ADVERTISEMENT

ಪ್ರತಿ ಡಯಾಲಿಸಿಸ್ ರೋಗಿಗೆ ₹1,500 ಭರಿಸಲು ಕ್ರಮ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಪೂರ್ಣಿಮಾ ಪಿ.ಎಂ.ಬಿರಾದಾರ ಡಯಾಲಿಸಿಸ್ ಕೇಂದ್ರದ ವಾರ್ಷಿಕೋತ್ಸವದಲ್ಲಿ ಡಾ.ಶರಣಪ್ರಕಾಶ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:03 IST
Last Updated 3 ಮಾರ್ಚ್ 2026, 5:03 IST
ಕಲಬುರಗಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ಣಿಮಾ ಪಿ.ಎಂ.ಬಿರಾದಾರ ಡಯಾಲಿಸಿಸ್ ಕೇಂದ್ರದ ಐದನೇ ವಾರ್ಷಿಕೊತ್ಸವವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು
ಕಲಬುರಗಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ಣಿಮಾ ಪಿ.ಎಂ.ಬಿರಾದಾರ ಡಯಾಲಿಸಿಸ್ ಕೇಂದ್ರದ ಐದನೇ ವಾರ್ಷಿಕೊತ್ಸವವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು   

ಕಲಬುರಗಿ: ‘ಪೂರ್ಣಿಮಾ ಬಿರಾದಾರ ಡಯಾಲಿಸಿಸ್‌ ಕೇಂದ್ರದಲ್ಲಿ ಡಯಾಲಿಸಿಸ್‌ ಪ್ರತಿ ರೋಗಿಗೆ ಸರ್ಕಾರದಿಂದ ₹1,500 ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು.

ನಗರದ ಸೇಡಂ ರಸ್ತೆಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಗರದ ಏಷ್ಯನ್ ಬಿಜಿನೆಸ್ ಸೆಂಟರ್‌ನಲ್ಲಿರುವ ಪೂರ್ಣಿಮಾ ಪಿ.ಎಂ.ಬಿರಾದಾರ ಡಯಾಲಿಸಿಸ್ ಕೇಂದ್ರದ 5ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದೆಂದರೆ ಕಠಿಣ ಕೆಲಸ. ಟ್ರಸ್ಟ್‌ನ ಪರೋಪಕಾರ ಕೆಲಸ ನಿಜಕ್ಕೂ ಅಭಿನಂದನಾರ್ಹ. ವೈದ್ಯ ಡಾ. ಪಿ.ಎಂ. ಬಿರಾದಾರ ಅವರ ಪಾತ್ರವೂ ಹಿರಿದಾಗಿದೆ’ ಎಂದರು.

ADVERTISEMENT

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್‌. ಅಪ್ಪ ಮಾತನಾಡಿ, ‘ಒಬ್ಬರನ್ನು ಬದುಕುಳಿಸುವ ಕೆಲಸ ಅಷ್ಟು ಸುಲಭವಲ್ಲ. ಬಡವರ ಸೇವೆ ಮಾಡಿದರೆ, ದೇವರ ಸೇವೆ ಮಾಡಿದಂತಾಗುತ್ತದೆ’ ಎಂದು ಹೇಳಿದರು.

ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಪಿ.ಎಸ್. ಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಗದುಗೆ ಮಠದ ಚರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಜಗದೇವ ಗುತ್ತೇದಾರ, ಡಯಾಲಿಸಿಸ್‌ ಕೇಂದ್ರದ ಮುಖ್ಯಸ್ಥ ಶರಣಬಸಪ್ಪ ಎಂ.ಪಪ್ಪಾ, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಎಚ್‍ಕೆಇ ಸೊಸೈಟಿ ಕಾರ್ಯದರ್ಶಿ ಉದಯ ಚಿಂಚೋಳಿ, ಡಯಾಲಿಸಿಸ್ ಕೇಂದ್ರ ಉಪಾಧ್ಯಕ್ಷ ಆನಂದ ದಂಡೋತಿ, ಶಿವರಾಜ ಖೂಬಾ, ಸಿದ್ದೇಶ್ವರ ಅನಂತಪುರ, ರಾಜು ನಾಗರಾಜ, ಗುರು ಮಂಠಾಳ, ಪ್ರಶಾಂತ ಗುಡ್ಡ ಉಪಸ್ಥಿತರಿದ್ದರು.

ಇದೇ ವೇಳೆ 5 ವರ್ಷಗಳ ಉಚಿತ ಸೇವೆಯ ಸಾರ್ಥಕ ಕ್ಷಣಗಳ ಸಂಭ್ರಮ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು.

ಕೇಂದ್ರದಲ್ಲಿ 5 ಡಯಾಲಿಸಿಸ್ ಯಂತ್ರಗಳಿದ್ದು ನಿತ್ಯ 12ರಿಂದ 15 ಮಂದಿಗೆ ಡಯಾಲಿಸಿಸ್ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಡ ರೋಗಿಗಳ ಕಿಡ್ನಿಕಸಿಗೂ ಯೋಜನೆ ರೂಪಿಸಲಾಗುತ್ತಿದೆ
ಶರಣಬಸಪ್ಪ ಎಂ.ಪಪ್ಪಾ ಡಯಾಲಿಸಿಸ್‌ ಕೇಂದ್ರದ ಮುಖ್ಯಸ್ಥ
ಸಾಧಕರಿಗೆ ಪ್ರಶಸ್ತಿ ಪ್ರದಾನ
ಅತ್ಯುತ್ತಮ ಸೇವೆಗಾಗಿ ಯಾದಗಿರಿ ಜಿಲ್ಲೆಯ ಶಹಾಪುರದ ಡಾ. ಶ್ರೀಕಾಂತ ಸಿನ್ನೂರ ಡಾ. ಎ.ವಿ. ದೇಶಮುಖ ಡಾ. ಬಸವರಾಜ ಕೊಡ್ಲಿ ಡಾ.ಕೆ.ವಿಜಯಮೋಹನ್ ಡಾ.ಸಂಪತಕುಮಾರ್ ಲೋಯಾ ಅವರಿಗೆ ‘ವೈದ್ಯ ರತ್ನ’ ಪ್ರಶಸ್ತಿ ಮತ್ತು ಸಮಾಜ ಸೇವಕ ಉಮೇಶ ಶೆಟ್ಟಿ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.