ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿ ಸೂಪರ್‌ಮಾರ್ಕೆಟ್‌ನಲ್ಲಿ ಭಾನುವಾರ ಜನರು ಲಕ್ಷ್ಮಿ ಪೂಜೆಗೆ ಬಾಳೆಕಂದು ಖರೀದಿಸಿದರು
ಪ್ರಜಾವಾಣಿ ಚಿತ್ರಗಳು
ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿ ಸಡಗರ–ಸಂಭ್ರಮದಿಂದ ಆಚರಿಸಲು ನಗರವೂ ಸೇರಿದಂತೆ ಜಿಲ್ಲೆ ಸಜ್ಜಾಗಿದೆ. ಹಬ್ಬದ ಮುನ್ನಾ ದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಆಲಂಕಾರಿಕ ವಸ್ತುಗಳು, ದೀಪಗಳು, ಆಕಾಶ ಬುಟ್ಟಿಗಳ ಖರೀದಿ ಭರಾಟೆ ಕಂಡು ಬಂತು.
ನಗರದ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ರಾಮಮಂದಿರ ವೃತ್ತ, ಆಳಂದ ನಾಕಾ, ಖರ್ಗೆ ಪೆಟ್ರೋಲ್ ಬಂಕ್ ವೃತ್ತ ಸೇರಿದಂತೆ ನಗರದ ಹಲವೆಡೆ ‘ಹಬ್ಬ’ದ ವಸ್ತುಗಳ ಮಾರಾಟ–ಖರೀದಿ ಕಂಡು ಬಂತು.
ಕಬ್ಬು, ಬಾಳೆದಿಂಡು, ಪೂಜೆ ಬಳಿಕ ಒಡೆಯುವ ಕುಂಬಳ, ಮನೆ–ಅಂಗಡಿಯಲ್ಲಿ ಕಟ್ಟುವ ಕುಂಬಳ, ತರಹೇವಾರಿ ಬಗೆಯ ಹಣ್ಣುಗಳು, ವಿವಿಧ ಬಗೆಯ ಹೂವುಗಳು–ಹೂಮಾಲೆ, ವಿವಿಧ ವಿನ್ಯಾಸ–ಗಾತ್ರದ ದೀಪಗಳು, ಬತ್ತಿ–ಎಣ್ಣೆ, ಆಕಾಶ ಬುಟ್ಟಿಗಳು ಸೇರಿದಂತೆ ಲಕ್ಷ್ಮಿ ಪೂಜೆಗೆ ಬೇಕಾದ ವಸ್ತುಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ವಾರಾಂತ್ಯ ಹಾಗೂ ಹಬ್ಬದ ಮುನ್ನಾದಿನವಾದ್ದರಿಂದ ಸೂಪರ್ ಮಾರುಕಟ್ಟೆಯಲ್ಲಿ ಭಾನುವಾರ ಇಡೀ ದಿನ ಜನದಟ್ಟಣೆ, ವಾಹನಗಳ ದಟ್ಟಣೆ ಕಂಡುಬಂತು.
ದರ ಏರಿಳಿತ
ಸೇಬು ₹ 100ಕ್ಕೆ 4ರಿಂದ 5 ಹಣ್ಣು, ಚಿಕ್ಕು ₹ 100 ಕೆಜಿ, ಸೀತಾಫಲ ₹ 50ಕ್ಕೆ 6 ಹಣ್ಣು, ದಾಳಿಂಬೆ ₹ 100ಕ್ಕೆ 5 ಹಣ್ಣು, ಪೇರಲ ₹ 60ಕ್ಕೆ ಕೆಜಿ, ಬಾಳೆಹಣ್ಣು ಡಜನ್‌ಗೆ ₹ 30ರಿಂದ ₹ 60, ಏಲಕ್ಕಿ ಬಾಳೆಹಣ್ಣು ಡಜನ್‌ಗೆ ₹ 100ನಂತೆ ಮಾರಾಟವಾದವು.
ಇದರೊಂದಿಗೆ ಲಕ್ಷ್ಮಿ ಪೂಜೆಗೆ ಬೇಕಾಗುವ ಐದು ಬಗೆಯ ತಲಾ ಎರಡು ಹಣ್ಣುಗಳ ಬುಟ್ಟಿ ₹ 100ರಂತೆ ಮಾರಾಟವಾಯಿತು. ಅದರಲ್ಲಿ ಚಿಕ್ಕು, ಪೇರಲ, ಸೇಬು, ಮೂಸಂಬಿ, ಸೀತಾಫಲ ಇದ್ದವು. ಇದಲ್ಲದೇ ಮನೆ–ದೇವರ ಮನೆಗೆ ತೋರಣ ಕಟ್ಟಲು ಬಳಸುವ ಮಾವಿನ ಎಲೆ, ಚಂಡು ಪುಷ್ಪ ಸಹಿತ ಗಿಡಗಳ ಗುಚ್ಛ, ಹಸಿ ಹುಣಸೆ, ಬೆಟ್ಟದ ನೆಲ್ಲಿ, ರೆಡಿಮೇಡ್ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಸುಮಗಳ ಮಾಲೆಯ ಮಾರಾಟವೂ ಜೋರಾಗಿತ್ತು.
ವಾಹನಗಳ ಅಲಂಕಾರ, ಮನೆಗಳ ಸಿಂಗಾರದಲ್ಲಿ ಅತಿಹೆಚ್ಚು ಬಳಕೆಯಾಗುವ ಚಂಡು ಹೂವು ದೀಪಾವಳಿ ಹಬ್ಬದಲ್ಲಿ ಅತಿಹೆಚ್ಚು ಬೇಡಿಕೆ ಪಡೆಯುವ ಪುಷ್ಪ. ಮಾರುಕಟ್ಟೆ ತುಂಬ ಹಳದಿ ಹಾಗೂ ಬಂಗಾರದ ವರ್ಣದ ಚಂಡು ಹೂವಿನದ್ದೇ ಘಮ.
‘ಚಂಡು ಹೂವು ಪ್ರತಿ ಕೆಜಿಗೆ ₹ 80ರಿಂದ ₹ 120ರಂತೆ, ಸೇವಂತಿಗೆ ಪ್ರತಿ ಕೆಜಿಗೆ ₹ 300, ಬಟನ್ ಗುಲಾಬಿ ಪ್ರತಿ ಕೆಜಿಗೆ ₹ 400, ಮಲ್ಲಿಗೆ ಮಾಲೆ ₹ 50ಕ್ಕೆ ಮೂರು ಮೊಳ, ಸೇವಂತಿಗೆ ಹೂವಿನ ಹಾರ ₹ 50ಕ್ಕೆ ಮೂರು ಮೊಳ, ಮಲ್ಲಿಗೆ–ಕನಕಾಂಬರ ಜೋಡಿ ಮಾಲೆ ₹ 50ಕ್ಕೆ ಎರಡು ಮೊಳ, ಮಲ್ಲಿಗೆ–ಬಟನ್ ಗುಲಾಬಿ ಮಾಲೆ ₹ 50ಕ್ಕೆ ಎರಡು ಮೊಳದಂತೆ ಮಾರಾಟ ಮಾಡಲಾಗುತ್ತಿದೆ’ ಎಂದು ಸೂಪರ್ ಮಾರುಕಟ್ಟೆಯ ಹೂವಿನ ವ್ಯಾಪಾರಿ ಉಸ್ಮಾನ್ ಅಲಿ ಫೂಲ್‌ವಾಲೆ ತಿಳಿಸಿದರು.
‘ಈ ಸಲ ಕುಂಬಳಕಾಯಿ ದರ ಸಗಟು ಮಾರುಕಟ್ಟೆಯಲ್ಲೇ ದುಪ್ಪಟ್ಟಾಗಿದೆ. ಉತ್ತಮ ಗುಣಮಟ್ಟದ ಕಾಯಿಯನ್ನು ಪ್ರತಿ ಕೆ.ಜಿಗೆ ₹80ರಂತೆ ಸೋಲಾಪುರದಿಂದ ಖರೀದಿಸಿ ತಂದಿದ್ದೇವೆ. ನಮ್ಮಲ್ಲಿ ಗಾತ್ರ ಹಾಗೂ ಗುಣಮಟ್ಟಕ್ಕೆ ತಕ್ಕಂತೆ ಕುಂಬಳಕಾಯಿಯನ್ನು ₹60ರಿಂದ ₹200ರಂತೆ ಮಾರಾಟ ಮಾಡಲಾಗುತ್ತಿದೆ’ ಎಂದು ವ್ಯಾಪಾರಿ ಸೋಹೆಲ್ ತಿಳಿಸಿದರು.
ಹಣತೆ, ಪಣತಿ, ಆಕಾಶ ಬುಟ್ಟಿ..
ಬೆಳಕಿನ ಹಬ್ಬಕ್ಕಾಗಿ ನಗರದ ಹಲವೆಡೆ ಹಣತೆ, ಪಣತಿಗಳ ಮಾರಾಟ ಕಂಡು ಬಂತು. ಮಣ್ಣಿನ ಹಣತೆ–ಪಣತಿಗಳ ನಡುವೆ, ಹೊರಗಡೆಯಿಂದ ಆಮದು ತರಿಸಲಾಗಿದ್ದ ದೀಪಗಳ ಮಾರಾಟವೂ ನಡೆಯಿತು. ಕಾಲಕ್ಕೆ ತಕ್ಕಂತೆ ದೀಪಗಳು ಪರಿವರ್ತನೆಯಾಗಿದ್ದು, ಗಾತ್ರ, ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಕಂಡಿವೆ. ಸಾಂಪ್ರದಾಯಿಕ ದೀಪಗಳೊಂದಿಗೆ ಆನೆಯು ಲಕ್ಷ್ಮಿಮೂರ್ತಿ, ಪಂಚ ದೀಪಗಳನ್ನು ಹೊತ್ತ ವಿನ್ಯಾಸ, ಪೂರ್ಣಕುಂಭದಡಿ ಪಂಚ ದೀಪಗಳು ಇರುವ ವಿನ್ಯಾಸಗಳು ಗಮನ ಸೆಳೆದವು.
ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿ ಸೂಪರ್‌ಮಾರ್ಕೆಟ್‌ನಲ್ಲಿ ಭಾನುವಾರ ಜನರು ಲಕ್ಷ್ಮಿ ಪೂಜೆಗೆ ಪುಷ್ಪಗಳನ್ನು ಖರೀದಿಸಿದರು
ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ಜನರು ಹಬ್ಬದ ಖರೀದಿ ಭರಾಟೆ ಕಂಡು ಬಂತು
ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿಯಲ್ಲಿ ದೀಪಗಳನ್ನು ಖರೀದಿಯಲ್ಲಿ ತೊಡಗಿದ್ದ ಜನ
‘ಲಕ್ಷ್ಮಿ ಪೂಜೆ– ಮನೆ ಸಿಂಗಾರ’
‘ದೀಪಾವಳಿ ನಮಗೆ ದೊಡ್ಡ ಹಬ್ಬ. ಮನೆ ಮಂದಿಗೆಲ್ಲ ಬಟ್ಟೆ ಖರೀದಿಸಿದ್ದೇವೆ. ಮನೆ ಅಲಂಕಾರ ದೇವರ ಮನೆ ಸಿಂಗಾರ ಈ ಹಬ್ಬದ ವಿಶೇಷ. ಇದಕ್ಕಾಗಿ 3 ಕೆಜಿ ಚಂಡು ಹೂ ಖರೀದಿಸಿದೆ. ಇದರೊಂದಿಗೆ ಲಕ್ಷ್ಮಿ ಪೂಜೆಗೆ ಬೇಕಾದ ಹೊಸ ಸೀರೆ ಒಂದು ಜೋಡಿ ಕಬ್ಬು ಎರಡು ಬಾಳೆಕಂದು ಐದು ಬಗೆಯ ಹಣ್ಣುಗಳು ಎಲೆ–ಅಡಿಕೆ ಅರಿಸಿನ–ಕುಂಕುಮ ದೀಪಗಳನ್ನು ಖರೀದಿಸಿದೆವು. ಈ ಸಲ ಉತ್ತಮ ಮಳೆಯಾಗಿದ್ದರಿಂದ ದರ ತುಸು ಸಹನೀಯವಾಗಿದೆ’ ಎಂದು ಕಲಬುರಗಿಯ ಅಕ್ಕಮಹಾದೇವಿ ಕಾಲೊನಿಯ ನಿವಾಸಿ ಶರಣು ಜಾಧವ ಪ್ರತಿಕ್ರಿಯಿಸಿದರು.
ಪಟಾಕಿ ಮಾರಾಟ, ಬಟ್ಟೆಗಳ ಖರೀದಿ...
ದೀಪಾವಳಿ ಅಂಗವಾಗಿ ನಗರದಲ್ಲಿ ಬಟ್ಟೆಗಳ ಖರೀದಿ ಜೋರಾಗಿತ್ತು. ಸೂಪರ್ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಗಳಲ್ಲಿ ಜನದಟ್ಟಣೆ ಕಂಡು ಬಂತು. ವಿಶೇಷವಾಗಿ ಸೀರೆಗಳ ಮಾರಾಟ ಜೋರಾಗಿತ್ತು. ಶಾಪಿಂಗ್ ಮಾಲ್‌ಗಳು ಹಿರಿ–ಕಿರಿಯರೆಂಬ ಭೇದವಿಲ್ಲದೇ ತುಂಬಿ ತುಳುಕುತ್ತಿದ್ದವು. ಇದರೊಂದಿಗೆ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಪಟಾಕಿ ಮಾರಾಟವೂ ಜೋರಾಗಿತ್ತು.
ಇಂದಿನಿಂದ ಮೂರು ದಿನ
ಭಾನುವಾರ ‘ನೀರು ತುಂಬುವಿಕೆ’ಯೊಂದಿಗೆ ದೀಪಾವಳಿ ಆಚರಣೆ ಶುರುವಾಗಿದ್ದು ಸೋಮವಾರ ನರಕ ಚತುರ್ದಶಿ ನಡೆಯಲಿದೆ. ಪ್ರಾತಃಕಾಲ ಅಭ್ಯಂಗ ಸ್ನಾನ ವೀರತಿಲಕ ಮನೆಯ ‘ಲಕ್ಷ್ಮಿಯಿಂದ’ ಆರತಿ ನಡೆಯಲಿದೆ. ಸಂಜೆ ಮಹಾಲಕ್ಷ್ಮಿ ಪೂಜೆ ಜರುಗಲಿದೆ. ಮಂಗಳವಾರ ದೀಪಾವಳಿ ಅಮಾವಾಸ್ಯೆ ನಡೆಯಲಿದ್ದು ಬುಧವಾರ ಬಲಿಪಾಡ್ಯ ಆಚರಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.