ADVERTISEMENT

ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಬೇಡಿ:ಡಾ.ಟಿ.ಎನ್‌. ಪ್ರಕಾಶ ಕಮ್ಮರಡಿ

ಎಪಿಎಂಸಿ ವರ್ತಕರಿಗೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ ಕಮ್ಮರಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 13:12 IST
Last Updated 28 ಸೆಪ್ಟೆಂಬರ್ 2018, 13:12 IST
ಕಲಬುರ್ಗಿಯಲ್ಲಿ ಶುಕ್ರವಾರ ನಡೆದ ‘ಭಾವಾಂತರ ಯೋಜನೆ ಸಮಾವೇಶ’ದಲ್ಲಿ ಡಾ.ಟಿ.ಎನ್‌. ಪ್ರಕಾಶ ಕಮ್ಮರಡಿ ಹಾಗೂ ಬಸವರಾಜ ಜವಳಿ ಚರ್ಚೆಯಲ್ಲಿ ತೊಡಗಿದರು
ಕಲಬುರ್ಗಿಯಲ್ಲಿ ಶುಕ್ರವಾರ ನಡೆದ ‘ಭಾವಾಂತರ ಯೋಜನೆ ಸಮಾವೇಶ’ದಲ್ಲಿ ಡಾ.ಟಿ.ಎನ್‌. ಪ್ರಕಾಶ ಕಮ್ಮರಡಿ ಹಾಗೂ ಬಸವರಾಜ ಜವಳಿ ಚರ್ಚೆಯಲ್ಲಿ ತೊಡಗಿದರು   

ಕಲಬುರ್ಗಿ: ‘ಸರ್ಕಾರ ಯಾವುದೇ ಬೆಳೆಗೆ ನಿಗದಿ ಮಾಡಿದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ವ್ಯಾಪಾರಿಗಳು ಖರೀದಿ ಮಾಡಬಾರದು. ಆಗ ಮಾತ್ರ ರೈತ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯ’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ ಕಮ್ಮರಡಿ ಹೇಳಿದರು.

ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಆಹಾರಧಾನ್ಯ ವ್ಯಾಪಾರಿಗಳ ಸಂಘ, ಗುಲಬರ್ಗಾ ದಾಲ್‌ ಮಿಲ್ಸ್‌ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ ‘ಉತ್ತರ ಕರ್ನಾಟಕ ಎಪಿಎಂಸಿ ವರ್ತಕರು ಹಾಗೂ ರೈತರ ‘ಭಾವಾಂತರ ಯೋಜನೆ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಮಾತ್ರ ರೈತರನ್ನು ಕಾಪಾಡುವ ಜವಾಬ್ದಾರಿ ಹೊರಬೇಕು ಎಂಬ ಮನಸ್ಥಿತಿ ಸರಿಯಲ್ಲ. ಇದರಲ್ಲಿ ವ್ಯಾಪಾರಿಗಳ ಪಾಲೂ ಇದೆ. ಬೆಂಬಲ ಬೆಲೆಗಿಂತ ಹೆಚ್ಚಿನ ದರ ನೀಡಿ ಕೃಷಿ ಉತ್ಪನ್ನ ಖರೀದಿಸುವುದು ಸಾಧ್ಯವಿದೆ’ ಎಂದರು.

ADVERTISEMENT

‘ಎಪಿಎಂಸಿ ವರ್ತಕರು ಬೆಂಬಲ ಬೆಲೆಯಷ್ಟೇ ದರದಲ್ಲಿ ಕೃಷಿ ಉತ್ಪನ್ನ ಖರೀದಿ ಮಾಡಲು ಮುಂದೆಬಂದರೆ ಕೇಂದ್ರ ಸರ್ಕಾರ ಶೇ 15ರಷ್ಟು ಕಮೀಷನ್‌ ನೀಡುತ್ತದೆ’ ಎಂದೂ ಅವರು ಮಾಹಿತಿ ನೀಡಿದರು.

‘ರೈತರಷ್ಟೇ ಸಮಸ್ಯೆಗಳು ಕೃಷಿ ಮಾರುಕಟ್ಟೆ ವ್ಯಾಪಾರಿಗಳಿಗೂ ಇವೆ. ಈ ಇಬ್ಬರ ಸಮಸ್ಯೆಗಳನ್ನು ಒಟ್ಟೊಟ್ಟಿಗೇ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂಬುದು ನನ್ನ ಗಮನಕ್ಕೆ ಬಂದಿದೆ. ಇಲ್ಲದಿದ್ದರೆ ಒಬ್ಬರಿಗೆ ಲಾಭ ಮಾಡುವ ಭರದಲ್ಲಿ ಇನ್ನೊಬ್ಬರಿಗೆ ಹಾನಿ ಆಗುವ ಸಾಧ್ಯತೆ ಇದೆ. ಈ ವಿಚಾರವನ್ನು ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ’ ಎಂದು ಅವರು ಭರವಸೆ ನೀಡಿದರು.

‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ದ್ವಿದಳ ಧಾನ್ಯ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ವರ್ತಕರು ಹಾಗೂ ದಾಲ್‌ ಮಿಲ್‌ ಮಾಲೀಕರೂ ಹಾನಿ ಅನುಭವಿಸುತ್ತಿದ್ದಾರೆ. ಇದರ ಪರಿಹಾರಕ್ಕೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು. ಶೀಘ್ರದಲ್ಲೇ ಮತ್ತೊಮ್ಮೆ ಸಭೆ ಕರೆದು ಚರ್ಚಿಸುತ್ತೇನೆ’ ಎಂದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ ಜವಳಿ, ದಾಲ್‌ಮಿಲ್ಸ್‌ ಅಧ್ಯಕ್ಷ ಚಿದಂಬರರಾವ ಪಾಟೀಲ, ವಿವಿಧ ವರ್ತಕರ ಸಂಘಗಳ ಮುಖಂಡರಾದ ಎಸ್‌.ಎಸ್‌.ಪಾಟೀಲ, ಸೋಮನಾಥ ಜೈನ್, ಶಂಕರಣ್ಣ ಗದ್ದಿಕೇರಿ, ಬಸವರಾಜ, ಶ್ರೀಮಂತ ಮಾತನಾಡಿದರು.

ಈಗ ಯಾವ ಸರ್ಕಾರವೂ ಇಲ್ಲ..!

‘ರಾಜ್ಯ ಹಾಗೂ ಕೇಂದ್ರದಲ್ಲಿ ಈಗ ಯಾವ ಸರ್ಕಾರ ಅಸ್ತಿತ್ವದಲ್ಲಿದೆ? ಖರೇ ಹೇಳಬೇಕೆಂದರೆ ಯಾರ ಸರ್ಕಾರವೂ ಇಲ್ಲ. ಈಗಿರುವುದು ಲೋಕಸಭೆ ಚುನಾವಣೆಯ ತಾಲೀಮು ತಂಡಗಳು ಮಾತ್ರ...’

ಹೀಗೆಂದು ಲೇವಡಿ ಮಾಡಿದ್ದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಗಾರ. ‘ಈಗ ಎಲ್ಲರಿಗೂ ಮತಗಳ ಅವಶ್ಯಕತೆ ಹೆಚ್ಚಾಗಿದೆ. ಕಬ್ಬಿಣ ಕಾದಿದೆ, ಈಗಲೇ ಹೊಡಿದರೆ ಮಣಿಯುತ್ತದೆ...’ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.

‘ನಮ್ಮ ಭಾಗದ ರೈತರು, ವ್ಯಾಪಾರಿಗಳು ಸೇರಿಕೊಂಡು 50 ಶಾಸಕರ ಮುಂದಾಳತ್ವದಲ್ಲಿ ಒಮ್ಮೆ ವಿಧಾನಸಭೆಗೆ ಹೋಗಿ. ಆಗ ಸರ್ಕಾರಕ್ಕೆ ಬಿಸಿ ಮುಟ್ಟುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.