ಕಲಬುರಗಿ: ಹಕ್ಕಿಜ್ವರ, ಹೆಚ್ಚಿದ ಬಿಸಿಲಿನ ಕಾರಣದಿಂದ ಮೊಟ್ಟೆ ದರ ಇಳಿಕೆಯಾಗಿದೆ. ಫೆಬ್ರುವರಿ ಅಂತ್ಯದಿಂದ ಮಾ.12ರವರೆಗೆ ನೂರು ಮೊಟ್ಟೆಯ ಬೆಲೆಯಲ್ಲಿ ₹65 ಕಡಿಮೆಯಾಗಿದೆ. ಆದರೂ ಬಹುತೇಕ ಚಿಲ್ಲರೆ ವ್ಯಾಪಾರಸ್ಥರು ಒಂದಕ್ಕೆ ₹6ರಂತೆ ಮಾರಾಟ ಮಾಡುತ್ತಿದ್ದಾರೆ.
100 ಮೊಟ್ಟೆಗಳಿಗೆ ಫೆ.27ರಂದು ₹500 ಇತ್ತು. ಫೆ.28ರಂದು ₹25, ಮಾ.3ರಂದು ₹45, ಮಾ.4ರಂದು ₹65ರಷ್ಟು ಇಳಿಕೆಯಾಗಿ, ಗುರುವಾರ ₹435ರಂತೆ ಮಾರಾಟವಾಗಿವೆ.
ಮೊಟ್ಟೆಗಳನ್ನು ಡಜನ್, ಅರ್ಧ ಡಜನ್ ಲೆಕ್ಕದಲ್ಲಿ ಖರೀದಿಸಿದರೆ ಒಂದಕ್ಕೆ ₹5ರಂತೆ ಕೊಡುತ್ತಿದ್ದಾರೆ. ಅದಕ್ಕಿಂತ ಕಡಿಮೆ ಬೇಕು ಎಂದರೆ ₹6 ಇದೆ. ನಗರದ ಬಹುತೇಕ ಕಡೆ ಬೇಯಿಸಿದ ಮೊಟ್ಟೆಗಳ ಬೆಲೆ ಒಂದಕ್ಕೆ ₹12 ಇತ್ತು, ಕೆಲವರು ಈಗ ₹10ರಂತೆ ಮಾರಾಟ ಮಾಡುತ್ತಿದ್ದಾರೆ.
‘ಪ್ರತಿ ವರ್ಷ ಬೇಸಿಗೆಯಲ್ಲಿ ಮಾಂಸ, ಮೊಟ್ಟೆ ದರ ಇಳಿಕೆ ಸಹಜ. ಆದರೆ, ಈ ವರ್ಷ ಹಕ್ಕಿಜ್ವರದ ಭಯವೂ ಆವರಿಸಿರುವುದರಿಂದ ಬೇಡಿಕೆ ಕೊಂಚ ಕಡಿಮೆಯಾಗಿದೆ’ ಎಂದು ಕೋಳಿಗಳ ಸಗಟು ವ್ಯಾಪಾರಿಯೊಬ್ಬರು ತಿಳಿಸಿದರು.
ಪೌಷ್ಟಿಕತೆ ದೃಷ್ಟಿಯಿಂದ ಬಹುತೇಕರ ಮನೆಯಲ್ಲೇ ಮೊಟ್ಟೆ ಬಳಕೆ ಮಾಡುತ್ತಿದ್ದಾರೆ. ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮೇಲೆ ಹಕ್ಕಿಜ್ವರದ ಸುದ್ದಿ ಯಾವುದೇ ಪರಿಣಾಮ ಬೀರಿಲ್ಲ. ‘ಪ್ರಜಾವಾಣಿ’ ಕೆಲ ಮುಖ್ಯಶಿಕ್ಷಕರನ್ನು ಸಂಪರ್ಕಿಸಿದಾಗ, ‘ಹಕ್ಕಿಜ್ವರದ ಸುದ್ದಿಗಿಂತ ಮುಂಚೆ ಎಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನುತ್ತಿದ್ದರೋ ಈಗಲೂ ಅಷ್ಟೇ ಜನ ತಿನ್ನುತ್ತಾರೆ. ನಮ್ಮಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ’ ಎನ್ನುವ ಸಾಮಾನ್ಯ ಅಭಿಪ್ರಾಯಗಳು ವ್ಯಕ್ತವಾದವು.
ಪೌಲ್ಟ್ರಿಗಳಲ್ಲಿ ಒಂದು ಕೋಳಿಗೆ (2–2.5 ಕೆ.ಜಿ) ಸದ್ಯ ₹160 ಇದೆ. ಚಿಲ್ಲರೆ ವ್ಯಾಪಾರಸ್ಥರು ಪ್ರತಿ ಕೆ.ಜಿ ಕೋಳಿ ಮಾಂಸವನ್ನು ₹210–250ರ ವರೆಗೂ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಸಿಗುವ ನಾಟಿ ಕೋಳಿಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಂದಕ್ಕೆ ₹500–550ವರೆಗೂ ಬೆಲೆಯಿದ್ದು, ಇವುಗಳ ಮೊಟ್ಟೆಗೂ ಬೇಡಿಕೆ ಕಡಿಮೆಯಾಗಿಲ್ಲ.
‘ಆಂಧ್ರಪ್ರದೇಶ ಪೌಲ್ಟ್ರಿಗಳಲ್ಲಿ ಸಮಸ್ಯೆಯಾಗಿದ್ದರಿಂದ ಚಿಕನ್ ದರ ಕಡಿಮೆಯಾಗಿತ್ತು. ಎರಡು ದಿನಗಳಿಂದ ರಿಕವರಿ ಆಗುತ್ತಿದ್ದೆ. ನಮ್ಮಲ್ಲಿ ಹಕ್ಕಿಜ್ವರದ ಪರಿಣಾಮವಾಗಿಲ್ಲ’ ಎಂದು ಪೌಲ್ಟ್ರಿ ವ್ಯಾಪಾರಿ ಹೇಳಿದರು.
ನಮ್ಮಲ್ಲಿ ನಿತ್ಯ 6–7 ಕೆ.ಜಿ ಕಬಾಬ್ ಮಾರಾಟವಾಗುತ್ತಿತ್ತು. ಕಳೆದ ವಾರದಿಂದ 1 ಕೆ.ಜಿಯಷ್ಟು ಕಡಿಮೆಯಾಗಿದೆಸಾಧಿಕ್ ಬೀದಿ ಬದಿ ವ್ಯಾಪಾರಿ ಸೂಪರ್ ಮಾರುಕಟ್ಟೆ
ಬೇಸಿಗೆಯಲ್ಲಿ ಕೋಳಿಗಳ ಬೆಳವಣಿಗೆ ಕಡಿಮೆ ಇರುತ್ತದೆ. ಹೀಗಾಗಿ ಬೆಲೆ ಏರಿಳಿತ ಸಹಜ. ಸಗಟು ವ್ಯಾಪಾರದಲ್ಲಿ ದೊಡ್ಡ ಬದಲಾವಣೆಯಾಗಿಲ್ಲರಫಿ ಬೋಸಗೆ ನವಾಜ್ ಪೌಲ್ಟ್ರಿ ಟೇಡರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.