ADVERTISEMENT

ನಗರಕ್ಕೆ ಶೀಘ್ರ ನಿರಂತರ ಕುಡಿಯುವ ನೀರು

24X7 ನೀರು ಪೂರೈಕೆಯ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗೆ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:49 IST
Last Updated 13 ಮೇ 2022, 2:49 IST
ಕಲಬುರಗಿಯಲ್ಲಿ ಗುರುವಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ನಿರಂತರ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು
ಕಲಬುರಗಿಯಲ್ಲಿ ಗುರುವಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ನಿರಂತರ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು   

ಕಲಬುರಗಿ: ಮಹಾನಗರ ಪಾಲಿಕೆಯ ಎಲ್ಲ 55 ವಾರ್ಡ್‌ಗಳ ಜನರಿಗೂ ದಿನವಿಡೀ (24X7) ಕುಡಿಯುವ ನೀರು ಪೂರೈಸುವ ಸಂಕಲ್ಪ ಮಾಡಲಾಗಿದೆ. ಭೀಮಾ ಹಾಗೂ ಬೆಣ್ಣೆತೊರಾದಿಂದ ಕುಡಿಯುವ ನೀರು ಪೂರೈಸುವ ಮೂಲಕ ಸಮಸ್ಯೆ ಶಾಶ್ವತವಾಗಿ ಪರಿಹರಿಸುವುದು ನಮ್ಮ ಆದ್ಯತೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಭರವಸೆ ನೀಡಿದರು.

ಇಲ್ಲಿನ ಕುಬೇರ ನಗರ ಹಾಗೂ ಹೊ ಓಝಾ ಬಡಾವಣೆಯಲ್ಲಿ ಗುರುವಾರ, ನಿರಂತರ ಕುಡಿಯುವ ನೀರು ಪೂರೈಕೆಗಾಗಿ ಪೈಪ್‌ಪೈನ್‌ ಅಳವಡಿಕೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಗುಣಮಟ್ಟದ ಕಾಮಗಾರಿ ಮಾಡಿಸುವುದು ಅಧಿಕಾರಿಗಳ ಜವಾಬ್ದಾರಿ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವಂತಿಲ್ಲ. ಸಾರ್ವಜನಿಕರೂ ಗಮನ ಹರಿಸಬೇಕು. ಸಂದೇಹ ಕಂಡುಬಂದಲ್ಲಿ ದೂರು ಸಲ್ಲಿಸಬೇಕು. ಮುಖ್ಯವಾಗಿ, ತಮ್ಮ ಮನೆಗಳ ಮುಂದೆ ಪೈಪ್‌ಲೈನ್‌ ಕಾಮಗಾರಿ ನಡೆಸಲು ಅಡೆತಡೆ ಆಗದಂತೆ ನೋಡಿಕೊಳ್ಳಬೇಕು. ಇದರಿಂದ ನಿರೀಕ್ಷಿತ ಸಮಯದಲ್ಲಿ ಕೆಲಸಗಳು ಮುಗಿಯುತ್ತವೆ’ ಎಂದರು.

ADVERTISEMENT

ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕಲಬುರಗಿ ನಗರದಾದ್ಯಂತ ನಿರಂತರ ನೀರು ಪೂರೈಕೆ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಲ್‌ ಅಂಡ್‌ ಟಿ ಕಂಪನಿಗೆ ₹ 837 ಕೋಟಿ ವೆಚ್ಚದ ಟೆಂಡರ್ ಕೂಡ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಗೆ ಬರುವ ನಗರ ಹೊರವಲಯದ ಮನೆಗಳ ಸಮೀಕ್ಷೆ ಕಾರ್ಯವೂ ಪೂರ್ಣಗೊಂಡಿದೆ. ಹೀಗಾಗಿ, ಮನೆಗಳ ಸಂಖ್ಯೆ, ಜನಸಂಖ್ಯೆ ಪರಿಗಣಿಸಿ ಎಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಸಬೇಕಿದೆ ಎಂದು ಅಂದಾಜಿಸಲಾಗಿದೆ. ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ಪಾಲಿಕೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ವಿಶೇಷವಾಗಿ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಎಲ್ಲ ಮುಖ್ಯ ರಸ್ತೆಗಳ ಅಭಿವೃದ್ಧಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಗುರುತಿಸಿದ ಬಡಾವಣೆಗಳಲ್ಲಿನ ರಸ್ತೆಗಳ ಅಭಿವೃದ್ಧಿ ಸೇರಿ ಒಟ್ಟು ₹ 5 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರ ಮಂಜೂರಾತಿ ಪಡೆದು ಕಾಮಗಾರಿ ಆರಂಭಿಸಲಾಗುವುದು ಎಂದೂ ದತ್ತಾತ್ರೇಯ ಹೇಳಿದರು.

ಬಡಾವಣೆ ಬಸವರಾಜ ಪಾಟೀಲ ಬಿರಾಳ ಮಾತನಾಡಿ, ‘ಪಾಲಿಕೆಯ 55ನೇ ವಾರ್ಡ್‌ ಹೊಸದಾಗಿ ರೂಪಗೊಂಡಿದೆ. ಇಲ್ಲಿ ಇನ್ನೂ ಕನಿಷ್ಠ ಸೌಕರ್ಯಗಳೂ ಇಲ್ಲ. ಸದ್ಯ ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು ನೆಮ್ಮದಿ ತಂದಿದೆ’ ಎಂದರು.

ಮಹಾನಗರ ಪಾಲಿಕೆ ಸದಸ್ಯ ಅರ್ಚನಾ ಬಸವರಾಜ ಪಾಟೀಲ,ಪಾಲಿಕೆ ಆಯುಕ್ತ ಶಂಕರ ವಣಿಕ್ಯಾಳ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧೀಕ್ಷಕ ಎಂಜಿನಿಯರ್‌ ಕಾಂತರಾಜ ಗೌಡ, ಎಲ್‌ ಅಂಡ್‌ ಟಿ ಕಂಪನಿಯ ಮುಖ್ಯಸ್ಥ ಅಶೋತ್ತ ಪಟ್ಟನಾಯಕ, ವ್ಯವಸ್ಥಾಪಕರಾದ ಜೀವಕುಮಾರ, ರಾಜೇಶ ಹಾಗೂ ಕುಬೇರಾ ನಗರ– ನ್ಯೂ ಓಝಾ ಬಡಾವಣೆಯ ಮುಖಂಡರು ಇದ್ದರು. ಎಸ್.‌ವೈ. ಸಾಲಿಮನಿ ನಿರೂಪಿಸಿದರು. ಲಿಂಗರಾಜ ಹೀರಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.