ADVERTISEMENT

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಔರಾದ್: ತಾಲ್ಲೂಕಿನ ಗಡಿ ಕೆಲ ಗಡಿ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 7:17 IST
Last Updated 4 ಮಾರ್ಚ್ 2026, 7:17 IST
ಔರಾದ್ ತಾಲ್ಲೂಕಿನ ಸಾವರಗಾಂವ್ ಗ್ರಾಮಕ್ಕೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ
ಔರಾದ್ ತಾಲ್ಲೂಕಿನ ಸಾವರಗಾಂವ್ ಗ್ರಾಮಕ್ಕೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ   

ಔರಾದ್: ಬೇಸಿಗೆ ಬಿಸಿಲಿನ ತೀವ್ರತೆ ಮೊದಲೇ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಸಾವರಗಾಂವ್, ಹಂಗರಗಾ ಹಾಗೂ ತೆಲಂಗಾಣ ಗಡಿಗೆ ಅಂಟಿಕೊಂಡಿರುವ ಬಾರ್ಡರ್ (ವಿಜಯನಗರ) ತಾಂಡಾದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ.

ಸಾವರಗಾಂವ್ ಗ್ರಾಮದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿರುವುದರಿಂದ ಜನ ನೀರಿಗಾಗಿ ಅಹೋರಾತ್ರಿ ಪರದಾಡುತ್ತಿದ್ದಾರೆ. 3,500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಊರಿಗೆ ಕಳೆದ ನಾಲ್ಕೈದು ದಿನಗಳಿಂದ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಆದರೆ ಈ ನೀರು ಅರ್ಧ ಊರಿಗೆ ಮಾತ್ರ ಸಿಗುತ್ತಿದೆ. ಉಳಿದ ಜನರಿಗೆ ನೀರು ಸಿಗುತ್ತಿಲ್ಲ ಎಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಾಜಿ ಭೂಮಾಜೆ ತಿಳಿಸಿದ್ದಾರೆ.

ADVERTISEMENT

ಈ ವರ್ಷದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ಹಂಗರಾ ಕೆರೆ ಒಡೆದು ಹೋಗಿದೆ. ಹೀಗಾಗಿ ಊರಿನಲ್ಲಿರುವ ಅಂತರ್ಜಲಮಟ್ಟ ಕುಸಿದು ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಇರುವ ಒಂದು ತೆರೆದ ಬಾವಿಗೆ ಜನ ಮುಗಿ ಬಿದ್ದು ನೀರು ತರಬೇಕಾಗಿದೆ. ಈಗಲೇ ಪರಿಸ್ಥಿತಿ ಹೀಗಿರುವಾಗ ಮುಂದಿನ ದಿನಗಳಲ್ಲಿ ನಾವು ಊರು ಬಿಟ್ಟು ಹೋಗಬೇಕಾಗುತ್ತದೆ ಎಂದು ಬಾಪುರಾವ ಹಂಗರಗಾ ಆತಂಕ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬಾರ್ಡರ್ ತಾಂಡಾ ಜನ ನೀರಿನ ಕೊರತೆಯಾಗಿ ವಲಸೆ ಹೋಗಬೇಕಾಗಿದೆ. ಇಲ್ಲಿಯ ಎರಡು ಕೊಳವೆ ಬಾವಿ ಬತ್ತಿ ಹೋಗಿವೆ. ಖಾಸಗಿ ಬಾವಿಯಲ್ಲಿ ನೀರಿದ್ದರೂ ಆ ವ್ಯಕ್ತಿ ನೀರು ಕೊಡುತ್ತಿಲ್ಲ. ಕಳೆದ ವರ್ಷ ನೀರು ಪೂರೈಸಿದ ಅವರಿಗೆ ಬಿಲ್ ಪಾವತಿಯಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಂಢರಿ ಚವಾಣ್ ಹೇಳುತ್ತಾರೆ.

8 ಕಿ.ಮೀ. ದೂರದ ಮಾಂಜ್ರಾ ನದಿಯಿಂದ ತಾಂಡಾಕ್ಕೆ ನೀರು ತರುವ ಯೋಜನೆ ರೂಪಿಸಲಾಗಿದ್ದರೂ ಅದು ಕಾರ್ಯರೂಪಕ್ಕೆ ಬಾರದೆ ನಾವು ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಆದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಕುರಿತು ಈಗಾಗಲೇ ತಾಲ್ಲೂಕಿನ ಎಲ್ಲ ಆಡಳಿತಾಧಿಕಾರಿ ಹಾಗೂ ಪಿಡಿಒಗಳ ಸಭೆ ನಡೆಸಿದ್ದೇವೆ. 24 ಗ್ರಾಮ, 42 ತಾಂಡಾಗಳಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಸಾವರಗಾಂವನಲ್ಲಿ ಸಮಸ್ಯೆ ಜಾಸ್ತಿ ಇರುವುದರಿಂದ ಸದ್ಯಕ್ಕೆ ಒಂದು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯತ್ ಇಒ ಕಿರಣ ಪಾಟೀಲ ತಿಳಿಸಿದ್ದಾರೆ.

‌ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುವುದು ಸಾಮಾನ್ಯ. ಸಮಸ್ಯೆ ಗುರುತಿಸಿ ಪರಿಹಾರ ಕಲ್ಪಿಸುವುದು ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳ ಜವಾಬ್ದಾರಿ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಸಾವರಗಾಂವ್‌ನಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಉಳಿದ ಕಡೆಯೂ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. 
ಕಿರಣ ಪಾಟೀಲ ಇಒ ತಾ.ಪಂ. ಔರಾದ್ 
ಟ್ಯಾಂಕರ್ ನೀರು ಎಲ್ಲರಿಗೂ ಸಿಗುತ್ತಿಲ್ಲ. ಹೀಗಾಗಿ ಖಾಸಗಿ ಬಾವಿ ನೀರು ಮನೆಗಳಿಗೆ ಪೂರೈಸಬೇಕು. ಆದರೆ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ.ಗ್ರಾ.ಪಂ ಮಾಜಿ
 ಬಾಲಾಜಿ ಭೂಮಾಜೆ , ಸದಸ್ಯ ಸಾವರಗಾಂವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.