ADVERTISEMENT

ಕಲಬುರ್ಗಿ–ತಿರುಪತಿ ಮಧ್ಯೆ ಜ 11ರಿಂದ ವಿಮಾನ ಸಂಚಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 13:04 IST
Last Updated 14 ಡಿಸೆಂಬರ್ 2020, 13:04 IST
ಸ್ಟಾರ್‌ ಏರ್‌ಲೈನ್ಸ್‌ ವಿಮಾನ
ಸ್ಟಾರ್‌ ಏರ್‌ಲೈನ್ಸ್‌ ವಿಮಾನ   

ಕಲಬುರ್ಗಿ: ಘೊಡಾವತ್ ಸಮೂಹದ ಸ್ಟಾರ್‌ ಏರ್ ವಿಮಾನಯಾನ ಸಂಸ್ಥೆಯು ಬರುವ ಜನವರಿ 11ರಿಂದ ವಾರದಲ್ಲಿ ನಾಲ್ಕು ದಿನ ಕಲಬುರ್ಗಿಯಿಂದ ತಿರುಪತಿಗೆ ವಿಮಾನಯಾನ ಸೇವೆ ಆರಂಭಿಸಿದೆ. ಸೋಮವಾರದಿಂದಲೇ ಬುಕಿಂಗ್ ಆರಂಭಗೊಂಡಿದೆ.

ಪ್ರತಿ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ ವಿಮಾನ ಸಂಚಾರ ನಡೆಯಲಿದ್ದು, ₹ 2000 ಮೂಲ ಟಿಕೆಟ್‌ ದರ ನಿಗದಿ‍ಪಡಿಸಲಾಗಿದೆ. ಬೆಳಿಗ್ಗೆ 9.55ಕ್ಕೆ ಕಲಬುರ್ಗಿಯಿಂದ ಹೊರಟು ಬೆಳಿಗ್ಗೆ 11ಕ್ಕೆ ತಿರುಪತಿ ತಲುಪಲಿದೆ. ಮಧ್ಯಾಹ್ನ 2.25ಕ್ಕೆ ತಿರುಪತಿಯಿಂದ ಹೊರಟು 3.30ಕ್ಕೆ ಕಲಬುರ್ಗಿ ತಲುಪಲಿದೆ.

ಪ್ರಾದೇಶಿಕ ಸಂಪರ್ಕ ಯೋಜನೆಯಡಿ (ಉಡಾನ್‌) ಸ್ಟಾರ್‌ ಏರ್ ಸಂಸ್ಥೆಯು ಕಳೆದ ವರ್ಷವೇ ತಿರುಪತಿಗೆ ವಿಮಾನ ಸಂಚಾರ ಆರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆದಿತ್ತು. ಅಲ್ಲದೇ, ತಿರುಪತಿಗೆ ತೆರಳಲು ವಿಮಾನ ಸೌಕರ್ಯ ಕಲ್ಪಿಸುವಂತೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಸೇರಿದಂತೆ ಹಲವು ಸಂಸ್ಥೆಗಳು ಮನವಿ ಸಲ್ಲಿಸಿದ್ದವು.

ADVERTISEMENT

ಮುಂಬೈ–ಹೈದರಾಬಾದ್‌ಗೆ ವಿಮಾನ: ಕಲಬುರ್ಗಿಯಿಂದ ಮುಂಬೈ ಹಾಗೂ ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭಿಸುವಂತೆ ಅಲಯನ್ಸ್ ಏರ್ ಸಂಸ್ಥೆಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.