ADVERTISEMENT

ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ತಲಾ ₹25 ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:52 IST
Last Updated 27 ಜನವರಿ 2026, 15:52 IST
<div class="paragraphs"><p>ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ರೈತರು</p></div>

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ರೈತರು

   

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸೂಲಹಳ್ಳಿ ಸಮೀಪದ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಾಟ ಘಟಕದಿಂದ ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮಂಗಳವಾರ ಚುರುಕು ಪಡೆದಿದೆ.

ಪ್ರತಿ ಎಕರೆಗೆ ₹25 ಸಾವಿರ ಪರಿಹಾರಕ್ಕೆ ಆಗ್ರಹಿಸಿ ಜನವರಿ 23ರಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು, ಮಂಗಳವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಶುರು ಮಾಡಿದ್ದಾರೆ. ರಸ್ತೆಯಲ್ಲಿ ಅಡ್ಡಲಾಗಿ ಕ್ರೇನ್ ನಿಲ್ಲಿಸಿ ಧರಣಿ ನಡೆಸುತ್ತಿದ್ದಾರೆ.

ADVERTISEMENT

‘ಹಗಲು ಹೊತ್ತಿನಲ್ಲಿ ಪ್ರತಿಭಟನೆ ನಡೆಸಿ ಸಂಜೆ ನಾವು ಮನೆಗೆ ಹೋಗುತ್ತಿದ್ದೇವೆ. ಕಂಪನಿಯವರು ರಾತ್ರಿ ಸಮಯದಲ್ಲಿ ಕ್ಲಿಂಕರ್ ಘಟಕ ಅರಂಭಿಸಿ ಗೂಡ್ಸ್ ರೈಲಿನ ಮೂಲಕ ಸಾಗಾಟ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಸಾಗಾಟ ಮಾಡಿ ರೈತರ ಸಮಸ್ಯೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ರೈತರ ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ರೈತರಾದ ನಾಗರಾಜ ರೇಷ್ಮೀ, ಮಲ್ಲಿಕಾರ್ಜುರೆಡ್ಡಿ ಆಲೂರ್, ರಮೇಶ ಬೊಮ್ಮನಳ್ಳಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

50 ಎಕರೆಗೆ ಪರಿಹಾರ:

ಕಂಪನಿ ವಿರುದ್ಧ ಮಂಗಳವಾರ ರಸ್ತೆಯಲ್ಲಿ ಎತ್ತಿನ ಗಾಡಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಈ ನಡುವೆ, ಐದನೇ ದಿನವಾದ ಮಂಗಳವಾರ ರೈತರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಂಪನಿಯ ಇಬ್ಬರು ಅಧಿಕಾರಿಗಳು ರೈತರೊಂದಿಗೆ ಮಾತುಕತೆ ನಡೆಸಿ ಕೇವಲ 50 ಎಕರೆ ಜಮೀನಿಗೆ ಸೀಮಿತವಾಗಿ ಬೆಳೆ ಹಾನಿಗೆ ಪ್ರತಿ ಎಕರೆಗೆ ₹10 ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ರೈತರು ಎಲ್ಲ ಅನ್ನದಾತರ ಹಾನಿಯಾದ ಬೆಳೆಗೂ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಸೂಲಹಳ್ಳಿ ಸಮೀಪ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಣೆ ಘಟಕದ ವಿರುದ್ಧ ರೈತರು ಮಂಗಳವಾರ ಕಂಪನಿಯ ರಸ್ತೆಯಲ್ಲಿ ಎತ್ತಿನ ಗಾಡಿ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.