ಬಿ.ಆರ್.ಪಾಟೀಲ
ಕಲಬುರಗಿ: ‘ಸಚಿವ ಸ್ಥಾನಕ್ಕಾಗಿ ರಾಜೀನಾಮೆಯಂತಹ ಕೀಳುಮಟ್ಟಕ್ಕೆ ಇಳಿದು ಬೆದರಿಕೆ ಹಾಕುವಂತಹ ರಾಜಕಾರಣಿ ನಾನಲ್ಲ. ಸಚಿವ ಸ್ಥಾನ ಸಿಗಲೇಬೇಕು ಎಂಬ ಮೂಲಭೂತ ಹಕ್ಕಿದೆಯಾ? ಎಷ್ಟು ಜನರು ಶಾಸಕರೇ ಆಗಲ್ಲ. ನಾನು ಶಾಸಕ ಆಗಬೇಕು ಎಂದೂ ಬಂದವನಲ್ಲ’ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರ ಮೊದಲ ಬಾರಿಗೆ ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಎಸ್.ಆರ್. ಬೊಮ್ಮಾಯಿ ಅವರು ಒತ್ತಾಯ ಮಾಡಿ ಟಿಕೆಟ್ ಕೊಟ್ಟಿದ್ದರಿಂದ ಚುನಾವಣೆಗೆ ಸ್ಪರ್ಧಿಸಿ, ಇಲ್ಲಿಯವರೆಗೆ ನಾಲ್ಕು ಬಾರಿ ಶಾಸಕನಾಗಿದ್ದೇನೆ. ಒಮ್ಮೆ ಪರಿಷತ್ ಸದಸ್ಯನಾಗಿದ್ದೇನೆ. ನನಗೆ ಅಷ್ಟು ಸಾಕು, ಮುಂದೆ ಚುನಾವಣೆಗೂ ನಿಲ್ಲುವುದಿಲ್ಲ’ ಎಂದರು.
‘ಈ ಹಿಂದೆ ಶಾಸಕಾಂಗ ಸಭೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದು ನಿಜ. ಅಂತಹ ಸಮಯ ಬಂದರೆ ರಾಜೀನಾಮೆ ಕೊಡುತ್ತಿದ್ದೆ. ಅಲ್ಲಿದ್ದರೂ (ಶಾಸಕನಾಗಿ ವಿಧಾನಸಭೆಯಲ್ಲಿ), ಬೀದಿಯಲ್ಲಿ ಇದ್ದರೂ ಒಂದೇ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.