ADVERTISEMENT

ಕಮಲಾಪುರ | ಯುವಕನಿಂದ ಕಿರುಕುಳ: ಹಿನ್ನೀರಿಗೆ ಹಾರಿದ ಯುವತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:38 IST
Last Updated 22 ಜುಲೈ 2025, 4:38 IST
ಸಾಕ್ಷಿ ಉಪ್ಪಾರ
ಸಾಕ್ಷಿ ಉಪ್ಪಾರ   

ಕಮಲಾಪುರ: ತಾಲ್ಲೂಕಿನ ಕುರಿಕೋಟಾ ಹೊಸ ಸೇತುವೆ ಮೇಲಿಂದ ಬೆಣ್ಣೆತೊರೆ ಜಲಾಶಯದ ಹಿನ್ನೀರಿಗೆ ಯುವತಿಯೊಬ್ಬರು ಸೋಮವಾರ ಹಾರಿದ್ದು, ದುಬೈನಲ್ಲಿ ಇರುವ ಯುವಕನೊಬ್ಬ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಪೋಷಕರು ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಭೂಸಣಗಿ ಗ್ರಾಮದ ಸಾಕ್ಷಿ ಮನೋಜ ಉಪ್ಪಾರ (22) ಹಿನ್ನೀರಿಗೆ ಹಾರಿದ ಯುವತಿ. ದುಬೈನಲ್ಲಿರುವ ರಾಜನಾಳ ಗ್ರಾಮದ ಅಭಿಷೇಕ್ ನಾಮದೇವ ವಿರುದ್ಧ ಪ್ರಕರಣ ದಾಖಲಾಗಿದೆ. 

ಅಭಿಷೇಕ್ ಈ ಮುಂಚೆ ಸಾಕ್ಷಿ ಜೊತೆಗೆ ತೆಗೆಸಿಕೊಂಡಿದ್ದ ಫೋಟೊಗಳನ್ನು ದುಬೈನಲ್ಲಿ ಇದ್ದುಕೊಂಡೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಬಗ್ಗೆ ಜುಲೈ 19ರಂದು ಮಹಾಗಾಂವ ಪೊಲೀಸಠಿಣೆಗೆ ಯುವತಿಯ ಪೋಷಕರು ದೂರು ನೀಡಿದ್ದರು. ಆದರೂ ಪದೇ ಪದೇ ಫೋಟೊಗಳನ್ನು ಹರಿಬಿಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಸಾಕ್ಷಿ ಹಲವು ದಿನಗಳಿಂದ ಬೆಂಗಳೂರಿನ ಶಾಪಿಂಗ್‌ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಗ್ರಾಮಕ್ಕೆ ಬಂದಿದ್ದರು. ಭೂಸಣಗಿಯಲ್ಲಿನ ಮನೆಯಿಂದ ತನ್ನ ಸಹೋದರಿ ಜೊತೆಗೆ ಮಹಾಗಾಂವ ಆಸ್ಪತ್ರೆಗೆಂದು ತೆರಳಿದ್ದರು. ಕುರಿಕೋಟಾ ಸೇತುವೆ ನೋಡಲು ಇಳಿದು, ಕೆಲ ಹೊತ್ತಿನ ಬಳಿಕ ಹಿನ್ನೀರಿಗೆ ಹಾರಿದರು ಎಂದು ಹೇಳಿದ್ದಾರೆ.

ಅಗ್ನಿ ಶಾಮಕ ದಳದವರು ಶೋಧ ಕಾರ್ಯ ನಡೆಸಿದರೂ ಯುವತಿ ಪತ್ತೆಯಾಗಲಿಲ್ಲ. ಡಿಎಫ್‌ಒ ಮಲ್ಲಿಕಾರ್ಜುನ ಕಲಬುರಗಿ, ಅಗ್ನಿಶಾಮಕ ದಳದ ಪ್ರವೀಣ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.