ADVERTISEMENT

ಜೇವರ್ಗಿ: ತೀವ್ರಗೊಂಡ ಕುಡಿಯುವ ನೀರಿನ ಸಮಸ್ಯೆ

ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಪ್ರಜಾವಾಣಿ ವಿಶೇಷ
Published 8 ಮೇ 2025, 5:33 IST
Last Updated 8 ಮೇ 2025, 5:33 IST
<div class="paragraphs"><p>ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ ಯುವಕರು 2 ಕಿ.ಮೀ ದೂರದಿಂದ ನೀರು ತರುತ್ತಿರುವುದು</p></div>

ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ ಯುವಕರು 2 ಕಿ.ಮೀ ದೂರದಿಂದ ನೀರು ತರುತ್ತಿರುವುದು

   

ಜೇವರ್ಗಿ: ತಾಲ್ಲೂಕು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗದಿರುವುದರಿಂದ ಜನರು ನೀರಿಗಾಗಿ ಪರದಾಡುವ ದೃಶ್ಯ ಪ್ರತಿದಿನ ಸಾಮಾನ್ಯವಾಗಿದೆ.

ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ ಅವರ ಸ್ವಗ್ರಾಮ ನೆಲೋಗಿ ಸೇರಿದಂತೆ ತಾಲ್ಲೂಕಿನ ಚಿಗರಳ್ಳಿ, ಕೋಳಕೂರ, ಚನ್ನೂರ, ಬಳ್ಳುಂಡಗಿ, ಮಾರಡಗಿ ಎಸ್.ಎ, ಹಂಚಿನಾಳ ಎಸ್.ಎನ್, ಹೆಗ್ಗಿನಾಳ ಗ್ರಾಮಗಳಲ್ಲಿ ಜನರು ನಿತ್ಯ ನೀರಿಗಾಗಿ ಅಲೆದಾಡುತ್ತಿದ್ದಾರೆ. ಬೇಸಿಗೆಯಿಂದ ಬಿಸಿಲಿನ ತಾಪಮಾನವೂ ಏರಿಕೆಯಾಗುತ್ತಿದ್ದು, ಜತೆಗೆ ನೀರಿನ ಅಭಾವ ಹೆಚ್ಚಾಗತೊಡಗಿದೆ. ಚಿಗರಳ್ಳಿ ಗ್ರಾಮದಲ್ಲಿ ನಿಜಾಮನ ಬಾವಿಯಿಂದ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ADVERTISEMENT

ನೆಲೋಗಿ ಗ್ರಾಮದಲ್ಲಿರುವ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, 3 ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆಯಲಾಗಿದೆ. ಹೀಗಾಗಿ ನೆಲೋಗಿಯಲ್ಲಿ ವಾರ್ಡ್ ನಂಬರ್‌ 3 ಮತ್ತು 4ರಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಚನ್ನೂರ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಜೆಜೆಎಂ ಕಾಮಗಾರಿ ಮಾಡಿದ್ದರಿಂದ ಶೇ 50 ರಷ್ಟು ಮನೆಗಳಿಗೆ ನೀರು ತಲುಪುತ್ತಿಲ್ಲ ಎಂಬುದು ಅಲ್ಲಿನ ಗ್ರಾಮಸ್ಥರ ಆರೋಪವಾಗಿದೆ.

ಸಮಸ್ಯಾತ್ಮಕ ಗ್ರಾಮಗಳಲ್ಲಿ ತೆರೆದ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಹಾಗೂ ಅಪೂರ್ಣಗೊಂಡಿರುವ ಜೆಜೆಎಂ ಕಾಮಗಾರಿಯಿಂದ ಜನ ಬೇಸಿಗೆಯಲ್ಲಿ ಹೈರಾಣಾಗುತ್ತಿದ್ದಾರೆ. ಬಳ್ಳುಂಡಗಿ ಗ್ರಾಮದಲ್ಲಿ ಹಗಲು-ರಾತ್ರಿ ಯುವಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ನೀರು ತರುವುದೊಂದೆ ಕಾಯಕವಾಗಿದೆ. 2 ಕಿ.ಮೀ ದೂರದ ಹೊಲಗಳಿಗೆ ತೆರಳಿ ಬೈಕ್ ಹಾಗೂ ಸೈಕಲ್ ಮೇಲೆ ನೀರು ತರುವಂತಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಕೆಂಡದಂತಹ ಬಿಸಿಲನ್ನೂ ಲೆಕ್ಕಿಸದೇ ಕೊಡಗಳನ್ನು ಹಿಡಿದುಕೊಂಡು ಅಲೆದಾಡುವಂತಾಗಿದೆ. ನೆಲೋಗಿ, ಕೋಳಕೂರ, ಹಂಚಿನಾಳ ಗ್ರಾಮದ ಪಕ್ಕದಲ್ಲಿಯೇ ಭೀಮಾನದಿ ಹರಿಯುತ್ತಿದ್ದರೂ, ನೀರಿನ ಸಮಸ್ಯೆ ಮಾತ್ರ ಇದ್ದೇ ಇದೆ.

ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತವಾಗಿದ್ದು, ಗ್ರಾಮೀಣ ಪ್ರದೇಶದ ಜನರು ತತ್ತರಿಸಿದ್ದಾರೆ. ತಾಲ್ಲೂಕಿನ ಕಟ್ಟಿಸಂಗಾವಿ, ಬಣಮಿ ಸೇರಿದಂತೆ ಇತರಡೆ ನಿರ್ಮಿಸಿದ ಆರ್‌ಒ ಪ್ಲಾಂಟ್‌ ನಿರುಪಯುಕ್ತವಾಗಿವೆ. ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 72 ನೀರಿನ ಘಟಕ ಸ್ಥಾಪನೆ ಮಾಡಲಾಗಿದ್ದು, ಅದರಲ್ಲಿ ಕೇವಲ 14 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

‘ಬಾಡಿಗೆಗೆ ಪಡೆದು ನೀರು ಪೂರೈಕೆಗೆ ಕ್ರಮ’

‘ನೀರಿನ ಮೂಲ ಇಲ್ಲದ ಗ್ರಾಮಗಳಲ್ಲಿ ಬೋರ್‌ವೆಲ್ ಹಾಗೂ ಬಾವಿಗಳನ್ನು ಖಾಸಗಿಯಾಗಿ ಬಾಡಿಗೆ ಪಡೆದುಕೊಂಡು ಸಮಸ್ಯೆ ನಿವಾರಣೆ ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗುರುಶಾಂತಯ್ಯ ಗದ್ದಗಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಚಿನಾಳ ಗ್ರಾಮದಲ್ಲಿ ಹೊಸ ಬೋರ್‌ವೆಲ್ ಕೊರೆಯಿಸಿ ಸಮಸ್ಯೆ ಬಗೆಹರಿಸಲಾಗಿದೆ. ಬಳ್ಳುಂಡಗಿ ಗ್ರಾಮದಲ್ಲಿಯೂ ಬೋರ್‌ವೆಲ್ ಕೊರೆಸಿದ್ದು, ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೊಲದಲ್ಲಿನ ಬೋರ್‌ವೆಲ್‌ನಿಂದ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲು ಅನುದಾನ ಕೊರತೆ ಎದುರಾಗಿದೆ. ಹೆಗ್ಗಿನಾಳ ಗ್ರಾಮದಲ್ಲಿ ಇರುವ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಸಮಸ್ಯೆಯುಂಟಾಗಿದೆ’ ಎಂದು ಅವರು ತಿಳಿಸಿದರು.

ನೀರಿನ ಸಮಸ್ಯೆ ದಿನೇ ದಿನೇ ಗಂಭೀರವಾಗುತ್ತಿದ್ದು, ಚನ್ನೂರ ಗ್ರಾಮದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.
-ಮಹಾಂತಗೌಡ ಬಿರಾದಾರ, ಚನ್ನೂರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.