ಕಲಬುರಗಿ: ನಗರದ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಆಧಾರವಾಗಿದ್ದ ದೊಡ್ಡ ಹಳ್ಳವೊಂದು ನಾಲ್ಕು ವರ್ಷಗಳಿಂದ ಕಲುಷಿತಗೊಂಡಿದೆ. ಹಳ್ಳಿಗಳ ಜನ–ಜಾನುವಾರಿಗೆ ಆಸರೆಯಾಗಿದ್ದ ಹಳ್ಳವನ್ನು ನಗರೀಕರಣ ಆಪೋಶನ ಪಡೆದಿದೆ.
ಕೆರೆಭೋಸಗಾ, ಮಾಲಗತ್ತಿ, ವೆಂಕಟ ಬೇನೂರ, ಸುಲ್ತಾನಪೂರ, ಕಪನೂರ, ಭೂಪಾಲ ತೆಗನೂರು, ಖಾಜಾ ಕೋಟ ನೂರ ಸೇರಿ 10ಕ್ಕೂ ಹಳ್ಳಿಗಳು ಕಲಬುರಗಿ ನಗರವನ್ನು ಹತ್ತಾರು ಕಿಲೋಮೀಟರ್ ಅಂತರದಲ್ಲೇ ಸುತ್ತುವರಿದಿವೆ. ಕೆರೆಭೊಸಗಾದಲ್ಲಿ ಹುಟ್ಟಿ ಖಾಜಾ ಕೋಟನೂರ ಗ್ರಾಮದ ಮತ್ತೊಂದು ಕೆರೆ ಸೇರುತ್ತಿದ್ದ ಹಳ್ಳ ಸುಮಾರು 25 ಕಿ.ಮೀ. ಹರಿಯುತ್ತಿತ್ತು. ಈ ಗ್ರಾಮಗಳ ಜನ, ಜಾನುವಾರು ಹಾಗೂ ಕೃಷಿಗೂ ಈ ಹಳ್ಳ ಆಧಾರವಾಗಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಕಾರ್ಖಾನೆಗಳ ತ್ಯಾಜ್ಯ ನೀರು ಮತ್ತು ಕಲಬುರಗಿ ನಗರದ ಒಳಚರಂಡಿ ನೀರು ಹಳ್ಳಕ್ಕೆ ಸೇರುತ್ತಿದ್ದು, ಜೀವಜಲವಾಗಿದ್ದ ದೊಡ್ಡಹಳ್ಳವೀಗ ಹಾಲಾಹಲವಾಗಿ ಮಾರ್ಪಟ್ಟಿದೆ.
2020ಕ್ಕೂ ಮುನ್ನ ಸ್ವಚ್ಛಂದವಾಗಿ ಹರಿಯುತ್ತಿದ್ದ ಇದೇ ಹಳ್ಳದ ನೀರು ಬಳಸಿ ರೈತರು ಕೃಷಿ ಮಾಡುತ್ತಿದ್ದರು. ಸೊಪ್ಪು, ತರಕಾರಿ ಬೆಳೆದು ಕಲಬುರಗಿಯ ಕಣ್ಣಿ ಮಾರುಕಟ್ಟೆ, ತಾಜಸುಲ್ತಾನಪುರ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಜೀವಿಸುತ್ತಿದ್ದರು. ಆದರೀಗ ಜನ, ಜಾನುವಾರುಗಳಿರಲಿ, ಜಲಚರಗಳೂ ಜೀವಿಸದಷ್ಟು ವಿಷವಾಗಿ ಮಾರ್ಪಟ್ಟಿದೆ. ಹುಡುಕಿದರೆ ಒಂದು ಸಣ್ಣ ಮರಿಮೀನೂ ಸಿಕ್ಕುವುದಿಲ್ಲ. ಜಮೀನುಗಳಿಗೆ ನೀರು ಹರಿಸಿದರೆ ರಾಸಾಯನಿಕದಿಂದಾಗಿ ಬೆಳೆ ಬಾಡಿಹೋಗುತ್ತದೆ ಎನ್ನುತ್ತಾರೆ ಮಾಲಗತ್ತಿ ಗ್ರಾಮದ ವಕೀಲ ರಾಜು ದೇವಣಗಿ.
ಹಳ್ಳಕ್ಕೆ ಚರಂಡಿ, ಕಾರ್ಖಾನೆ ನೀರು ಸೇರುತ್ತಿರುವುದರಿಂದ ಅಂತರ್ಜಲದ ನೀರೂ ಹಾಳಾಗಿದೆ. ಗ್ರಾಮಗಳಲ್ಲಿನ ಕೊಳವೆಬಾವಿ ನೀರೂ ವಾಸನೆ ಬರುತ್ತಿದೆ. ದನಗಳೂ ನೀರು ಕುಡಿಯುತ್ತಿಲ್ಲ ಎಂದು ಭೂಪಾಲತೆಗನೂರ ನಿವಾಸಿ ಕಲ್ಯಾಣಪ್ಪ ಕಂದಗೋಳ ಬೇಸರಿಸಿದರು.
ಆಗಿದ್ದೇನು?: ‘ಕಲಬುರಗಿ ನಗರದಿಂದ 7 ಕಿ.ಮೀ. ದೂರದಲ್ಲಿರುವ ಕಪನೂರಲ್ಲಿ ಆಸಿಡ್ ಉತ್ಪಾದನಾ ಘಟಕಗಳು, ಸ್ಟೀಲ್ ಪಾತ್ರೆ ತಯಾರಿಸುವ ಘಟಕಗಳು ಸೇರಿದಂತೆ ಹಲವು ಕಾರ್ಖಾನೆಗಳು ತಲೆಯೆತ್ತಿವೆ. ಇವುಗಳ ತ್ಯಾಜ್ಯವು ಸಮೀಪದ ಹಳ್ಳಕ್ಕೆ ಬಂದು ಸೇರುತ್ತಿದೆ. ಕಲಬುರಗಿ ನಗರದ ಒಳಚರಂಡಿ ನೀರು ಕೂಡ ಇದೇ ಹಳ್ಳದ ಒಡಲಿಗೆ ನುಗ್ಗುತ್ತಿದೆ. ಕಪನೂರಲ್ಲೇ ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ಇದ್ದರೂ ಘನತ್ಯಾಜ್ಯ ಮಾತ್ರ ನೀರಿನಿಂದ ಬೇರ್ಪಡುತ್ತಿದೆ ಹೊರತು, ಆಯಿಲ್ ಮತ್ತು ಗ್ರೀಸ್ ಬೇರ್ಪಡಿಸಲಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಎಸ್‌ಟಿಪಿ ಘಟಕದ ಪ್ರಾಜೆಕ್ಟ್ ಮ್ಯಾನೇಜರ್ ರೇವಣಸಿದ್ದಪ್ಪ.
‘ಕಪನೂರು ಎಸ್‌ಟಿಪಿ ಘಟಕದ ಸಾಮರ್ಥ್ಯ ಹೆಚ್ಚಿಸಬೇಕು. ಪ್ರಸ್ತುತ ಒಳಚರಂಡಿ ನೀರು ಎರಡು ಹಂತಗಳಲ್ಲಿ ಫಿಲ್ಟರ್ ಆಗುತ್ತಿದೆ. ಅದು ಮೂರು ಹಂತಗಳಲ್ಲಿ ನಡೆದರೆ, ಆರ್.ಒ. ವಾಟರ್ ಹಂತಕ್ಕೆ ನೀರು ಶುದ್ಧೀಕರಣವಾಗು ತ್ತದೆ. ಈ ಯೋಜನೆಯ ಪ್ರಸ್ತಾವ ಇದ್ದರೂ ಅನುದಾನದ ಕೊರತೆಯಿದೆ. ನಮಗೆ ಒಂದು ವರ್ಷದಿಂದ ಸಂಬಳವನ್ನೂ ನೀಡಿಲ್ಲ’ ಎಂದು ಎಸ್‌ಟಿಪಿ ಘಟಕದ ಸಿಬ್ಬಂದಿ ಅಳಲು ತೋಡಿಕೊಂಡರು.
ಒಳಚರಂಡಿ ನೀರು ಬಂದು ನಮ್ಮಹಳ್ಳ ಸೇರುತ್ತಿರುವುದನ್ನು ಮಹಾನಗರ ಪಾಲಿಕೆ ತಡೆಯಬೇಕು. ಇಲ್ಲದಿದ್ದರೆ ಹಳ್ಳ ಹುಡುಕಿಕೊಡಿ ಎಂದು ನಾವು ಕೋರ್ಟ್ ಮೆಟ್ಟಿಲೇರುತ್ತೇವೆ.ರಾಜು ದೇವಣಗಿ, ವಕೀಲ, ಮಾಲಗತ್ತಿ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.