ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಆಳಂದ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಮಾಜಿ ಶಾಸಕ ಸುಭಾಷ ಗುತ್ತೇದಾರ ಅಡ್ಡಿಸುತ್ತಿದ್ದಾರೆ ಎಂದು ಸರಸಂಬಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಹಕಾರ ಸಂಘಗಳ ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ ಮುಗುಳೆ, ಪಂಡಿತ ಜಿಡಗೆ, ತಾ.ಪಂ ಮಾಜಿ ಸದಸ್ಯ ಸಾತಲಿಂಗಪ್ಪ ಪಾಟೀಲ, ಸಂತೋಷ ಭಕರೆ, ಪೃಥ್ವಿರಾಜ ಮುಲಗೆ, ರಾಜೇಂದ್ರ ಖಾನಾಪುರೆ ಅವರು ತಮ್ಮ ಆರೋಪದಲ್ಲಿ ‘ಸರಸಂಬಾ ಗ್ರಾಮದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಪುತ್ರನ ಸೂಚನೆ ಮೇರೆಗೆ ಜಮೀನುದಾರರು ಮೂಲಕ ತಡೆಯೊಡ್ಡಿದ್ದಾರೆ. ಸರಸಂಬಾ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಯಾತ್ರಿ ನಿವಾಸ ಮಂಜೂರಾಗಿದ್ದು, ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ರದ್ದುಪಡಿಸಿದ್ದರು’ ಎಂದರು.
‘ಶಾಸಕ ಬಿ.ಆರ್.ಪಾಟೀಲರ ಕಳೆದ ಅವಧಿಯಲ್ಲಿನ ಅಮರ್ಜಾ ಅಣೆಕಟ್ಟೆಗೆ ಭೀಮಾ ನದಿ ನೀರು ಭರ್ತಿ ಕಾರ್ಯವನ್ನು ಸುಭಾಷ ಗುತ್ತೇದಾರ ತಮ್ಮ ಅವಧಿಯಲ್ಲಿ ಏಕೆ ಪೂರ್ಣಗೊಳಿಸಲಿಲ್ಲ? ಪಡಸಾವಳಿ ಗ್ರಾಮಕ್ಕೆ ಪಿಯು ಕಾಲೇಜು ಮಂಜೂರಾಗಿದೆ ಎಂದು ಜನರಿಗೆ ಸುಳ್ಳು ಹೇಳಿದರು. ಇಂದಿಗೂ ಪಡಸಾವಳಿ ಗ್ರಾಮದಲ್ಲಿ ಕಾಲೇಜು ಆರಂಭಿಸಲಿಲ್ಲ ಏಕೆ’ ಎಂದು ಪ್ರಶ್ನಿಸಿದ್ದಾರೆ.
‘ಅಭಿವೃದ್ಧಿ ಹೆಸರಲ್ಲಿ ಶಾಸಕರಿಂದ ಹಣ ಲೂಟಿ’
ಆಳಂದ: ‘ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ಹೆಸರಲ್ಲಿ ಶಾಸಕ ಬಿ.ಆರ್.ಪಾಟೀಲ ಅವರು ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ತಡಕಲ ಗ್ರಾ.ಪಂ ಅಧ್ಯಕ್ಷೆ ನಾಗಮ್ಮ ಜಯಾನಂದ ಆಪಾದಿಸಿದ್ದಾರೆ.
ಸರಸಂಬಾ ಗ್ರಾಮದಲ್ಲಿ ಶಾಸಕರಿಂದ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡಲಾಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕೆರೆಗಳನ್ನು ಬದಲಾಯಿಸಿ ನಾಲಾ ಹೂಳೆತ್ತುವ ಕಾಮಗಾರಿ ಕೈಗೊಂಡಿರುವುದು ಏಕೆ ? ಅಮರ್ಜಾ ಅಣೆಕಟ್ಟೆ ಭರ್ತಿ ಯೋಜನೆಯಡಿ 8 ಕೆರೆಗಳಿಗೆ ನೀರು ತುಂಬುವ ಯೋಜನೆ ₹50 ಕೋಟಿ ವೆಚ್ಚದ ಯೋಜನೆ ಮಂಜೂರು ಮಾಡಿರುವುದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಪ್ರಯತ್ನದ ಫಲವಾಗಿದೆ’ ಎಂದು ತಿಳಿಸಿದರು.
‘ತಾಲ್ಲೂಕಿನಲ್ಲಿ ಶಿರಪುರ ಮಾದರಿ ಕಾಮಗಾರಿ ಕೈಗೊಂಡ ಸ್ಥಳದಲ್ಲಿಯೇ ಮತ್ತೆ ಕಾಮಗಾರಿ ಕೈಗೊಂಡು ಹಣ ಎತ್ತಿ ಹಾಕಲಾಗುತ್ತಿದೆ. ಸರಸಂಬಾ ಗ್ರಾಮದ ಸಂಪರ್ಕ ರಸ್ತೆಯಲ್ಲಿ ಜಮೀನು ಕಳೆದುಕೊಂಡ 9 ಜನ ರೈತರಲ್ಲಿ ದುರುದ್ದೇಶದಿಂದ ನಾಗರಾಜ ಪಾಟೀಲ ಅವರಿಗೆ ಮಾತ್ರ ಪರಿಹಾರ ನೀಡಿಲ್ಲ ಏಕೆ’ ಎಂದು ನಾಗಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.