ADVERTISEMENT

ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಚ್ಚಾಟನೆ

ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯ ಸಾಗಣೆ ಆರೋಪ: ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 23:37 IST
Last Updated 14 ಜುಲೈ 2025, 23:37 IST
ಲಿಂಗರಾಜ ಕಣ್ಣಿ
ಲಿಂಗರಾಜ ಕಣ್ಣಿ   

ಕಲಬುರಗಿ: ಮಹಾರಾಷ್ಟ್ರದ ಠಾಣೆ ನಗರದಲ್ಲಿ ಮಾದಕ ದ್ರವ್ಯ ಸಾಗಣೆ ಆರೋಪದಲ್ಲಿ ಬಂಧಿತನಾಗಿರುವ, ಕಲಬುರಗಿ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಅಲಗೂಡ (ಕಣ್ಣಿ) ಅವರನ್ನು ಸೋಮವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ. 

ಅಲ್ಲಿನ ಬಜಾರ್‌ಪೇಟ್‌ ಠಾಣೆ ಪೊಲೀಸರು ಲಿಂಗರಾಜ ಸೇರಿ ಮೂವರನ್ನು ಮಾದಕ ದ್ರವ್ಯ ಸಾಗಣೆ ಆರೋಪದಲ್ಲಿ ಈಚೆಗೆ ಬಂಧಿಸಿರುವುದು ಭಾನುವಾರ ಚರ್ಚೆಗೆ ಆಸ್ಪದವಾಗಿತ್ತು. ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. 

‘ಲಿಂಗರಾಜ ಕಣ್ಣಿ ಅವರು ಮಾದಕ ದ್ರವ್ಯ ಸಾಗಣೆಯಲ್ಲಿ ಭಾಗಿಯಾಗಿರುವ  ಆರೋಪ ಕೇಳಿ ಬಂದಿದೆ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಿಬಿಐ ತನಿಖೆಗೆ ಒಪ್ಪಿಸಿ: ‘ಲಿಂಗರಾಜ ಅವರು ಮಾದಕ ದ್ರವ್ಯಸಾಗಣೆ ಮಾಡಿ ಸಿಕ್ಕಿ ಬಿದ್ದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಕೋರಿ ಅಲ್ಲಿನ ಸಿ.ಎಂ, ಡಿಸಿಎಂಗೂ ಮನವಿ ಸಲ್ಲಿಸುತ್ತೇನೆ’ ಎಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಲಿಂಗರಾಜ ಅವರು ಎಐಸಿಸಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

‘ಕಾಫ್‌ ಸಿರಪ್‌ ಹೆಸರಲ್ಲಿ ಬಿಜೆಪಿ ಕೆಮ್ಮುತ್ತಿದೆ’

‘₹27 ಸಾವಿರ ಮೌಲ್ಯದ ಕಾಫ್ ಸಿರಪ್ ವಿಷಯದಲ್ಲಿ ಈಗ ಕೆಮ್ಮುತ್ತಿರುವ ಬಿಜೆಪಿಯವರು ಅದಕ್ಕಿಂತ ಗಂಭೀರ ಪ್ರಕರಣ ಗಳಿರುವ ತಮ್ಮ ಪಕ್ಷದವರ ಬಗ್ಗೆ ಕ್ರಮ ಕೈಗೊಳ್ಳುವ ನೈತಿಕತೆಯನ್ನು ಯಾವಾಗ ತೋರುತ್ತಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ. ‘ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸರು ಸ್ವತಂತ್ರರಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿದೆ. ಕಾಂಗ್ರೆಸ್ ಪಕ್ಷವಾಗಲಿ ಸರ್ಕಾರವಾಗಲಿ ಇದನ್ನು ಸಮರ್ಥಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಪೋಕ್ಸೊ ಪ್ರಕರಣದ ಆರೋಪಿಯನ್ನು ಪುತ್ತೂರಿನಲ್ಲಿ ಯುವತಿಯೊಬ್ಬರಿಗೆ ವಂಚನೆ ಮಾಡಿದವರನ್ನು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಶಾಸಕರನ್ನು ಯಾವಾಗ ಉಚ್ಚಾಟಿಸಲಾಗುತ್ತದೆ’ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.