ADVERTISEMENT

ಕಲಬುರಗಿ: ತೊಗರಿಗೆ ₹ 10 ಸಾವಿರ ಬೆಂಬಲ ಬೆಲೆಗೆ ಒತ್ತಾಯ

ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಹೋರಾಟ–ಕರ್ನಾಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 9:57 IST
Last Updated 25 ಡಿಸೆಂಬರ್ 2021, 9:57 IST
ಸಂಯುಕ್ತ ಹೋರಾಟ–ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು
ಸಂಯುಕ್ತ ಹೋರಾಟ–ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು   

ಕಲಬುರಗಿ: ಜಿಲ್ಲೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಠ ₹ 10 ಸಾವಿರ ಬೆಂಬಲ ಬೆಲೆ ಹಾಗೂ ಎಕರೆಗೆ ₹ 20 ಸಾವಿರ ಬೆಳೆನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಹೋರಾಟ–ಕರ್ನಾಟಕ ನೇತೃತ್ವದಲ್ಲಿ ರೈತ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ‌‘ಪ್ರಸಕ್ತ ಕೇಂದ್ರ ಸರ್ಕಾರವು ₹ 6300 ಬೆಂಬಲ ಬೆಲೆಯೊಂದಿಗೆ ತೊಗರಿ ಖರೀದಿಗೆ ಮುಂದಾಗಿದೆ. ಜಿಲ್ಲೆಯಲ್ಲಿ 184 ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಕೆಲಸವನ್ನು ಆರಂಭಿಸುವುದಾಗಿ ಈಗಾಗಲೇ ಸರ್ಕಾರದಿಂದ ನಿರ್ದೇಶನ ಬಂದಿದೆ. ಆದರೆ ಆ ನಿರ್ದೇಶನವು ಇನ್ನೂ ಕಾಗದದಲ್ಲಿರುವುದು ದುರಂತವಾಗಿದೆ. ರಾಜ್ಯ ಸರ್ಕಾರವು ತನ್ನ ಬೆಂಬಲ ಬೆಲೆಯೊಂದಿಗೆ ತೊಗರಿಯನ್ನು ಖರೀದಿಸುವ ವಿಷಯದ ಕುರಿತು ಜಾಣ ಮೌನವಹಿಸಿದೆ. ಕಳೆದ ಕೆಲವು ವರ್ಷಗಳಿಂದ ಇದೇ ದರದಲ್ಲಿ ಖರೀದಿಸುವುದಾಗಿ ಹೇಳುವ ಸರ್ಕಾರವು ಖರೀದಿಸುವ ನಾಟಕವನ್ನು ಆಡುತ್ತಾ ಅಪಾರ ಬೆಳೆನಷ್ಟವಾಗಿ ಕರೋನ ಮಹಾಮಾರಿಯ ಹೊಡೆತಕ್ಕೆ ಜರ್ಜರಿತರಾಗಿರುವ ಜಿಲ್ಲೆಯ ರೈತರಿಗೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿದೆ’ ಎಂದು ಟೀಕಿಸಿದರು.

‘ಚಳಿಗಾಲದ ಅಧಿವೇಶನದಲ್ಲೂ ತೊಗರಿ ಬೆಳೆಗಾರರಿಗೆ, ಕಬ್ಬು ಮತ್ತು ಭತ್ತ ಬೆಳೆಗಾರರ ಕುರಿತು ಚರ್ಚೆಯಾಗದೇ ಇರುವುದು ವಿಪರ್ಯಾಸ. ಈ ಬಾರಿ ಮಳೆ ಮತ್ತು ಮೋಡಕ್ಕೆ ತುತ್ತಾಗಿ ಇಡೀ ಕರ್ನಾಟದ ರೈತರು ಕೋಟ್ಯಂತರ ರುಪಾಯಿ ಬೆಳೆ ನಷ್ಟವನ್ನು ಅನುಭವಿಸಿದ್ದಾರೆ. ಸಾಲದ ಹೊರೆ ತೀರಿಸಲು ಆಗುವುದಿಲ್ಲ ಎಂದು ನೊಂದು ಕೆಲ ರೈತರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಷ್ಟೊಂದು ನಿರ್ಲಿಪ್ತತೆಯಿಂದಿರಲು ಹೇಗೆ ಸಾಧ್ಯ? ಮನುಷ್ಯತ್ವನ್ನೇ ಕಳೆದುಕೊಂಡಿರುವ ಸ್ಥಿತಿಗೆ ತಲುಪಿರುವ ಸರ್ಕಾರಗಳು ಇಂತಹ ಸ್ಥಿತಿಯಲ್ಲಿ ರೈತರಿಗೆ ಸಮರ್ಪಕ ಬೆಂಬಲ ಬೆಲೆ ಮತ್ತು ಸೂಕ್ತ ಬೆಳೆ ನಷ್ಟ ಪರಿಹಾರ ನೀಡದಿದ್ದರೆ ಪರಿಸ್ಥಿತಿಯು ವಿಕೋಪಕ್ಕೆ ತಿರುಗುವುದಕ್ಕೆ ಸಮಯ ತೆಗೆದುಕೊಳ್ಳುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ತೊಗರಿ ಕಟಾವು ಆರಂಭವಾಗಿದೆ. ಇದು ಮಾರುಕಟ್ಟೆಗೆ ಬರುವದರೊಳಗೆ ಸಣ್ಣ ರೈತರಿಗೆ ಅನುಕೂಲವಾಗುವಂತೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಹಾಗೂ ಖರೀದಿಗೆ ರಶೀದಿಯನ್ನು ಕೊಡಬೇಕು, ಖರೀದಿಸಿದ ತೊಗರಿಯ ಹಣವನ್ನು ಕೂಡಲೇ ರೈತರಿಗೆ ಪಾವತಿಸಬೇಕು. ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನೂಕೂಲವಾಗುವಂತೆ ಪಾರದರ್ಶಕ ಖರೀದಿಯನ್ನು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಭಾರತೀಯ ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ., ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಂದ್ರಪ್ಪ ತಂಬೆ, ಗೌರವ ಅಧ್ಯಕ್ಷ ಉಮಾಪತಿ ಪಾಟೀಲ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್‌.ಆರ್‌. ಕೊಲ್ಲೂರ, ಆರ್‌ಪಿಐ (ಅಂಬೇಡ್ಕರ್‌ವಾದ) ಅಧ್ಯಕ್ಷ ಎ.ಬಿ. ಹೊಸಮನಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.