ADVERTISEMENT

ಮೂರನೇ ಅಲೆಗೆ ಸಿದ್ಧತೆ: ಕಲಬುರ್ಗಿಯಲ್ಲಿ 200, ತಾಲ್ಲೂಕಿನಲ್ಲಿ 10 ಐಸಿಯು ಬೆಡ್

ಸಂಭಾವ್ಯ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ

ಮನೋಜ ಕುಮಾರ್ ಗುದ್ದಿ
Published 11 ಜುಲೈ 2021, 19:30 IST
Last Updated 11 ಜುಲೈ 2021, 19:30 IST
ಜಿಮ್ಸ್ ಆಸ್ಪತ್ರೆ
ಜಿಮ್ಸ್ ಆಸ್ಪತ್ರೆ   

ಕಲಬುರ್ಗಿ: ಕೋವಿಡ್ ಎರಡನೇ ಅಲೆಯ ಪ್ರಭಾವ ಕಡಿಮೆಯಾದ ಬೆನ್ನಲ್ಲೇ ತಜ್ಞರ ಸಮಿತಿ ಸಂಭವನೀಯ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತವು ಕೋವಿಡ್ ನಿಯಂತ್ರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರಬಹುದು ಎಂಬ ಸೂಚನೆ ಕಾರಣ ಜಿಮ್ಸ್‌ನಲ್ಲಿ 100, ಖಾಸಗಿ ಆಸ್ಪತ್ರೆಗಳಲ್ಲಿ 100 ಎಸ್ಎನ್‌ಸಿಯು ಹಾಸಿಗೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಜಿಲ್ಲಾಡಳಿತವು ಸನ್ನದ್ಧವಾಗಿರಿಸಿದೆ.

ಏಪ್ರಿಲ್, ಮೇ ತಿಂಗಳಲ್ಲಿ ಕೋವಿಡ್‌ ಎರಡನೇ ಅಲೆಯು ಜಿಲ್ಲೆಯನ್ನು ಕಂಗೆಡಿಸಿತ್ತು. ಹೀಗಾಗಿ, ಜಿಮ್ಸ್‌, ಇಎಸ್ಐಸಿಯಲ್ಲಿನ ಎಲ್ಲ ಐಸಿಯು ಬೆಡ್‌ಗಳ ಜೊತೆಗೆ ಜಿಮ್ಸ್‌ ಆವರಣದಲ್ಲಿನ ತಾಯಿ, ಮಗುವಿನ ಆಸ್ಪತ್ರೆಯ ಎಸ್‌ಎನ್‌ಸಿಯು ವಾರ್ಡ್‌ಗಳನ್ನೂ ಬಳಸಿಕೊಳ್ಳಲಾಗಿತ್ತು.

ADVERTISEMENT

ಮೂರನೇ ಅಲೆ ಎದುರಾದರೆ ಆ ವಾರ್ಡನ್ನು ಮಕ್ಕಳ ಚಿಕಿತ್ಸೆಗೆಂದೇ ಮೀಸಲಿಡಲು ಜಿಲ್ಲಾಡಳಿತ ಈಗಾಗಲೇ ನಿರ್ದೇಶನ ನೀಡಿದೆ. ಅದರ ಜೊತೆಗೆ, ಮಕ್ಕಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿಯೂ 100 ಬೆಡ್‌ಗಳನ್ನು ಮೀಸಲಿರಿಸುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.

ಮಕ್ಕಳ ಮೇಲಿನ ಸಂಭವನೀಯ ಪರಿಣಾಮ ಬೀರುವ ಬಗ್ಗೆ ಚರ್ಚಿಸಲು ಭಾರತೀಯ ಮಕ್ಕಳ ತಜ್ಞವೈದ್ಯರ ಸಂಘ (ಐಎಪಿ), ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹಾಗೂ ನಗರದಲ್ಲಿರುವ ನಾಲ್ಕು ವೈದ್ಯಕೀಯ ಕಾಲೇಜುಗಳ ಮಕ್ಕಳ ವಿಭಾಗದ ಮುಖ್ಯಸ್ಥರನ್ನೊಳಗೊಂಡ ತಜ್ಞರ ಸಮಿತಿಯನ್ನು ಜಿಲ್ಲಾಧಿಕಾರಿ ಈಗಾಗಲೇ ರಚಿಸಿದ್ದಾರೆ.

ಬಾಧಿಸದು ಆಮ್ಲಜನಕದ ಕೊರತೆ

ಮೇ ತಿಂಗಳಲ್ಲಿ ಕೊರೊನಾ ತೀವ್ರ ವ್ಯಾಪಿಸಿದ್ದರಿಂದ ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯದ ಬೆಡ್‌ಗಳ ಕೊರತೆ ತೀವ್ರವಾಗಿತ್ತು. ಕೊರತೆಯನ್ನು ನೀಗಿಸಲು ಜಿಲ್ಲಾಡಳಿತವೇ ನಗರದ ಶಹಾಬಾದ್ ರಸ್ತೆಯ ಆಮ್ಲಜನಕ ತಯಾರಿಕಾ ಘಟಕವನ್ನು ವಶಕ್ಕೆ ಪಡೆದಿತ್ತು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಹಾಗೂ ಅಂದಿನ ಪೊಲೀಸ್ ಕಮಿಷನರ್‌ ಎನ್. ಸತೀಶಕುಮಾರ್‌ ಅವರು ಬಳ್ಳಾರಿಯ ವಿವಿಧ ಆಮ್ಲಜನಕ ತಯಾರಿಕಾ ಘಟಕಗಳೊಂದಿಗೆ ಸಂಪರ್ಕ ಸಾಧಿಸಿ ನಿತ್ಯವೂ ಒಂದು ಘನೀಕೃತ ಆಮ್ಲಜನಕ ಹೊತ್ತ ಕಂಟೇನರ್‌ ಜಿಲ್ಲೆಗೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು.

ಅಷ್ಟರಲ್ಲಿ ಅಫಜಲಪುರದ ತಾಲ್ಲೂಕು ಆಸ್ಪತ್ರೆ, ಕಲಬುರ್ಗಿಯ ಕೆಬಿಎನ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಹಲವು ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದರು. ಆದ್ದರಿಂದ ಜಿಲ್ಲಾಡಳಿತವು ಆದ್ಯತೆ ಮೇರೆಗೆ ನಗರದ ಇಎಸ್ಐಸಿ ಆಸ್ಪತ್ರೆ ಹಾಗೂ ಚಿಂಚೋಳಿ, ಚಿತ್ತಾಪುರ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ತಯಾರಿಕಾ ಹಾಗೂ ಸಂಗ್ರಹ ಘಟಕವನ್ನು ಆರಂಭಿಸಿದೆ. ಅದಕ್ಕೆ ಸಂಬಂಧಪಟ್ಟ ಉಪಕರಣಗಳು ಆಸ್ಪತ್ರೆಗಳಿಗೆ ತಲುಪಿವೆ.

‘ಕಾಂಗ್ರೆಸ್, ಬಿಜೆಪಿ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ, ಎನ್. ಧರ್ಮಸಿಂಗ್ ಪ್ರತಿಷ್ಠಾನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇರಿ ವಿವಿಧ ಸ್ವಯಂ ಸೇವಾ ಸಂಘಟನೆಗಳು ವಿವಿಧ ಆಸ್ಪತ್ರೆಗಳಿಗೆ ನೀಡಲೆಂದು ಜಂಬೊ ಸಿಲಿಂಡರ್‌ ಹಾಗೂ ಆಮ್ಲಜನಕ ಸಾಂದ್ರಕ ನೀಡಿದ್ದವು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಅಗತ್ಯವಿರುವಷ್ಟು ಜಂಬೊ ಸಿಲಿಂಡರ್‌ ಮತ್ತು ತಲಾ 15 ಆಮ್ಲಜನಕ ಸಾಂದ್ರಕಗಳನ್ನು ವಿವಿಧ ತಾಲ್ಲೂಕು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

623 ಮಕ್ಕಳಲ್ಲಿ ಅಪೌಷ್ಟಿಕತೆ

‘ಜಿಲ್ಲೆಯಲ್ಲಿ 623 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯಿದ್ದು, 26,462 ಮಕ್ಕಳಲ್ಲಿ ಮಧ್ಯಮ ಪ್ರಮಾಣದ ಅಪೌಷ್ಟಿಕತೆ ಇರುವುದನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿದೆ. ಈ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ವಿಶೇಷ ಗಮನ ಹರಿಸುವಂತೆ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

‘ಮೊದಲ ಹಾಗೂ ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರು. ಅದಕ್ಕೆ ಅಪೌಷ್ಟಿಕ ಮಕ್ಕಳತ್ತ ವಿಶೇಷ ಗಮನ ಹರಿಸಲಾಗಿದೆ. ಅವರಲ್ಲಿ ಪೌಷ್ಟಿಕತೆ ಪ್ರಮಾಣ ಹೆಚ್ಚಿಸಲು ಮತ್ತು ಆರೋಗ್ಯ ಸ್ಥಿತಿ ಗಮನಿಸಲು ವಿಶೇಷ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.