ADVERTISEMENT

Karnataka Rains: ಕಲ್ಯಾಣ–ಉತ್ತರ ಕರ್ನಾಟಕದ ಸಂಪರ್ಕ ಕಡಿತ

ಭೀಮಾ ನದಿ ಪ್ರವಾಹದಿಂದಾಗಿ ಜೇವರ್ಗಿ ಸೇತುವೆ ಬಂದ್: 61 ಗ್ರಾಮಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:30 IST
Last Updated 28 ಸೆಪ್ಟೆಂಬರ್ 2025, 0:30 IST
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಸಮೀಪದ ಕಟ್ಟಿಸಂಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ–50ರ ಭೀಮಾ ನದಿಯ ಸೇತುವೆ ಮೇಲೆ ಶನಿವಾರ ಬೆಳಿಗ್ಗೆಯಿಂದ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಿದ್ದರಿಂದ ಪ್ರಯಾಣಿಕರು ನಡೆದುಕೊಂಡೇ ಸೇತುವೆಯ ಇನ್ನೊಂದು ಭಾಗಕ್ಕೆ ಬಂದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಸಮೀಪದ ಕಟ್ಟಿಸಂಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ–50ರ ಭೀಮಾ ನದಿಯ ಸೇತುವೆ ಮೇಲೆ ಶನಿವಾರ ಬೆಳಿಗ್ಗೆಯಿಂದ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಿದ್ದರಿಂದ ಪ್ರಯಾಣಿಕರು ನಡೆದುಕೊಂಡೇ ಸೇತುವೆಯ ಇನ್ನೊಂದು ಭಾಗಕ್ಕೆ ಬಂದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ‘ಮಹಾ ನೆರೆ’ಗೆ ಜಿಲ್ಲೆಯ ಜನ ತತ್ತರಿಸಿದ್ದಾರೆ. ಭೀಮಾ ನದಿಯ ಪ್ರವಾಹದಿಂದಾಗಿ ಜೇವರ್ಗಿ ಬಳಿ ಹುಮನಾಬಾದ್–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಕಲ್ಯಾಣ  ಮತ್ತು ಉತ್ತರ ಕರ್ನಾಟಕದ ನಡುವೆ ಮುಖ್ಯ ಸಂಪರ್ಕ ಕೊಂಡಿ ಕಡಿತಗೊಂಡಿದೆ.

ನೆರೆಯ ಮಹಾರಾಷ್ಟ್ರದ ಸೀನಾ, ವೀರ್ ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಕಲಬುರಗಿ ಜಿಲ್ಲೆಯ ಜನರ ಕಣ್ಣೀರಿಗೆ ಕಾರಣವಾಗಿದೆ. 

ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಬಳಿ ಹೆದ್ದಾರಿ ಸೇತುವೆಗೆ ಸಮನಾಗಿ ನದಿ ನೀರು ಹರಿಯುತ್ತಿದೆ. ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಭಾರಿ ವಾಹನಗಳ ಸಂಚಾರವನ್ನು ಶನಿವಾರ ಸ್ಥಗಿತಗೊಳಿಸಿತ್ತು. ರಾತ್ರಿಯ ವೇಳೆ ಸೇತುವೆ ಮೇಲೆಯೇ ನೀರು ಹರಿದಿದ್ದರಿಂದ ಎಲ್ಲ ಬಗೆಯ ವಾಹನಗಳ ಸಂಚಾರವೂ ಸ್ಥಗಿತಗೊಂಡಿತು. ಇದರ ಬಿಸಿ ಆಂಬುಲೆನ್ಸ್, ಪತ್ರಿಕಾ ಸರಬರಾಜು ವಾಹನಗಳಿಗೂ ತಟ್ಟಿತು.

ADVERTISEMENT

ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯಪುರದ ಕಡೆಯಿಂದ ಬಂದ ಪ್ರಯಾಣಿಕರು ಸೇತುವೆ ಆಚೆಯೇ ಸಿಲುಕಿಕೊಂಡಿದ್ದರು. ಅವರನ್ನು ಕಲಬುರಗಿಗೆ ಕರೆತರುವ ಬಸ್‌ಗಳ ವ್ಯವಸ್ಥೆಯೂ ಆಗಿರಲಿಲ್ಲ. ಹೀಗಾಗಿ ನಡೆದುಕೊಂಡೇ ಸೇತುವೆಯ ಮತ್ತೊಂದು ಬದಿಗೆ ಬಂದರು. ಲಾರಿಗಳು ಸಾಲುಗಟ್ಟಿ ನಿಂತಿದ್ದವು.

ಕಾಗಿಣಾ ನದಿ ಮತ್ತು ನಾಗಾವಿ ಹಳ್ಳದ ಪ್ರವಾಹದಿಂದ ಮುಡಬೂಳ ಗ್ರಾಮವು ತಾಲ್ಲೂಕು ಕೇಂದ್ರ ಚಿತ್ತಾಪುರದೊಂದಿಗೆ ಸಂಪರ್ಕ ಕಡಿದುಕೊಂಡಿದೆ. ದಂಡೋತಿ ಸೇತುವೆ ಮುಳಗಡೆಯಾಗಿದೆ. ಸಾರಿಗೆ ಸಂಚಾರ ಬಂದ್ ಆಗಿದೆ. ಚಿಂಚೋಳಿ ತಾಲ್ಲೂಕಿನ ಜಟ್ಟೂರು ಗ್ರಾಮದಲ್ಲಿ‌‌ ಕಾಗಿಣಾ ನದಿಯ ಪ್ರವಾಹದ ನೀರು ಗ್ರಾಮದಲ್ಲಿ‌ 60ಕ್ಕೂ ಹೆಚ್ಚು‌ ಮನೆಗಳಿಗೆ ನೀರು ನುಗ್ಗಿದೆ. 200 ಜನರನ್ನು ರಕ್ಷಿಸಲಾಗಿದೆ. ಸೇಡಂ ತಾಲ್ಲೂಕಿನ ‌ಸಟಪಟನಳ್ಳಿ ಗ್ರಾಮದ ಬಳಿ ಕಾಗಿಣಾ ನದಿ‌ ಸೇತುವೆ ಜಲಾವೃತವಾಗಿದೆ. ಸೇಡಂ–ಚಿಂಚೋಳಿ ತಾಲ್ಲೂಕು, ಚಿತ್ತಾಪುರ–ಕಾಳಗಿ ತಾಲ್ಲೂಕು ಸಂಪರ್ಕ ಕಡಿತವಾಗಿದೆ. ಆಳಂದದಲ್ಲಿ ನೆರೆಹಾವಳಿಯಿದೆ. 

ಭೀಮಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ ಎಲ್ಲ ಗೇಟ್‌ಗಳಿಂದ ನೀರು ಹರಿಸಲಾಗುತ್ತಿದೆ. 61 ಗ್ರಾಮಗಳಿಗೆ ಪ್ರವಾಹ ಭೀತಿ ಇದ್ದು, ಶನಿವಾರ ಸಂಜೆವರೆಗೆ ಜಿಲ್ಲೆಯಾದ್ಯಂತ 4,715 ನೆರೆ ಸಂತ್ರಸ್ತರನ್ನು ಸುರಕ್ಷಿತ ತಾಣಕ್ಕೆ ಕಳುಹಿಸಿದೆ. 41 ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಕೆಲಸವನ್ನು ರಾಜ್ಯ ವಿಪತ್ತು ನಿರ್ವಹಣಾ ತಂಡ ಚುರುಕುಗೊಳಿಸಿದೆ. 2019ರ ಬಳಿಕ ಜಿಲ್ಲೆಯು ಭಾರಿ ಪ್ರಮಾಣದ ನೆರೆ ಹಾವಳಿಗೆ ತುತ್ತಾಗಿದೆ. 

ಬೀದರ್ ಜಿಲ್ಲೆಯಲ್ಲಿ ಮಳೆ ಹಾಗೂ ಮಹಾರಾಷ್ಟ್ರದ ಧನೆಗಾಂವ್ ಜಲಾಶದಿಂದ ಹೆಚ್ಚು ನೀರು ಹರಿಸುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜಿಲ್ಲೆಯ ಕಮಲನಗರ, ಔರಾದ್, ಭಾಲ್ಕಿ, ಹುಲಸೂರ ಹಾಗೂ ಬೀದರ್ ತಾಲ್ಲೂಕಿನ ಹಲವೆಡೆ ಸಂಪರ್ಕ ಕಡಿತಗೊಂಡಿದೆ.

ಭಾಲ್ಕಿ ತಾಲ್ಲೂಕಿನ ಇಂಚೂರ್‌ ಸೇತುವೆ ಮುಳುಗಿ, ಮಹಾರಾಷ್ಟ್ರದೊಂದಿಗಿನ ಸಂಪರ್ಕ ಕಡಿತವಾಗಿದೆ. ಭಾಲ್ಕಿ–ಹುಲಸೂರ, ಕಮಲನಗರ–ಬಾಲೂರ (ಕೆ), ಕಮಲನಗರ–ಔರಾದ್, ಕಮಲನಗರ–ಸೋನಾಳ  ನಡುವೆ ಸಂಚಾರ ಸ್ಥಗಿತವಾಗಿದೆ. ಹುಲಸೂರ ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. 

ಬಸವಕಲ್ಯಾಣದ ಧನ್ನೂರ, ಖೇರ್ಡಾ ಸೇತುವೆ ಬಹುತೇಕ ಮುಳುಗಿದ್ದು, ಖಾನಾಪೂರ ರಸ್ತೆಯಲ್ಲಿ ಸಂಚಾರ ಬಂದ್‌ ಆಗಿದೆ. ಚಿಮಕೋಡ್‌–ಚಿಲ್ಲರ್ಗಿ ನಡುವೆ ಪ್ರವಾಹದಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಾಗಣೆ ವಾಹನ ಸಿಲುಕಿಕೊಂಡಿತ್ತು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿದ್ದು, ಕುಡಿಯುವ ನೀರು, ತುರ್ತು ಸೇವೆಯೂ ಇಲ್ಲದೆ 250ಕ್ಕೂ ಮನೆಗಳ ನಿವಾಸಿಗಳು ಪರದಾಡುತ್ತಿದ್ದಾರೆ. ಹುರಸಗುಂಡಗಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಪ್ರವಾಹದ ನೀರು, ನಾಯ್ಕಲ್‌ ಗ್ರಾಮದ 10ಕ್ಕೂ ಹೆಚ್ಚು ಮನೆಗಳಿಗೆ ಪ್ರವಾಹದ ಹಿನ್ನೀರು ಆವರಿಸಿಕೊಂಡಿದೆ.

ವಡಗೇರಾ ತಾಲ್ಲೂಕಿನ ಗೂಡೂರು ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿ ಬೆಂಡೆಬೆಂಬಳಿ, ಜೋಳದಡಗಿ, ಬಿಳ್ಹಾರ ರಸ್ತೆ ಬಂದ್ ಆಗಿದೆ. ಹುಣಸಗಿ ತಾಲ್ಲೂಕಿನಲ್ಲಿ 22 ಜಾನುವಾರು ಮೃತಪಟ್ಟಿವೆ. 

ರಾಯಚೂರು ಜಿಲ್ಲೆ ಮಸ್ಕಿಯಲ್ಲಿ 15 ಮನೆ ಕುಸಿದಿವೆ. ಭೀಮಾನದಿ ನೀರು ಸೇರಿ ಕೃಷ್ಣಾನದಿಯಲ್ಲಿ ಹರಿವು ಹೆಚ್ಚಿದೆ. ಮುನ್ನೆಚ್ಚರಿಕೆಯಾಗಿ ಆಂಧ್ರದ ಜುರಾಲಾ ಜಲಾಶಯದ ಗೇಟ್‌ಗಳನ್ನು ತೆರೆಯಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಉತ್ತರಾದಿಮಠ ಕಾಗಿಣಾ ನದಿ ನೀರಿನ ಪ್ರವಾಹದಲ್ಲಿ ಬಹುತೇಕ ಮುಳುಗಿರುವುದು ಪ್ರಜಾವಾಣಿ ಚಿತ್ರ: ಅವಿನಾಶ ಬೋರಂಚಿ
ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡದ ಕೆಳ ಸೇತುವೆ ಮೇಲೆ ನಿಂತಿದ್ದ ಎರಡು ಲಾರಿಗಳು ಕಾಗಿಣಾ ನದಿ ಪ್ರವಾಹದಿಂದ ಜಲಾವೃತವಾಗಿರುವುದು
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಸಮೀಪದ ಕಟ್ಟಿಸಂಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ–50ರ ಭೀಮಾ ನದಿಯ ಸೇತುವೆ ಮೇಲೆ ಶನಿವಾರ ಬೆಳಿಗ್ಗೆಯಿಂದ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಿದ್ದರಿಂದ ಪ್ರಯಾಣಿಕರು ನಡೆದುಕೊಂಡೇ ಸೇತುವೆಯ ಇನ್ನೊಂದು ಭಾಗಕ್ಕೆ ಬಂದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಉತ್ತರಾದಿಮಠದ ವೃಂದಾವನ ಜಲಾವೃತ

ಕಾಗಿಣಾ ನದಿ ಪ್ರವಾಹದಿಂದಾಗಿ ಕಲಬುರಗಿ ಜಿಲ್ಲೆಯ ಮಳಖೇಡದ ಉತ್ತರಾದಿ ಮಠದ ಜಯತೀರ್ಥರ ಮೂಲ ವೃಂದಾವನ ಮುಳುಗಿದೆ. ಮಠದ ಗೋವುಗಳನ್ನು ಮಹಡಿಗೆ ಸ್ಥಳಾಂತರಿಸಲಾಗಿದೆ ಎಂದು ಮಠದ ಪ್ರಧಾನ ಅರ್ಚಕ ಯಂಕಣ್ಣಾಚಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.