ಕಲಬುರಗಿ: ‘ವಿದ್ಯಾರ್ಥಿಗಳು ಧನಾತ್ಮಕ ವಿಚಾರ ಮಾಡಬೇಕೇ ಹೊರತು ಋಣಾತ್ಮಕ ವಿಚಾರ ಮಾಡಬಾರದು. ಉನ್ನತಮಟ್ಟದ ಸಾಧನೆಗೆ ಕನ್ನಡ ಮಾಧ್ಯಮದ ಕಲಿಕೆ ಪೂರಕವಾಗುತ್ತದೆ. ಕಲಿಕೆಗೆ ಶಿಸ್ತು ಅತ್ಯಂತ ಮುಖ್ಯವಾಗಿದೆ’ ಎಂದು ಮುದಗಲ್ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಹೇಳಿದರು.
ದೊಡ್ಡಪ್ಪ ಅಪ್ಪ ವಸತಿ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಿಜ್ಞಾನ ಚಟುವಟಿಕೆಗಳ ಉದ್ಘಾಟನೆ, ನೂತನ ವಿದ್ಯಾರ್ಥಿಗಳ ಸ್ವಾಗತ, ರ್‍ಯಾಂಕ್ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಳ್ಳಬೇಕು. ಜೀವನದ ಅಡೆತಡೆಗಳು, ಕೌಟುಂಬಿಕ ಸಮಸ್ಯೆಗಳು ಬಂದರೆ ಅವುಗಳನ್ನು ಪರಿಹರಿಸಿಕೊಂಡು ಬದುಕಬೇಕು. ಬದುಕು ರೂಪಿಸಿಕೊಂಡು ಇತಿಹಾಸವಾಗಬೇಕು’ ಎಂದು ಹೇಳಿದರು.
ಹೃದ್ರೋಗ ತಜ್ಞ ಡಾ.ಈರಣ್ಣ ಹೀರಾಪುರ ಮಾತನಾಡಿ, ‘ಮನುಷ್ಯನಿಗೆ ಸಾಕ್ಷರತೆ ಮತ್ತು ಸಂಸ್ಕಾರ ತುಂಬಾ ಮುಖ್ಯ. ಜೀವನದಲ್ಲಿ ಕೇವಲ ಅಂಕ ಮಾತ್ರ ಮುಖ್ಯವಲ್ಲ. ನಿರಂತರ ಪರಿಶ್ರಮ ಮುಖ್ಯ’ ಎಂದು ಹೇಳಿದರು.
ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ರಾಮಕೃಷ್ಣ ರೆಡ್ಡಿ ಮಾತನಾಡಿ, ‘ಅಧ್ಯಾತ್ಮ ಮತ್ತು ವಿಜ್ಞಾನ ಒಟ್ಟಿಗೆ ಸಾಗಿದಾಗ ವಿದ್ಯಾರ್ಥಿಗಳಲ್ಲಿ ನೈಜ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ. ಕಲಿಕೆಯಲ್ಲಿ ಶ್ರದ್ಧೆ, ನಿಷ್ಠೆ, ಸಮರ್ಪಣಾ ಭಾವ ಇದ್ದರೆ ಮಾತ್ರ ಪ್ರಗತಿ ಸಾಧ್ಯವಿದೆ. ಇರುವ ಸೌಲಭ್ಯಗಳಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡು ಆದರ್ಶ ಮೆರೆಯಬೇಕು’ ಎಂದರು.
2025ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬಸಂತ್ ರೆಡ್ಡಿ, ನವಮಿ, ಆದಿತ್ಯ, ಶ್ರದ್ಧಾ ರೆಡ್ಡಿ ಅವರನ್ನು ಮತ್ತು ಅವರ ಪಾಲಕರನ್ನು ಗೌರವಿಸಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ವಿನೋದ್ ಕುಮಾರ್ ಎಲ್.ಪತಂಗೆ ಸ್ವಾಗತಿಸಿದರು. ಭಾಗ್ಯವತಿ ಎನ್. ಪಾಟೀಲ ಮತ್ತು ಸಿದ್ದರಾಮಯ್ಯ ನಿರೂಪಿಸಿದರು.
ಹೃದಯಾಘಾತಕ್ಕೆ ತಂಬಾಕು ಸೇವನೆ ಕಾರಣ:
ತಂಬಾಕು ಸೇವನೆ ಕ್ಯಾನ್ಸರ್ ಮಾತ್ರವಲ್ಲಿ ಹೃದಯಾಘಾತಕ್ಕೂ ಕಾರಣ ಎಂದು ವೈದ್ಯ ಡಾ.ಈರಣ್ಣ ಹೀರಾಪುರ ಹೇಳಿದರು. ಇತ್ತೀಚೆಗೆ ರಾಜ್ಯದಲ್ಲಿ ಯುವಜನತೆಯೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದರ ಕುರಿತು ಮಾತನಾಡಿದ ಅವರು ‘ಹೃದಯಾಘಾತಕ್ಕೆ ತಂಬಾಕು ಸೇವನೆ ಪ್ರಮುಖ ಕಾರಣ. ಮನುಷ್ಯ ದಿನಕ್ಕೆ ಕನಿಷ್ಠ 45 ನಿಮಿಷವಾದರೂ ನಡೆಯಬೇಕು. ಒಂದೇ ಕಡೆಗೆ ಕುಳಿತು ಕೆಲಸ ಮಾಡುವುದು. ಅತಿ ಹೆಚ್ಚು ಆಹಾರ ಸೇವನೆ ಮಾಡಿ ಅದನ್ನು ಕರಗಿಸಲು ವ್ಯಾಯಾಮ ಮಾಡದಿರುವುದು ಕೂಡ ಹೃದಯಾಘಾತಕ್ಕೆ ಕಾರಣ. ಹೃದಯಕ್ಕೆ ರಕ್ತ ಪರಿಚಲನೆ ನಿಂತಾಗ ಹೃದಯ ಬಡಿತ ನಿಲ್ಲುತ್ತದೆ. ಎದೆಯಲ್ಲಿ ಸತ್ತೇ ಹೋಗುತ್ತೇನೆ ಎಂಬ ನೋವಾಗುತ್ತಿದ್ದರೆ ಸಮೀಪದ ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿಕೊಳ್ಳಿ. ಹೃದಯದ ನೋವು ಬಂದ ಮೂರು ಆರು ಹನ್ನೆರಡು ಗಂಟೆಗಳಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ. ನಡೆಯುವಾಗ ತೇಕು ಬಂದರೆ ಅದು ಹೃದಯ ಕಾಯಿಲೆ ಆಗಿರುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.