ADVERTISEMENT

ಕಲಬುರಗಿ: ಇಡಬ್ಲುಎಸ್ ಜಾರಿಗೆ ಬ್ರಾಹ್ಮಣ ಮಹಾಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:52 IST
Last Updated 17 ಫೆಬ್ರುವರಿ 2026, 5:52 IST
ಗೋವಿಂದ ಕುಲಕರ್ಣಿ
ಗೋವಿಂದ ಕುಲಕರ್ಣಿ   

ಕಲಬುರಗಿ: ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿದ್ದು, ರಾಜ್ಯ ಸರ್ಕಾರ ಅದನ್ನು ರಾಜ್ಯದಲ್ಲಿ ಜಾರಿಗೊಳಿಸಿಲ್ಲ. ಕೂಡಲೇ ಈ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ಕುಲಕರ್ಣಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಉದ್ಯೋಗಗಳಲ್ಲಿ ಶೇ 10ರಷ್ಟು ಮೀಸಲಾತಿ ಸಿಗುತ್ತಿದೆ. ರಾಜ್ಯದಲ್ಲಿ ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡಬಾರದು’ ಎಂದರು.

‘ಇಡಬ್ಲ್ಯುಎಸ್ ಮೀಸಲಾತಿ ಯಾವುದೇ ಸಮುದಾಯಕ್ಕೆ ವಿಶೇಷ ಸೌಲಭ್ಯವಲ್ಲ, ಬದಲಾಗಿ ಆರ್ಥಿಕ ಹಿನ್ನಡೆ ಆಧಾರದ ಮೇಲೆ ನೀಡಲಾಗುವ ಸಂವಿಧಾನಬದ್ಧ ಹಕ್ಕು. ರಾಜ್ಯದಲ್ಲಿ ಮೀಸಲಾತಿ ಜಾರಿಗೊಳಿಸದ್ದರಿಂದ ಅರ್ಹ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ADVERTISEMENT

ಪತ್ರಕರ್ತೆ ಮೇಲೆ ಹಲ್ಲೆಗೆ ಖಂಡನೆ: ದೆಹಲಿ ವಿಶ್ವವಿದ್ಯಾಲಯ ಉತ್ತರ ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪತ್ರಕರ್ತೆ ರುಚಿ ತಿವಾರಿ ಮೇಲೆ ನಡೆದಿದೆ ಎನ್ನಲಾದ ಜಾತಿ ಆಧಾರಿತ ದೌರ್ಜನ್ಯ, ಅವಮಾನ ಮತ್ತು ಹಿಂಸೆ ಖಂಡನೀಯ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾಗಿದ್ದು, ಪತ್ರಕರ್ತರ ಸುರಕ್ಷತೆ ಮತ್ತು ಗೌರವ ಕಾಪಾಡುವುದು ಸರ್ಕಾರದ ಕೆಲಸ. ಈ ಬಗ್ಗೆ ನಿಷ್ಟಪಕ್ಷಪಾತ ಮತ್ತು ತ್ವರಿತವಾಗಿ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ಅವಿನಾಶ ಕುಲಕರ್ಣಿ, ಗುರುರಾಜ ಭರತನೂರ್, ಗುರುರಾಜ ಕುಲಕರ್ಣಿ, ಪಿ.ವಿ.ಜೋಶಿ, ನಾರಾಯಣ ಜಾಹಗೀರದಾರ್, ಪ್ರಸನ್ನ ದೇಶಪಾಂಡೆ, ಪ್ರದೀಪ ಕುಲಕರ್ಣಿ, ಕಿಶೋರ ಕಟ್ಟಿ, ಅಮಿತ್ ಕುಲಕರ್ಣಿ ಗೋಷ್ಠಿಯಲ್ಲಿದ್ದರು.

ಬ್ರಾಹ್ಮಣ ಮಹಾಸಂಘವು 32 ವಿವಿಧ ವಿಭಾಗಗಳನ್ನು ಹೊಂದಿದ್ದು ಮೆಟ್ರೊ ನಗರಗಳಲ್ಲಿ ಬ್ರಾಹ್ಮಣ ಭವನಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಹಾಸ್ಟೆಲ್‌ಗಳನ್ನು ನಿರ್ಮಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು
ಗೋವಿಂದ ಕುಲಕರ್ಣಿ ರಾಷ್ಟ್ರೀಯ ಅಧ್ಯಕ್ಷ ಬ್ರಾಹ್ಮಣ ಮಹಾಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.