ADVERTISEMENT

ಇಎಸ್‌ಐಸಿ ಲ್ಯಾಬ್‌ ನನೆಗುದಿಗೆ

ವೈರಾಣು ತಪಾಸಣೆ, ಡಯಾಲಿಸಿಸ್‌, ಮರಣೋತ್ತರ ಪರೀಕ್ಷೆಗೆ ಜಿಮ್ಸ್‌ ಒಂದೇ ಗತಿ

ಸಂತೋಷ ಈ.ಚಿನಗುಡಿ
Published 13 ಜುಲೈ 2020, 6:03 IST
Last Updated 13 ಜುಲೈ 2020, 6:03 IST

ಕಲಬುರ್ಗಿ: ಇಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ತೆರೆಯಬೇಕಿದ್ದ ಕೊರೊನಾ ಸೋಂಕು ಪತ್ತೆ ಪ‍್ರಯೋಗಾಲಯ ಇನ್ನೂ ನನೆಗುದಿಗೆ ಬಿದ್ದಿದೆ. ಜಿಲ್ಲೆಗೆ ಎರಡನೇ ಲ್ಯಾಬ್‌ ಮಂಜೂರಾಗಿ ಎರಡು ತಿಂಗಳು ಕಳೆದರೂ ಆಸ್ಪತ್ರೆಯ ಅಧಿಕಾರಿಗಳು ಒಂದು ಹೆಜ್ಜೆ ಕೂಡ ಮುಂದೆ ಇಟ್ಟಿಲ್ಲ. ಇದರಿಂದಾಗಿ ಜಿಮ್ಸ್‌ನ ಲ್ಯಾಬ್‌ ಮೇಲೆ ವಿಪರೀತ ಒತ್ತಡ ಉಂಟಾಗಿದೆ.

ಮಾರ್ಚ್‌ ಎರಡನೇ ವಾರದಲ್ಲಿ ನಗರದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿತು. ಇದನ್ನು ಮನಗಂಡು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಆರೂ ಜಿಲ್ಲೆಗಳಿಗೆ ಸೇರಿ, ಜಿಮ್ಸ್‌ಗೆ ಒಂದು ಲ್ಯಾಬ್‌ ನೀಡಿತು. ಮಾರ್ಚ್‌ 19ರಿಂದ ಇದು ಕಾರ್ಯಾರಂಭ ಮಾಡಿತು. ಇದರಿಂದ ಸೋಂಕಿತರನ್ನು ಪತ್ತೆ ಹೆಚ್ಚುವ ಕಾರ್ಯ ವೇಗ ಪಡೆಯಿತು.

ಆದರೆ, ಮೇ ತಿಂಗಳ ಆರಂಭದಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿತು. ಜಿಮ್ಸ್‌ನ ಲ್ಯಾಬ್‌ ಹಗಲಿರುಳು ಕೆಲಸ ಮಾಡಿದರೂ ಸಮಯ ಸಾಲದಾಯಿತು. ಹೀಗಾಗಿ, ಕೇಂದ್ರ ಸರ್ಕಾರ ಇಎಸ್‌ಐ ಆಸ್ಪತ್ರೆಗೆ ಮತ್ತೊಂದು ಪ್ರಯೋಗಾಲಯ ಮಂಜೂರು ಮಾಡಿದೆ. ಮೇ ಎರಡನೇ ವಾರದಲ್ಲೇ ಕೆಲಸ ಆರಂಭಿಸಬೇಕಿದ್ದ ಈ ಪ್ರಯೋಗಾಲಯ ಇನ್ನೂ ಬಿಳಿಹಾಳೆಯಲ್ಲೇ ಇದೆ.

ADVERTISEMENT

‘ಇಎಸ್‌ಐಸಿಗೆ ಬೃಹತ್‌ ಕಟ್ಟಡವಿದ್ದು, ಸಾಕಷ್ಟು ಸ್ಥಳಾವಕಾಶವಿದೆ. ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಸಿಬ್ಬಂದಿ ಕೊರತೆ ಇದೆ ಎಂಬ ಉತ್ತರ ನೀಡುತ್ತಾರೆ. ಯುನೈಟೆಡ್‌ನಂಥ ಒಂದು ಖಾಸಗಿ ಆಸ್ಪತ್ರೆ ಲ್ಯಾಬ್‌ ಆರಂಭಿಸಿದೆ. ಆದರೆ, ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಇದ್ದರೂ ಇಎಸ್‌ಐಸಿ ಅಧಿಕಾರಿಗಳು ಬಳಸಿಕೊಳ್ಳುತ್ತಿಲ್ಲ. ಹೀಗಾಗಿ, ಜಿಮ್ಸ್‌ ಮೇಲೆ ಒತ್ತಡ ಹೆಚ್ಚಾಗಿದೆ. ದಿನಕ್ಕೆ ಕನಿಷ್ಠ ಸಾವಿರದಷ್ಟು ಪರೀಕ್ಷೆ ನಡೆಸಲಾಗುತ್ತಿದೆ. ಹಗಲು– ರಾತ್ರಿ ಪ್ರಯೋಗಾಲಯ ದುಡಿಯುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಅಸಹಾಯಕತೆ ತೋರಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದ್ದ ಇಎಸ್ಐಸಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಎಲ್. ನಾಗರಾಜ್‌ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ಇಎಸ್‌ಐಸಿ ಪಾತ್ರ ಇಷ್ಟೇ..!

‘ಸದ್ಯ ಇಲ್ಲಿ ಐಸೋಲೇಷನ್‌ ವಾರ್ಡ್‌, ಕೋವಿಡ್‌ ಚಿಕಿತ್ಸೆ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ. ಸ್ವತಃ ಮೆಡಿಕಲ್‌ ಕಾಲೇಜ್‌, ಡೆಂಟಲ್‌ ಕಾಲೇಜ್‌, ನರ್ಸಿಂಗ್‌ ಹಾಗೂ ಪ್ಯಾರಾ ಮೆಡಿಕಲ್‌ ಕಾಲೇಜ್‌ಗಳನ್ನು ಹೊಂದಿದ್ದರೂ ತಕ್ಕ ಪಾತ್ರ ನಿರ್ವಹಿಸುತ್ತಿಲ್ಲ’ ಎಂಬುದು ಮೂಲಗಳ ಮಾಹಿತಿ.

ಗಂಟಲು ದ್ರವ ಮಾದರಿ ಸಂಗ್ರಹ ಮಾಡಿದರೂ ತಪಾಸಣೆ ಮಾತ್ರ ಜಿಮ್ಸ್‌ನಲ್ಲಿ, ಯಾರಾದರೂ ಮೃತಪಟ್ಟರೂ ಮರಣೋತ್ತರ ಪರೀಕ್ಷೆ ಜಿಮ್ಸ್‌ನಲ್ಲಿ, ಡಯಾಲಿಸಿಸ್‌ ಕೂಡ ಜಿಮ್ಸ್‌ನಲ್ಲಿ ಹೀಗೆ ಪ್ರತಿಯೊಂದರಲ್ಲೂ ಇಎಸ್‌ಐಸಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂಬುದು ದೂರು.

ಇನ್ನೂ ಮೂರು ಲ್ಯಾಬ್‌: ಸಭೆ ಇಂದು

‘ಕೋವಿಡ್‌ ನಿಯಂತ್ರಣದಲ್ಲಿ ಇಎಸ್‌ಐಸಿ ಪಾತ್ರ ತೃಪ್ತಿದಾಯಕವಾಗಿಲ್ಲ. ದೊಡ್ಡ ಕಟ್ಟಡ, ಐಸೋಲೇಷನ್‌ ವಾರ್ಡ್‌ ಬಿಟ್ಟರೆ ಬೇರೆ ಕೆಲಸಗಳು ಅಲ್ಲಿ ಸಾಗುತ್ತಿಲ್ಲ. ಲ್ಯಾಬ್‌ ಮಂಜೂರಾಗಿ ಎರಡು ತಿಂಗಳಾದರೂ ಪ್ರಕ್ರಿಯೆ ಆರಂಭಿಸಲು ಆಸಕ್ತಿ ತೋರಿಲ್ಲ. ನಾವು ಬೆನ್ನಿಗೆ ಬಿದ್ದರೆ ಮಾತ್ರ ಕೆಲಸ ಮಾಡುವಂತಿದೆ ಅವರ ವರ್ತನೆ’ ಎಂದು ಸಂಸದ ಡಾ.ಉಮೇಶ ಜಾಧವ ಪ್ರತಿಕ್ರಿಯಿಸಿದರು.

‘ಲ್ಯಾಬ್‌ ಸ್ಥಾಪನೆ ಕುರಿತು ಚರ್ಚಿಸಲು ಸೋಮವಾರ (ಜುಲೈ 13) ಇಎಸ್‌ಐಸಿ ಮೆಡಿಕಲ್ ಕಾಲೇಜು, ಎಂಆರ್‌ಎಂಸಿ (ಬಸವೇಶ್ವರ ಆಸ್ಪತ್ರೆ) ಹಾಗೂ ಕೆಬಿಎನ್‌ ಮೆಡಿಕಲ್‌ ಕಾಲೇಜುಗಳ ಮುಖ್ಯಸ್ಥರ ಸಭೆ ಕರೆದಿದ್ದೇನೆ. ಏಕಕಾಲಕ್ಕೆ ಮೂರೂ ಕಡೆ ಪ್ರಯೋಗಾಲಯ ಆರಂಭಿಸಲು ಅಗತ್ಯ ವ್ಯವಸ್ಥೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.