
ಕಲಬುರಗಿ: ‘ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಒತ್ತಡವನ್ನು ದೂರ ಮಾಡಲು ಪಠ್ಯದ ಜೊತೆಗೆ ಸಂಗೀತ, ಸಾಹಿತ್ಯ, ಕಲೆ ಸೇರಿ ಇತರೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಹೇಳಿದರು.
ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಂಡ ಕಲಬುರಗಿ ವಲಯದ ಯುವಜನೋತ್ಸವ–2025 ಉದ್ಘಾಟಿಸಿ ಅವರು ಮಾತನಾಡಿದರು.
‘ಅವಕಾಶಗಳು ಸಿಕ್ಕಾಗ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು. ಸಾಧನೆ ಎಂಬುದು ಅಸಾಧ್ಯವಲ್ಲ. ಸಾಧಿಸುವ ಛಲ ಇರಬೇಕು. ಇಂದಿನ ಕಾಲೇಜುಗಳು ಮಾರ್ಕ್ಸ್‌ವಾದಿಗಳನ್ನು ಹೊರಹಾಕುವ ಕಾರ್ಖಾನೆಗಳಾಗಿವೆ. ಮಾರ್ಕ್ಸ್ ಪಡೆಯುವುದು ತಪ್ಪಲ್ಲ. ಅದರ ಜೊತೆ ಎಲ್ಲವುಗಳಿಗೆ ಆದ್ಯತೆ ನೀಡಬೇಕು. ಮೊಬೈಲ್ ಗೀಳಿನಿಂದ ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಪ್ರವೃತ್ತಿ ಕಡಿಮೆಯಾಗಿದೆ. ನಾಟಕಗಳಲ್ಲಿ ನೂರಾರು ಸಂದೇಶಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ನಾಟಕಗಳನ್ನು ವಿದ್ಯಾರ್ಥಿಗಳು ಆಲಿಸಬೇಕು’ ಎಂದರು.
‘ನಾಟಕ, ಸಾಹಿತ್ಯ, ಸಂಗೀತ, ಜಾನಪದ ಕಲೆಗಳು ಮನಸ್ಸಿಗೆ ಮುದ ನೀಡುತ್ತವ. ಅದರಲ್ಲಿ ಭಾಗವಹಿಸಿದರೆ ಜೀವಮಾನದಲ್ಲಿ ಸದಾ ನೆನೆಪಿನಲ್ಲಿ ಉಳಿದುಕೊಳುತ್ತವೆ. ಇಂದಿನ ದಿನಮಾನಗಳಲ್ಲಿ ವಿಜ್ಞಾನ ತಂತಜ್ಞಾನದ ಹೆಸರಿನಲ್ಲಿ ಕಲೆ, ಸಾಹಿತ್ಯದ ಬಗ್ಗೆ ಯುವಕರಿಗೆ ಒಲವು ಕಡಿಮೆಯಾಗುತ್ತಿದೆ. ಇದರಲ್ಲಿಯೂ ಹಲವಾರ ಉದ್ಯೋಗ ಅವಕಾಶಗಳಿವೆ’ ಎಂದರು.
‘ಗಂಗೂಬಾಯಿ ಹಾನಗಲ್, ಪಿ.ಟಿ. ಉಷಾ, ಡಾ. ರಾಜಕುಮಾರ್ ಅವರು ಶಿಕ್ಷಣ ಪಡೆಯದಿದ್ದರೂ ಅವರ ಸಾಧನೆ ಮೂಲಕ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಸಾಧನೆಗೆ ಒಂದು ಕ್ಷೇತ್ರ ಎಂಬುದು ಸೀಮಿತವಿಲ್ಲ. ವಿದ್ಯಾರ್ಥಿಗಳು ಯಾವುದೇ ಕಾರ್ಯ ಮಾಡಿದೂರು ಶ್ರದ್ಧೆಯಿಂದ ಮಾಡಬೇಕು. ಆಗ ಉನ್ನತ ಗುರಿ ಮುಟ್ಟಲು ಸಾಧ್ಯವಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪೀಪಲ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿರುವ ಕಲೆಗಳನ್ನು ಹೊರ ಹಾಕಲು ಯುವಜನೋತ್ಸವ ಒಂದು ಸೂಕ್ತವಾದ ವೇದಿಕೆಯಾಗಿದೆ. ಸೋಲು–ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಎಲ್ಲ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸಾಧನೆ ಮಾಡುವ ಮೂಲಕ ಕಾಲೇಜಿನ ಹೆಸರು ತರಬೇಕು ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಮಹಾಂತೇಶ ಬಿದನೂರು ಯುವಜನೋತ್ಸವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಆಡಳಿತಾಧಿಕಾರಿ ಡಾ.ಚಂದ್ರಶೇಖರ ಶೀಲವಂತ, ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಎಸ್., ಯುವ ಜನೋತ್ಸವ ಸಂಚಾಲಕ ತಿಪ್ಪೇಸ್ವಾಮಿ ಎಸ್. ಹಾಗೂ ಇತರರು ಹಾಜರಿದ್ದರು.
ಕಾಲೇಜಿನ ಪ್ರಾಧ್ಯಾಪಕಿ ಅಮೃತಾ ನಿರೂಪಿಸಿದರು. ಮಹಾಲಕ್ಷ್ಮಿ ವಂದಿಸಿದರು.
ವಲಯ ಮಟ್ಟದ ಯುವಜನೋತ್ಸವದಲ್ಲಿ ಬೀದರ್, ಗಂಗಾವತಿ ಸೇರಿ 8 ಕಾಲೇಜಿಗಳಿಂದ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.