ADVERTISEMENT

ಚಿಂಚೋಳಿ | ಐವರು ಎಂಜಿನಿಯರ್‌ಗಳ ಸಸ್ಪೆಂಡ್: ಪ್ರಕರಣ ದಾಖಲು

ಚಿಂಚೋಳಿಗೆ ಮಂಜೂರಾದ ಕೆಕೆಆರ್‌ಡಿಬಿ ಅನುದಾನ ಅನ್ಯ ತಾಲ್ಲೂಕಿಗೆ ವರ್ಗಾವಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:40 IST
Last Updated 18 ಫೆಬ್ರುವರಿ 2026, 5:40 IST
ಚಿಂಚೋಳಿಯ ತಾ.ಪಂ ಸಭಾಂಗಣದಲ್ಲಿ ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆ ನಡೆಯಿತು
ಚಿಂಚೋಳಿಯ ತಾ.ಪಂ ಸಭಾಂಗಣದಲ್ಲಿ ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆ ನಡೆಯಿತು   

ಚಿಂಚೋಳಿ: ‘ಹಿಂದುಳಿದ ತಾಲ್ಲೂಕಿಗೆ ಮಂಜೂರಾದ ಕೆಕೆಆರ್‌ಡಿಬಿ ಅನುದಾನ ಅನ್ಯ ತಾಲ್ಲೂಕಿಗೆ ವರ್ಗಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಐವರು ಎಂಜಿನಿಯರ್‌ಗಳನ್ನು ಅಮಾನತುಪಡಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ನಿಗಮದ ಎಇಇ ಅರುಣಕುಮಾರ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರು.

‘ಅನುದಾನ ವರ್ಗಾವಣೆಯಿಂದ ಅಪೂರ್ಣವಾಗಿರುವ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದಿರುವ ಬಗ್ಗೆ ದೂರುಗಳು ಬಂದಾಗ ನಾನು ಖುದ್ದು ನಿಗಮದ ಎಂ.ಡಿ ಅವರನ್ನು ಭೇಟಿ ಮಾಡಿ ವಿವರಿಸಿದಾಗ ಯಾವ ಕ್ರಮವೂ ಜರುಗಿಸಿರಲಿಲ್ಲ. ಆಗ ಚಿಂಚೋಳಿ ಜನರೊಂದಿಗೆ ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದಾಗ ತನಿಖೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಎಸ್‌ಐಟಿ ರಚನೆಯಾಗಿದ್ದು ಸ್ಥಳ ತಪಾಸಣೆ ಮುಂದುವರೆದಿದೆ’ ಎಂದು ಶಾಸಕರು ತಿಳಿಸಿದರು.

ADVERTISEMENT

ಜೆಜೆಎಂ ಕಾಮಗಾರಿ ವಿರುದ್ಧ ತೀವ್ರ ಅಸಮಾಧಾನ: ಜೆಜೆಎಂ ಯೋಜನೆಯಡಿ ₹108 ಕೋಟಿ ಖರ್ಚು ಮಾಡಿ ಸುಮಾರು 118 ಕಾಮಗಾರಿ ಪೂರ್ಣಗೊಳಿಸಿದ್ದಿರಿ ಇದರಲ್ಲಿ ಒಂದಾದರೂ ನಮಗೆ ತೋರಿಸಿ ಎಂದಾಗ ಎಂಜಿನಿಯರ್‌ ಮೌನಕ್ಕೆ ಶರಣಾದರು. ಈ ವೇಳೆ ಶಾಸಕರು ಮತ್ತು ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಮಾಲಿ ಅಸಮಾಧಾನ ವ್ಯಕ್ತಪಡಿಸಿದರು.

ಬೇಕಾಬಿಟ್ಟಿ ಕಾಮಗಾರಿ ಕೈಗೊಂಡು ಸರ್ಕಾರದ ಅನುದಾನ ದುರುಪಯೋಗಪಡಿಸಿಕೊಂಡ ಕುರಿತಂತೆ ನಾನು ಶಾಸಕರೊಂದಿಗೆ ಸೇರಿ ಲೋಕಾಯುಕ್ತರಿಗೆ ದೂರು ನೀಡುತ್ತೇನೆ ಎಂದು ಬಸವರಾಜ ಮಾಲಿ ಹೇಳಿದರು.

ಕಲ್ಲೂರು ಗ್ರಾಮದಲ್ಲಿ ಅಪಾಯಕಾರಿ ವಿದ್ಯುತ್ ಮಾರ್ಗ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದಾಗ, 3 ದಿನಗಳಲ್ಲಿ ಸ್ಥಳ ತಪಾಸಣೆ ನಡೆಸುತ್ತೇನೆ. ಕುಂಚಾವರಂ ಸುತ್ತಲೂ ಒಂದು ವಾರದಲ್ಲಿ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇನೆ. ಐನೋಳ್ಳಿ ದೇಗಲಮಡಿ ಸ್ವಲ್ಪ ವಿಳಂಬವಾಗಲಿದೆ ಎಂದು ಜೆಸ್ಕಾಂ ಎಇಇ ಕಾಮಣ್ಣ ಇಂಜಳ್ಳಿ ತಿಳಿಸಿದರು.

ಮಾರುಕಟ್ಟೆಗೆ ಹೆಚ್ಚು ತೊಗರಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕಸ್ತ ವರ್ಷ ಎಪಿಎಂಸಿಗೆ ತೊಗರಿ ಹೆಚ್ಚು ಆವಕವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಗೆ 243 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲ್ಲೂಕು ನೋಡಲ್ ಅಧಿಕಾರಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು.

ಕೆಟ್ಟು ನಿಂತಿರುವ ಮಳೆ ಮಾಪನಗಳ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದೇವೆ ದುರಸ್ತಿ ಕೈಗೊಳ್ಳಲಿದ್ದಾರೆ ಎಂದರು.

ತಾಲ್ಲೂಕಿನ 28,336 ರೈತರಿಗೆ ₹43 ಕೋಟಿ ಪರಿಹಾರ ಡಿಬಿಟಿ ಮೂಲಕ ನೀಡಲಾಗಿದೆ. ಬೆಳೆ ವಿಮೆಯ ಪರಿಹಾರ ಬರಬೇಕಿದೆ ಎಂದು ಸಹಾಯಕ ನಿರ್ದೇಶಕರಾದ ವೀರಶೆಟ್ಟಿ ರಾಠೋಡ್ ತಿಳಿಸಿದರು.

ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್, ಆಹಾರ, ಅರಣ್ಯ, ಪುರಸಭೆ, ತೋಟಗಾರಿಕೆ, ಶಿಕ್ಷಣ ಪಶು ಪಾಲನೆ, ಸಾರಿಗೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ತಾ.ಪಂ ಇಒ ಸಂತೋಷ ಚವ್ಹಾಣ ಇದ್ದರು.

‘ಎರಡು ವರ್ಷಗಳಿಂದ ಅನುದಾನವಿಲ್ಲ’

ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಎಸ್‌ಸಿಎಸ್‌ಪಿ - ಟಿಎಸ್‌ಪಿ ಯೋಜನೆ ಅಡಿಯಲ್ಲಿ 2 ವರ್ಷಗಳಿಂದ ಅನುದಾನ ಬಂದಿಲ್ಲ. ಇದರಿಂದ ಸಾಮಾನ್ಯ ವರ್ಗದವರಿಗೆ ದೊರೆಯುವ ಸಹಾಯಧನ ರಿಯಾಯಿತಿ ಎಸ್‌ಸಿ–ಎಸ್‌ಟಿ ಜನರಿಗೆ ನೀಡುವಂತಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ತಾಲ್ಲೂಕಿಗೆ ಮಂಜೂರಾದ ಅನುದಾನ ನಿಯಮ ಬಾಹಿರವಾಗಿ ಅನ್ಯ ತಾಲ್ಲೂಕಿಗೆ ವರ್ಗಾಯಿಸಿದ್ದು ಅಕ್ಷಮ್ಯ ಅಪರಾಧ. ತನಿಖೆ ನಡೆಸಿದರೆ ಸಾಲದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ನನ್ನ ಹೋರಾಟ ನಿಲ್ಲದು
ಡಾ.ಅವಿನಾಶ ಜಾಧವ, ಚಿಂಚೋಳಿ ಶಾಸಕ 
ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಕುಡಿವ ನೀರು ಪೂರೈಸುವ ಯೋಜನೆಗಳು ವಿಫಲವಾಗಿವೆ. ರಸ್ತೆಗಳು ಅಗೆದು ಹಾಗೆಯೇ ಬಿಡಲಾಗಿದೆ. ಇದರ ವಿರುದ್ಧ ನಾನು ಲೋಕಾಯುಕ್ತರಿಗೆ ದೂರು ನೀಡುತ್ತೇನೆ
ಬಸವರಾಜ ಮಾಲಿ, ಗ್ಯಾರಂಟಿ ಯೋಜನೆ ಪ್ರಾಧಿಕಾರ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.