ಮಣಿಕಂಠ ರಾಠೋಡ್
ಚಿತ್ತಾಪುರ (ಕಲಬುರಗಿ ಜಿಲ್ಲೆ): ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇ 25ರಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿರುವ ಕುರಿತು ಕಾಂಗ್ರೆಸ್ ಕಾರ್ಯಕರ್ತ ಹಣಮಂತ ಸಂಕನೂರು ಅವರು ನೀಡಿರುವ ದೂರಿನಡಿ ಮಣಿಕಂಠ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲೇನಿದೆ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಏಕ ವಚನದಲ್ಲಿ ಸಂಬೋಧಿಸಿ ಅವಹೇಳನ ಮಾಡಿದ್ದಾರೆ. ಸಮಾಜದಲ್ಲಿನ ಸಾರ್ವಜನಿಕ ಶಾಂತಿ ಕದಡಿಸುವ, ಸಮಾಜದಲ್ಲಿ ಅಶಾಂತಿ ಮೂಡಿಸುವ ಸಂಚು ಮಣಿಕಂಠ ರೂಪಿಸಿದ್ದಾರೆ ಎಂದು ಹಣಮಂತ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳನ್ನು ಚಮಚಾಗಳು ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯ ಘನತೆ, ಗೌರವಕ್ಕೆ ಧಕ್ಕೆಯುಂಟು ಮಾಡಿ ಸಾರ್ವಜನಿಕವಾಗಿ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಕುತಂತ್ರವನ್ನು ಮಣಿಕಂಠ ಮಾಡಿದ್ದಾರೆ ಎಂದೂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರನ್ನು ಅವಾಚ್ಯವಾಗಿ ಸಂಬಂಧಿಸಿ ಅವಹೇಳನ ಮಾಡಿದ್ದಾರೆ. ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಘನತೆ ಹೊಂದಿರುವವರನ್ನು ಅವಹೇಳನ ಮಾಡಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅಶಾಂತಿಯ ವಾತಾವರಣ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ ಎಂದು ಹಣಮಂತ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.