ADVERTISEMENT

ಕಾಯ್ದೆ ತಿದ್ದುಪಡಿ; ಪ್ರತಿಗಳನ್ನು ಸುಟ್ಟು ಆಕ್ರೋಶ

ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ‘ಅಖಿಲ ಭಾರತ ರೈತರ ಏಕತಾ ದಿನ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:35 IST
Last Updated 3 ಡಿಸೆಂಬರ್ 2020, 15:35 IST
ಕೇಂದ್ರ ಸರ್ಕಾರದ ನಡೆ ಖಂಡಿಸಿ ರೈತ– ಕೃಷಿ ಕಾರ್ಮಿಕರ ಸಂಘಟನೆಯಿಂದ ಕಲಬುರ್ಗಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು
ಕೇಂದ್ರ ಸರ್ಕಾರದ ನಡೆ ಖಂಡಿಸಿ ರೈತ– ಕೃಷಿ ಕಾರ್ಮಿಕರ ಸಂಘಟನೆಯಿಂದ ಕಲಬುರ್ಗಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ಕೇಂದ್ರ ಸರ್ಕಾರ ಇತ್ತೀಚೆಗೆ ತಿದ್ದುಪಡಿ ಮಾಡಿದ ಎಲ್ಲ ಕಾಯ್ದೆಗಳೂ ರೈತ ವಿರೋಧಿ ಆಗಿವೆ ಎಂದು ಆರೋಪಿಸಿ, ರೈತ– ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಕಾಯ್ದೆ ತಿದ್ದುಪಡಿ ಮಾಡಿದ ಪ್ರತಿಗಳನ್ನು ಸುಟ್ಟುಹಾಕಿದ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಇಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಧೋರಣೆ ಖಂಡಿಸಿ ಘೋಷಣೆ ಕೂಗಿದರು.‌ ‘ದೆಹಲಿ ಚಲೋ’ ಕೈಗೊಂಡಿರುವ ರೈತರ ಹೋರಾಟವನ್ನು ಬೆಂಬಲಿಸಲು ಆಯೋಜಿಸಿದ್ದ ‘ಅಖಿಲ ಭಾರತ ರೈತರ ಏಕತಾ ದಿನ’ದ ಅಂಗವಾಗಿ ಈ ‍ಪ್ರತಿಭಟನೆ ನಡೆಸಿದರು.‌

ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಎಚ್.ವಿ. ದಿವಾಕರ ಮಾತನಾಡಿ, ‘ನವೆಂಬರ್‌ 26ರಿಂದಲೇ ದೇಶದೆಲ್ಲೆಡೆ ರೈತರ ಬೃಹತ್‌ ಹೋರಾಟ ಆರಂಭವಾಗಿದೆ. ದೆಹಲಿ ಕಡೆಗೆ ಮುನ್ನುಗ್ಗುತ್ತಿರುವ ಲಕ್ಷಾಂತರ ರೈತರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಎಪಿಎಂಸಿ ಅನೂರ್ಜಿತಗೊಳಿಸುವ ಕಾಯ್ದೆ, ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದ ಕಾಯ್ದೆ, ವಿದ್ಯುತ್ ಕಾಯ್ದೆ.. ಹೀಗೆ ರೈತರಿಗೇ ಸಂಬಂಧಿಸಿದ ಎಲ್ಲ ಕಾಯ್ದೆಗಳನ್ನ ತಿದ್ದುಪಡಿ ಮಾಡಿದೆ. ಇವು ರೈತರ ಬಾಳನ್ನು ಕರಾಳಗೊಳಿಸಲಿವೆ. ಸರ್ಕಾರದ ಕ್ರಮ ಖಂಡಿಸಿ ಆಲ್ ಇಂಡಿಯಾ ಕಿಸಾನ್ ಖೇತ್ ಮಜ್ದೂರ್ ಸಂಘಟನೆ ಹಮ್ಮಿಕೊಂಡ ದೇಶವ್ಯಾ‍ಪಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದರು.

ADVERTISEMENT

‌‘ದೇಶದ ಕಾರ್ಪೊರೇಟ್‌ ಮನೆತನಗಳ ಉದ್ದಾರಕ್ಕಾಗಿ, ಕೇಂದ್ರ ಸರ್ಕಾರ ರೈತರ ಮರಣಶಾಸನ ಬರೆತಯುತ್ತಿದೆ. ಲಾಕ್‌ಡೌನ್ ಸಮಯವನ್ನು ದುರುಪಯೊಗ ಪಡಿಸಿಕೊಂಡು, ರೈತರಿಗೆ, ದುಡಿಯುವ ಜನತೆಗೆ ದ್ರೋಹ ಎಸಗಿದೆ. ಈಗ ದುಡಿಯುವ ಮನಸ್ಸುಗಳ ಸಹನೆಯ ಕಟ್ಟೆ ಒಡೆದಿದೆ. ಈ ಹೋರಾಟ ಜ್ವಾಲಾಮುಖಿಯಂತೆ ಸ್ಫೋಟಿಸಬೇಕು. ಅದಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕ ಕೈಜೋಡಿಸಬೇಕು’ ಎಂದೂ ಹೇಳಿದರು.

‘ಒಂದು ದೇಶ– ಒಂದು ಮಾರುಕಟ್ಟೆ’ ಎಂದು ಹೇಳುವ ಪ್ರಧಾನಿ; ತಾವು ಮಾಡುವುದೆಲ್ಲವೂ ರೈತರ ಹಿತಕ್ಕಾಗಿಯೇ ಎಂದು ಬೊಬ್ಬೆ ಇಡುತ್ತಿದ್ದಾರೆ. ಅವರ ನಯವಂಚಕತನ ಬಯಲಾಗುತ್ತಿದೆ. ರೈಲ್ವೆ, ಶಿಕ್ಷಣ, ಆರೋಗ್ಯ, ಅಂಚೆ, ಸಾರಿಗೆ, ಬ್ಯಾಂಕ್, ಎಲ್‍ಐಸಿ ಹೀಗೆ ಎಲ್ಲಾ ಸಾರ್ವಜನಿಕ ಸೇವಾ ಕ್ಷೇತ್ರಗಳನ್ನು ಬಂಡವಾಳಶಾಹಿಗಳ ಹೊಟ್ಟೆಗೆ ಸುರಿಯುತ್ತಿದ್ದಾರೆ. ದೇಶದ ಜನರಿಗೆ ಸತ್ಯ ಅರಿವಾದ ಮೇಲೆ ಗುಳ್ಳೆ ನರಿಯಂತೆ ನಾನೇನೂ ಮಾಡುಲ್ಲ ಎನ್ನುವಂತೆ ಮೌನವಾಗಿದ್ದಾರೆ’ ಎಂದೂ ಪ್ರತಿಭಟನಾಕಾರರು ಹರಿಹಾಯ್ದರು.

ಸಂಘಟನೆ ರಾಜ್ಯ ಘಟಕದ ಖಜಾಂಚಿ ವಿ.ನಾಗಮ್ಮಾಳ, ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಕೆ. ಮಾನೆ, ಕಾರ್ಯದರ್ಶಿಗಳಾದ ಮಹೇಶ ಎಸ್.ಬಿ., ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಸಿಂಘೆ, ಗುಂಡಣ್ಣ ಕುಂಬಾರ, ರಾಜೇಂದ್ರ ಅತನೂರ, ಯಶವಂತ ದಂಡಾ, ಮಲ್ಲಯ್ಯ ಗುತ್ತೇದಾರ ಹಾಗೂ ಸದಸ್ಯರಾದ ಶರಣಯ್ಯ ಗುತ್ತೇದಾರ, ಪರಶುರಾಮ, ಶರಣಯ್ಯ ಸ್ವಾಮಿ, ಪ್ರವೀಣ ತಂಗಾ, ರಹೀಮ ಪಟೇಲ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.