ADVERTISEMENT

92 ಗ್ರಾಂ ಚಿನ್ನಾಭರಣ ಕಳವು

ವೃದ್ಧ ದಂಪತಿ ಜಾತ್ರೆಗೆ ಹೋಗಿದ್ದಾಗ ಮನೆಗೆ ಕಳ್ಳರ ಕನ್ನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:52 IST
Last Updated 21 ಫೆಬ್ರುವರಿ 2026, 4:52 IST

ಕಲಬುರಗಿ: ನಗರದ ರಾಜಾಪುರ ಪ್ರದೇಶದ ರಾಘವೇಂದ್ರ ಕಾಲೊನಿಯ ಮನೆಯೊಂದರ ಕೀಲಿ ಮುರಿದ ಕಳ್ಳರು 92 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 2.50 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.

ಚಂದ್ರಶೇಖರ ಮರಗೋಳ (71) ಚಿನ್ನಾಭರಣ ಕಳೆದುಕೊಂಡವರು.

‘ಫೆ.17ರಂದು ಮಧ್ಯಾಹ್ನದ ಹೊತ್ತಿಗೆ ಕೋರವಾರ ಅಣಿವೀರಭದ್ರೇಶ್ವರ ದೇವರ ಜಾತ್ರೆಗೆ ಪತ್ನಿ ಸಮೇತ ಹೋಗಿದ್ದೆ. ರಾತ್ರಿ ಅಗ್ಗಿ ತುಳಿದು ಅಲ್ಲಿ ವಾಸ್ತವ್ಯ ಹೂಡಿದ್ದೆವು. ಫೆ.18ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮನೆಗೆ ಬಂದಾಗ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದಿತ್ತು’ ಎಂದು ದೂರಿನಲ್ಲಿ ಚಂದ್ರಶೇಖರ ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

₹ 3.53 ಲಕ್ಷ ಮೌಲ್ಯ ಪಡಿತರ ಅಕ್ಕಿ ಜಪ್ತಿ

ಕಲಬುರಗಿ: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟದ ಉದ್ದೇಶದಿಂದ ಸಾಗಿಸುತ್ತಿದ್ದ ಲಾರಿಯೊಂದರ ಮೇಲೆ ಪೊಲೀಸ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ, 10 ಟನ್‌ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಅದರ ಅಂದಾಜು ಮೌಲ್ಯ ₹ 3.53 ಲಕ್ಷ. ಜೊತೆಗೆ ₹ 10 ಲಕ್ಷ ಮೌಲ್ಯದ ವಾಹನವನ್ನೂ ಜಪ್ತಿಮಾಡಿಕೊಂಡಿದ್ದಾರೆ.

ನಗರದ ಆಳಂದ ರಸ್ತೆಯ ವಿಶ್ವರಾಧ್ಯ ಗುಡಿ ಸಮೀಪದ ದಾಳಿ ವೇಳೆ ಅಕ್ಕಿ ಮೂಟೆಗಳನ್ನು ತುಂಬಿದ್ದ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಕಲಬುರಗಿಯಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕಲಬುರಗಿ ಸಬರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.