ಟಡ:ಇಲ್ಲಿನ ದರ್ಗಾ ರಸ್ತೆಯಲ್ಲಿರುವ ‘ಗುರುಭವನ’ ಕಟ್ಟಡ ಈಗ ಸಂಪೂರ್ಣ ಹಾಳಾಗಿದೆ. ಸುಮಾರು 30 ವರ್ಷಗಳ ಹಿಂದೆ ಭೂಸೇನಾ ನಿಗಮವು ಈ ಕಟ್ಟಡ ಕಟ್ಟಿದೆ. ಅದಾಗಿ 10 ವರ್ಷ ಇಲ್ಲಿ ಶಿಕ್ಷಕರ ಚಟುವಟಿಕೆಗಳು ಸಾಂಗವಾಗಿ ಸಾಗಿದ್ದವು. ಆದರೆ, ಕಟ್ಟಡದ ವಿನ್ಯಾಸ, ಕಾಮಗಾರಿ ತೀರ ಕಳಪೆಯಾದ್ದರಿಂದ ಕೆಲವೇ ವರ್ಷಗಳಲ್ಲಿ ಅದು ಶಿಥಿಲಾವಸ್ಥೆ ತಲುಪಿತು. ತಳಪಾಯದಲ್ಲೇ ಬಿರುಕು ಬಿಟ್ಟು ಗೋಡೆ, ಕಿಟಕಿ, ಕಂಬಗಳು ಕುಸಿಯಲಾರಂಭಿಸಿದವು.

ಇದರ ಷಟರ್ ಎಳೆದ ಈಗ ಎರಡು ದಶಕ ಕಳೆದಿವೆ. ಸುತ್ತಮುತ್ತಲಿನ ಜನ ಇದೇ ಕಟ್ಟಡವನ್ನು ಮಲ– ಮೂತ್ರ ವಿಸರ್ಜನೆಗೆ ಬಳಸುತ್ತಿದ್ದಾರೆ. ತ್ಯಾಜ್ಯ ಸಂಗ್ರಹ ಮಾಡಿದ್ದಾರೆ. ಮುಳ್ಳಿನ ಕಂಟಿ ಬೆಳೆದು ಸುತ್ತಲಿನ ಜಾಗ ಗಬ್ಬೆದ್ದು ನಾರುತ್ತಿದೆ.

ಈ ಹಳೆಯ ಕಟ್ಟಡವನ್ನೇ ಒಡೆದುಹಾಕಿ ಅದೇ ಜಗದಲ್ಲಿ ಮೂರು ಅಂತಸ್ತಿನ ಭವನ ನಿರ್ಮಿಸಬೇಕು ಎಂಬ ಸಲಹೆ ಶಿಕ್ಷಕರದ್ದು. ಆದರೆ, ಇಲ್ಲಿನ ಜಾಗ ಕೇವಲ 100X100 ಅಳತೆ ಮಾತ್ರ ಇದೆ. ಗುರುಭವನಕ್ಕೆ ಸರಿಯಾಗಿ ಒಂದು ಎಕರೆ ಸಿ.ಎ. ನಿವೇಶನ ಅಗತ್ಯ. ನಗರದಲ್ಲಿ ಎಲ್ಲಿಯೂ ಇಷ್ಟು ವಿಸ್ತಾರವಾದ ಜಾಗ ಇಲ್ಲ ಎಂಬುದೇ ಸಮಸ್ಯೆಯ ಮೂಲ.

₹ 25 ಲಕ್ಷ ನೀಡಿದ್ದ ತನ್ವೀರ್‌ ಸೇಠ್‌:ತನ್ವೀರ್‌ ಸೇಠ್‌ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿದ್ದಾಗ ನಗರದಲ್ಲಿ ಗುರುವಭವನಕ್ಕಾಗಿಯೇ ₹ 25 ಲಕ್ಷ ಅನುದಾನ ಮಂಜೂರು ಮಾಡಿದ್ದರು. ಆ ಹಣ ಕೂಡ ಇನ್ನೂ ಶಿಕ್ಷಕರ ಕಲ್ಯಾಣ ನಿಧಿಯಲ್ಲೇ ದೂಳು ತಿನ್ನುತ್ತಿದೆ.

ಶಿಕ್ಷಕರ ಭವನವನ್ನು ಸರ್ಕಾರ ನಿರ್ಮಿಸುವುದಿಲ್ಲ. ಸರ್ಕಾರ ಜಾಗ ಮಾತ್ರ ನೀಡುತ್ತದೆ. ಶಿಕ್ಷಕರ ಸಂಘದಿಂದ ಎಷ್ಟು ವಂತಿಗೆ ಸಂಗ್ರಹವಾಗುತ್ತದೋ ಅಷ್ಟೇ ಪ್ರಮಾಣದ ಹಣವನ್ನು ಕಲ್ಯಾಣ ನಿಧಿ ಕೂಡ ನೀಡುತ್ತದೆ. ಈ ಎರಡರ ಸಮ್ಮಿಳತದಿಂದ ಮಾತ್ರ ಭವನ ನಿರ್ಮಿಸಬೇಕು ಎಂಬದು ನಿಯಮ.

ಸಾಕಷ್ಟು ಸಂಖ್ಯೆಯ ಶಿಕ್ಷಕರಿದ್ದೂ, ನಿಧಿ ಸಂಗ್ರಹಿಸಲು ಸಿದ್ಧರಿದ್ದೂ ಭವನದ ಆಸೆ ಮಾತ್ರ ಇನ್ನೂ ಈಡೇರುವ ಲಕ್ಷಣಗಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.