ಕಲಬುರಗಿ: ಜಿಲ್ಲೆಯಲ್ಲಿ ಈಗಾಗಲೇ ಸಾರಿಗೆ ಕಚೇರಿಯಿಂದ ನೋಂದಣಿಯಾಗಿರುವ ಮತ್ತು ಮುಂದೆ ನೋಂದಣಿಯಾಗುವ ಎಲ್ಲಾ ಎಲೆಕ್ಟ್ರಿಕ್ ಆಟೊಗಳು ಆರ್‌ಟಿಓ ಕಚೇರಿಯಿಂದ ಕಲಬುರಗಿ ನಗರದಲ್ಲಿ ಸಂಚಾರಕ್ಕೆ ಪರ್ಮಿಟ್ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾ ಜೀವ ರಕ್ಷಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇದುವರೆಗೆ ಬಯೋ ಇಂಧನದ ವಾಹನಗಳಿಗೆ ಪ್ರೋತ್ಸಾಹಿಸಲು ಪರ್ಮಿಟ್‌ನಿಂದ ವಿನಾಯಿತಿ ನೀಡಲಾಗಿತ್ತು. ಇದೀಗ ಸರ್ಕಾರದ ನಿರ್ದೇಶಾನುಸಾರ ಎಲೆಕ್ಟ್ರಿಕ್ ಆಟೊ ಮಾಲೀಕರು ಪರ್ಮಿಟ್ ಪಡೆಯಬೇಕಾಗಿದೆ’ ಎಂದರು.
ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಾಳುಗಳಿಗೆ ಗೋಲ್ಡನ್ ಹವರ್‌ನಲ್ಲಿ ನೆರವು ನೀಡಿದವರಿಗೆ ಪ್ರೋತ್ಸಾಹದಾಯಕ ₹ 5 ಸಾವಿರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಸ್ಪಿ ಕಚೇರಿಯಿಂದ 8 ಪ್ರಸ್ತಾವಗಳು ಬಂದಿದ್ದು, ಕೂಡಲೇ ಸಹಾಯ ಹಸ್ತ ಚಾಚಿದ ಸಾರ್ವಜನಿಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು.
ಹಿಟ್ ಅಂಡ್ ರನ್, ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿ: ಜಿಲ್ಲೆಯಾದ್ಯಂತ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ವಿಮೆ ಮಾಡಿಸಿಕೊಳ್ಳದ ಪಾದಚಾರಿಗಳಿಗೆ ಮರಣ ಪ್ರಕರಣ ಮತ್ತು ರಸ್ತೆ ಅಪಘಾತದಲ್ಲಿ ಗಾಯಾಳು ಪ್ರಕರಣಗಳ ಪೈಕಿ ಬಾಕಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ನೀಡಲು ವಿಚಾರಣಾಧಿಕಾರಿಗಳಾಗಿರುವ ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರು ಕೂಡಲೇ ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮರಣ ಹೊಂದಿದ್ದವರಿಗೆ ₹ 32 ಲಕ್ಷ ಮತ್ತು ಗಾಯಾಳುಗಳಿಗೆ ₹ 50 ಸಾವಿರ ನೆರವು ನೀಡಲಾಗುತ್ತಿದ್ದು, ಪೊಲೀಸ್ ಇಲಾಖೆಯು ವೈದ್ಯಕೀಯ ವರದಿಯೊಂದಿಗೆ ಎ.ಸಿ.ಗಳಿಗೆ ಸಲ್ಲಿಸಬೇಕು. ಎ.ಸಿ. ಅವರು ಪರಾಮರ್ಶಿಸಿ ಪರಿಹಾರಕ್ಕೆ ಶಿಫಾರಸು ಮಾಡಬೇಕೆಂದ ಅವರು, ಅರ್ಹರೆಲ್ಲರಿಗೂ ತಕ್ಷಣವೇ ಪರಿಹಾರ ಬಿಡುಗಡೆಗೆ ಕ್ರಮ ವಹಿಸುವಂತೆ ಎ.ಸಿ.ಗಳಿಗೆ ಸೂಚಿಸಲಾಯಿತು.
ರಸ್ತೆ ಸುರಕ್ಷತಾ ಸಭೆ: ಜಿಲ್ಲಾ ರಸ್ತೆ ಸುರಕ್ಷತಾ ಸಭೆ ಸಹ ನಡೆಸಿದ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ಈಗಾಗಲೇ ಗುರುತಿಸಿರುವ ಬ್ಲ್ಯಾಕ್ ಸ್ಪಾಟ್‍ಗಳಲ್ಲಿ, ರಸ್ತೆ ತಿರುವುಗಳಲ್ಲಿ ಸೈನೇಜ್ ಬೋರ್ಡ್ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವುದು, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ, ಡಿಸಿಪಿ ಪ್ರವೀಣ ನಾಯಕ್, ಆರ್‌ಟಿಓ ಆನಂದ ಪಾರ್ತನಳ್ಳಿ, ಲೋಕೋಪಯೋಗಿ ಇಲಾಖೆಯ ಇಇ ಸುಭಾಷ ಬಿರಾದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್ ದೌಲಾ ಸೇರಿದಂತೆ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.