ಕಲಬುರಗಿ: ‘ಮಲ್ಲಿಕಾರ್ಜುನ ಖರ್ಗೆ ಹುಲಿ ಅಲ್ಲ, ಬಿಜೆಪಿ ಹಾಗೂ ನರೇಂದ್ರ ಮೋದಿ ಪಾಲಿಗೆ ಸಿಂಹವಿದ್ದಂತೆ. ಕಳೆದ ಚುನಾವಣೆಯಲ್ಲಿ ಅವರಿಗೆ ಆರ್‌ಎಸ್‌ಎಸ್ ಕುತಂತ್ರ ಹಾಗೂ ಕುಟಿಲತೆಯಿಂದಾಗಿ ಸೋಲಾಗಿದೆಯೇ ಹೊರತು, ನಿಮ್ಮಂಥ ಜಿರಳೆಗಳಿಂದಲ್ಲ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಅವರು ಮಾಲೀಕಯ್ಯ ಗುತ್ತೇದಾರ ಹೇಳಿಕೆಗೆ ತಿರುಗೇಟು ನೀಡಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಲೋಕಸಭಾ ಚುನಾವಣೆ ಅಂಗವಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡದೇ ಉದ್ಧಟತನದಿಂದ ಮಾತನಾಡಿದ್ದಾರೆ. ಖರ್ಗೆ ಅವರನ್ನು ಉದ್ದೇಶಿಸಿ ಹುಲಿಯನ್ನು ಸೋಲಿಸಿದ್ದೇವೆ, ಇಲಿಯನ್ನು ಸೋಲಿಸುವುದು ಕಷ್ಟವೇನಿಲ್ಲ ಎಂದಿದ್ದಾರೆ. ಇದು ಅವರ ನೈತಿಕ ಅಧಃಪತನ ತೋರಿಸುತ್ತದೆ. ಇದನ್ನು ಡಿಎಸ್‌ಎಸ್ ಖಂಡಿಸುತ್ತದೆ’ ಎಂದರು.
‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ ಅಹಿಂದ ಬಿರುಗಾಳಿ ಎದ್ದಿದೆ. ರಾಷ್ಟ್ರಮಟ್ಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಅಹಿಂದ ವರ್ಗ ಜಾಗೃತಗೊಂಡಿದ್ದು, ಸಂವಿಧಾನ ವಿರೋಧಿಗಳಿಗೆ ತಕ್ಕಪಾಠ ಕಲಿಸಲಿದೆ’ ಎಂದರು.
ಚರ್ಚೆಗೆ ಪಂಥಾಹ್ವಾನ: ‘ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಹಿಡಿದು ಅಗ್ನಿ ಪಥ ತನಕದ 15 ಯೋಜನೆಗಳ ಉದ್ದೇಶ, ಸ್ವರೂಪ, ಅವುಗಳ ಜಾರಿಯ ನಿಜಚಿತ್ರಣ, ಅದಕ್ಕೆ ಮಾಡಿದ ವೆಚ್ಚಗಳ ಬಗ್ಗೆ ಮಾತನಾಡಲು ಮಾಲೀಕಯ್ಯ ಗುತ್ತೇದಾರ ಹಾಗೂ ಉಮೇಶ ಜಾಧವ ಸಿದ್ಧರಿದ್ದರೆ, ನಾವೇ ಸ್ಥಳ ನಿಗದಿ ಮಾಡುತ್ತೇವೆ, ಬಹಿರಂಗ ಚರ್ಚೆಗೆ ಬರಲಿ’ ಎಂದು ಅರ್ಜುನ ಭದ್ರೆ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಜಿಲ್ಲಾ ಖಜಾಂಚಿ ಸೂರ್ಯಕಾಂತ ಆಜಾದಪುರ, ತಾಲ್ಲೂಕು ಸಂಚಾಲಕ ಕಪೀಲ ಸಿಂಗೆ, ಯಾದಗಿರಿ ಜಿಲ್ಲಾ ಸಂಘಟನಾ ಸಂಚಾಲಕ ಅಜೀಜಸಾಬ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.