
ಕಲಬುರಗಿ: ಬೆಳೆವಿಮೆ ಹಣ ಬಿಡುಗಡೆ, ಅತಿವೃಷ್ಟಿ ಪರಿಹಾರ, ಎಂಎಸ್‌ಪಿ ಅನುಷ್ಠಾನ, ಸಾಲಮನ್ನಾ, ತೊಗರಿಗೆ ಸಮರ್ಪಕ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರೈತ, ಕಾರ್ಮಿಕ, ದಲಿತ, ಪ್ರಗತಿಪರ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ರೈತ ವಿರೋಧಿ ನಡೆ ವಿರುದ್ಧ ಘೋಷಣೆ ಕೂಗಿದರು. ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಕೃಷಿ ಇಲಾಖೆ ಅಧಿಕಾರಿಗೆ ಸಲ್ಲಿಸಿದರು.
‘ರೈತರಿಗೆ ಬೆಳೆ ವಿಮೆ ಘೋಷಣೆ ಮಾಡುವ ಕುರಿತು ಬಜೆಟ್‌ನಲ್ಲಿ ಸರ್ಕಾರ ಪರಿಹಾರ ಘೋಷಿಸಬೇಕು. ಬಾಕಿ ಇರುವ ವಿಮೆ ಹಣವನ್ನು ಕೂಡಲೇ ರೈತರಿಗೆ ಪಾವತಿ ಮಾಡುವಂತೆ ಖಾಸಗಿ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಅಫಜಲಪುರ, ಆಳಂದ, ಚಿಂಚೋಳಿ, ಸೇಡಂ, ಚಿತ್ತಾಪುರ ಮತ್ತು ಕಲಬುರಗಿ ತಾಲ್ಲೂಕುಗಳಲ್ಲಿ ವ್ಯಾಪಕ ಬೆಳೆ ಹಾನಿಯಾಗಿದೆ. ಅಂದಾಜು 45,000 ರಿಂದ 60,000 ಹೆಕ್ಟೇರ್ ಪ್ರದೇಶದಲ್ಲಿ ಜೋಳ, ತೊಗರಿ, ಹತ್ತಿ, ಸೊಯಾಬೀನ್ ಬೆಳೆಗಳು ಹಾನಿಗೊಳಗಾಗಿವೆ. ಸುಮಾರು 60,000ಕ್ಕೂ ಹೆಚ್ಚು ರೈತರು ವಿಮೆಗೆ ನೋಂದಾಯಿಸಿದ್ದು, ಈವರೆಗೆ ಬಹುತೇಕ ರೈತರಿಗೆ ವಿಮೆ ಪರಿಹಾರ ಜಮೆಯಾಗಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
ವಿಮೆ ಕಂಪನಿಯವರು ರೈತರಿಂದ ವಿಮೆಯನ್ನು ಕಟ್ಟಿಸಿಕೊಳ್ಳುವಾಗ ಮಾಡುವ ಪ್ರಚಾರ, ತೋರಿಸುವ ಆಸಕ್ತಿಯು ರೈತರು ನಷ್ಟದಲ್ಲಿರುವಾಗ ತೋರಿಸುವುದಿಲ್ಲ. ರೈತರಿಗೆ ಆದ ನಷ್ಟದ ಶೇ 20 ರಷ್ಟು ವಿಮೆ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಇಂತಹ ಕಂಪನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಿ, ಲೈಸನ್ಸ್ ರುದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
‘ಸರ್ಕಾರವೇ ನೇರವಾಗಿ ವಿಮೆಯನ್ನು ನೋಡಿಕೊಳ್ಳಬೇಕು ಹಾಗೂ ಸಮರ್ಪಕವಾಗಿ ವಿಮೆ ಹಣ ಬಿಡುಗಡೆಗೊಳಿಸಬೇಕು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸಮಗ್ರ ಸಾಲಮನ್ನಾ ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ಕನಿಷ್ಠ ಬೆಂಬಲ ಬೆಲೆ ಕಡ್ಡಾಯ ಜಾರಿಗೊಳಿಸಿ, ನೇರ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು. ತೊಗರಿಗೆ ಘೋಷಿತ ಎಂಎಸ್‌ಪಿ ದರದಲ್ಲಿ ಖರೀದಿ ಮಾಡುವುದರ ಜೊತೆಗೆ ರಾಜ್ಯದಿಂದ ಹೆಚ್ಚುವರಿ ಬೋನಸ್ ಘೋಷಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸ್ಸಪ್ಪ ಮಮಶೆಟ್ಟಿ, ಎಐಕೆಎಸ್ ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಮಾಡ್ಯಾಳ, ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ., ಕೆಆರ್‌ಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ರಮೇಶ ರಾಗಿ, ಗೌರವ ಅಧ್ಯಕ್ಷ ಉಮಾಪತಿ ಮಾಲೀಪಾಟೀಲ, ಡಿಎಸ್‌ಎಸ್ ಸಂಚಾಲಕ ಅರ್ಜುನ್ ಗೊದ್ದೂರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.