ADVERTISEMENT

ಹಕ್ಕಿ ಜ್ವರದ ಭೀತಿ: ಕೋಳಿ ಮಾಂಸ, ಮೊಟ್ಟೆ ಖರೀದಿಗೆ ಹಿಂದೇಟು

ಕುಸಿದ ವಹಿವಾಟು, ಮೇಕೆ ಕುರಿ ಮಾಂಸ ದರ ಕೆ.ಜಿ.ಗೆ ₹640

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 19:30 IST
Last Updated 15 ಜನವರಿ 2021, 19:30 IST
ಕಲಬುರ್ಗಿಯ ರೈಲು ನಿಲ್ದಾಣ ರಸ್ತೆಯ ಸನಾ ಚಿಕನ್‌ ಸೆಂಟರ್‌ನಲ್ಲಿರುವ ನಾಟಿ ಮತ್ತು ಬಾಯ್ಲರ್‌ ಕೋಳಿಗಳು
ಕಲಬುರ್ಗಿಯ ರೈಲು ನಿಲ್ದಾಣ ರಸ್ತೆಯ ಸನಾ ಚಿಕನ್‌ ಸೆಂಟರ್‌ನಲ್ಲಿರುವ ನಾಟಿ ಮತ್ತು ಬಾಯ್ಲರ್‌ ಕೋಳಿಗಳು   

ಕಲಬುರ್ಗಿ: ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರದ ಪ್ರಕರಣಗಳು ಕಂಡು ಬಂದಿಲ್ಲ. ಆದರೆ, ಹಕ್ಕಿಜ್ವರದ ಭೀತಿಯಿಂದಾಗಿ ಕೋಳಿ ಮಾಂಸ, ಮೊಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂದಿದೆ.

ಕೋವಿಡ್‌–19 ಲಾಕ್‌ಡೌನ್‌ ಸಮಯದಲ್ಲಿ ನೆಲಕಚ್ಚಿದ್ದ ಮಾಂಸ ಮಾರಾಟ ನಂತರದಲ್ಲಿ ಚೇತರಿಸಿಕೊಳ್ಳುತ್ತಿತ್ತು. ಈಗ ಮತ್ತೆ ಹಕ್ಕಿಜ್ವರದ ಭೀತಿಯಿಂದ ಚಿಕನ್‌ ಮತ್ತು ಮೊಟ್ಟೆ ವ್ಯಾಪಾರಿಗಳಿಗೆ ಹೊಡೆತಬಿದ್ದಿದೆ. ಕುರಿ, ಮೇಕೆ ಮಾಂಸ ಮಾರಾಟ ಯಥಾಸ್ಥಿತಿ ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ಬಾಯ್ಲರ್‌ ಕೋಳಿ ಮಾಂಸ ಕೆ.ಜಿ.ಗೆ ₹200 ದರ ಇದ್ದರೆ, ನಾಟಿ ಕೋಳಿ ಮಾಂಸ ಕೆ.ಜಿ.ಗೆ ₹400 ಇದೆ. ಕೋಳಿ ಮಾಂಸದ ಚಿಲ್ಲರೆ ಮಾರುಕಟ್ಟೆ ದರ ಯಥಾಸ್ಥಿತಿಯಲ್ಲಿದೆ. ಆದರೆ, ಸಗಟು ವಹಿವಾಟಿನಲ್ಲಿ ಜೀವಂತ ಕೋಳಿಯ ದರ ಕೆ.ಜಿ.ಗೆ ₹95ರಿಂದ ₹75ಕ್ಕೆ ಇಳಿದಿದೆ. ಇನ್ನು 100 ಮೊಟ್ಟೆ ದರ ₹500ರಿಂದ ₹400ಕ್ಕೆ ಕುಸಿತ ಕಂಡಿದೆ.

ADVERTISEMENT

‘ಜಿಲ್ಲೆಯಲ್ಲಿ 12 ಕೋಳಿ ಫಾರ್ಮ್‌ಗಳಿವೆ. ಆಳಂದ ತಾಲ್ಲೂಕಿನಲ್ಲಿ 6000 ಕೋಳಿ ಸಾಕಾಣಿಕೆ ಮಾಡಲಾಗಿದ್ದು, ಉಳಿದಂತೆ ಜಿಲ್ಲೆಯಾದ್ಯಂತ 30 ಸಾವಿರ ಕೋಳಿ ಇವೆ. ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ. ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ವಿ.ಎಚ್‌. ಹಣಮಂತಪ್ಪ ಅವರು ತಿಳಿಸಿದರು.

ತಾಪಮಾನ ಹೆಚ್ಚಾಗಿ ಇರುವುದರಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗಿ ತೂಕದಲ್ಲಿ ಕಡಿಮೆಯಾಗುತ್ತದೆ. ಈ ಕಾರಣ ಜಿಲ್ಲೆಯಲ್ಲಿ ಕೋಳಿ ಫಾರ್ಮ್‌ಗಳು ಅಷ್ಟೊಂದು ಇಲ್ಲ ಎನ್ನುವುದು ಸಗಟು ವ್ಯಾಪಾರಿಗಳ ಅಭಿಮತ. ಹಾಗಾಗಿ ರಾಜ್ಯದ ಹುಬ್ಬಳ್ಳಿ, ವಿಜಯಪುರ, ಬೆಳಗಾವಿ ಜಿಲ್ಲೆಗಳು ಹಾಗೂ ಹೃದರಾಬಾದ್‌ ಮತ್ತು ಮಹಾರಾಷ್ಟ್ರದಿಂದ ‌ತರಿಸಿಕೊಳ್ಳಲಾಗುತ್ತದೆ.

‘ಕಲಬುರ್ಗಿ ನಗರದಲ್ಲಿ ಪ್ರತಿದಿನ 25ರಿಂದ 30 ಟನ್‌ ಜೀವಂತ ಕೋಳಿ ಮಾರಾಟ ಆಗುತ್ತವೆ. ಜಿಲ್ಲೆಯಾದ್ಯಂತ 10ರಿಂದ 12 ವಾಹನಗಳಲ್ಲಿ ಕೋಳಿ ಸಾಗಣೆ ಮಾಡಲಾಗುತ್ತದೆ. ಗ್ರಾಮೀಣ ಮತ್ತು ನಗರ ಸೇರಿ ನಿತ್ಯ 70 ಟನ್‌ ವಹಿವಾಟು ಇದೆ. ಮದುವೆ ಸೀಜನ್‌ ಇರುವುದರಿಂದ ದರ ಕುಸಿದರೂ ವಹಿವಾಟಿನಲ್ಲಿ ಕಡಿಮೆಯಾಗಿಲ್ಲ. ಬದಲಿಗೆ ಇನ್ನೂ ಹೆಚ್ಚಾಗಿದೆ’ ಎನ್ನುತ್ತಾರೆ ಸಗಟು ವ್ಯಾಪಾರಿ ಮೊಹ್ಮದ್‌ ಅಸಗರ್‌ ಭೋಸ್ಗೆ.

‘ಬಾಯ್ಲರ್‌ ಕೋಳಿ ಮತ್ತು ನಾಟಿ ಕೋಳಿ ಮಾಂಸದ ದರ ವ್ಯತ್ಯಾಸವಾಗಿಲ್ಲ. ಜನರು ಭಯದಿಂದಾಗಿ ಮಾಂಸ ಖರೀದಿ ಮಾಡುತ್ತಿಲ್ಲ. ಚಿಕನ್‌ ಬೇಯಿಸಿ ತಿನ್ನುವುದರಿಂದ ಹಕ್ಕಿಜ್ವರದ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಸಚಿವರೇ ಹೇಳಿದ್ದಾರೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಸಬೇಕಿದೆ’ ಎಂದು ಸನಾ ಚಿಕನ್‌ ಸೆಂಟರ್‌ನ ಮೊಹ್ಮದ್‌ ಇಲಿಯಾಸ್‌ ಫಾರೂಕಿ ಹೇಳುತ್ತಾರೆ.

ಹಕ್ಕಿ ಸತ್ತಿದ್ದು ಕಂಡರೆ ಕರೆ ಮಾಡಿ
ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದಿಲ್ಲ. ಸಾರ್ವಜನಿಕರು ಭಯ ಹಾಗೂ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ಯಾವುದೇ ರೀತಿಯ ಪಕ್ಷಿಗಳು ಮರಣ ಹೊಂದಿರುವುದು ಕಂಡುಬಂದಲ್ಲಿ ಪಶು ಸಂಗೋಪನಾ ಇಲಾಖೆ ಸಹಾಯವಾಣಿ ಸಂಖ್ಯೆ 08472–278627ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂಬುದು ಜಿಲ್ಲಾಡಳಿತದ ಸಲಹೆ.

‘ಚಿಕನ್‌, ಮೊಟ್ಟೆ ತಿಂದರೆ ರೋಗ ಬರಲ್ಲ’
‘ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಸೇವಿಸುವುದರಿಂದ ಹಕ್ಕಿಜ್ವರ ಹರಡುವುದಿಲ್ಲ. ಚೆನ್ನಾಗಿ ಬೇಯಿಸಿದಾಗ ಸೋಂಕು ಇದ್ದರೂ ನಾಶವಾಗುತ್ತದೆ. ಕಾರಣ, ಮನುಷ್ಯರಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ’ ಎಂಬುದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ವಿ.ಎಚ್‌.ಹಣಮಂತಪ್ಪ ಅವರ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.