ADVERTISEMENT

ಕಲಬುರಗಿ | ಜಾನಪದ ಕಲೆ ನಶಿಸಲು ಬಿಡಬಾರದು: ಅಲ್ಲಮಪ್ರಭು ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 4:16 IST
Last Updated 6 ಫೆಬ್ರುವರಿ 2026, 4:16 IST
<div class="paragraphs"><p>ಕಲಬುರಗಿಯಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ‍ಪರಿಷತ್‌ನ ದಶಮಾನೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಎಚ್.ಬಿ.ಪಾಟೀಲ, ಹಣಮಂತರಾಯ ದೊಡ್ಡಮನಿ, ರಮೇಶ ಲಂಡನಕರ್, ಅಲ್ಲಮಪ್ರಭು ಪಾಟೀಲ, ದಾಕ್ಷಾಯಣಿ ಎಸ್. ಅಪ್ಪ, ಎಸ್. ಬಾಲಾಜಿ ಭಾಗವಹಿಸಿದ್ದರು</p></div>

ಕಲಬುರಗಿಯಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ‍ಪರಿಷತ್‌ನ ದಶಮಾನೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಎಚ್.ಬಿ.ಪಾಟೀಲ, ಹಣಮಂತರಾಯ ದೊಡ್ಡಮನಿ, ರಮೇಶ ಲಂಡನಕರ್, ಅಲ್ಲಮಪ್ರಭು ಪಾಟೀಲ, ದಾಕ್ಷಾಯಣಿ ಎಸ್. ಅಪ್ಪ, ಎಸ್. ಬಾಲಾಜಿ ಭಾಗವಹಿಸಿದ್ದರು

   

ಕಲಬುರಗಿ: ‘ಇಂದಿನ ಕಂಪ್ಯೂಟರ್ ಯುಗದಲ್ಲಿ ಜಾನಪದ ಕಲೆಯು ನಶಿಸಿ ಹೋಗಲು ಅವಕಾಶ ಕೊಡಬಾರದು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡ ಜಾನಪದ ಪರಿಷತ್‌ನ ದಶಮಾನೋತ್ಸವದ ಅಂಗವಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ದಶಮಾನೋತ್ಸವ ಸಂಭ್ರಮ ಹಾಗೂ ಪ್ರಶಸ್ತಿ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸೋಬಾನೆ ಪದಗಳು, ಹಂತಿ ಪದಗಳನ್ನು ಯಾರೂ ಬರೆದಿಲ್ಲ. ಬದಲಾಗಿ ಅವು ಒಬ್ಬರ ಬಾಯಿಂದ ಬಾಯಿಗೆ ಹರಡಿ ಪ್ರಚಾರಗೊಂಡಿದ್ದವು. ಕ್ರಮೇಣ ಆ ಪರಂಪರೆ ಕಡಿಮೆಯಾಗುತ್ತಿದೆ. ಜಾನಪದ ಕಲೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು’ ಎಂದರು.

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಣಿ ಎಸ್. ಅಪ್ಪ ಮಾತನಾಡಿ, ‘ನನ್ನದು ಕನ್ನಡ ಎಂ.ಎ. ಪದವಿ. ಅದರಲ್ಲಿ ಜಾನಪದವನ್ನು ಒಂದು ವಿಷಯವನ್ನಾಗಿ ಆಯ್ದುಕೊಂಡು ಅಭ್ಯಾಸ ಮಾಡಿದ್ದರಿಂದ ಜಾನಪದದ ಹೆಚ್ಚು ಒಲವು ಇದೆ. ಜಾನಪದವು ಜನರ ಮನಸ್ಸಿನಿಂದ ಹುಟ್ಟಿದ ಸಾಹಿತ್ಯವಾಗಿದೆ. ಜನರು ತಮ್ಮ ಮನಸ್ಸಿನ ಭಾವನೆಗಳನ್ನು ಜಾನಪದದ ವಿವಿಧ ಕಲೆಗಳ ಮೂಲಕ ವ್ಯಕ್ತಪಡಿಸುತ್ತಾರೆ. ಭಜನಾ ಪದಗಳು, ಹಾಲಕ್ಕಿ ಹಾಡುಗಳನ್ನು ಗ್ರಾಮೀಣ ಪ್ರದೇಶದವರು ಇಂದಿಗೂ ಸುಮಧುರವಾಗಿ, ಸುಲಲಿತವಾಗಿ ಹಾಡುತ್ತಾರೆ. ಜಾನಪದ ಕಲೆಗಳಿಗೆ 8ನೇ ಪೀಠಾಧಿಪತಿ ಲಿಂ. ಶರಣಬಸವಪ್ಪ ಅಪ್ಪ ಅವರು ಪ್ರೋತ್ಸಾಹ ನೀಡಿದ್ದರು. ಅದನ್ನು ಸಂಸ್ಥಾನವು ಮುಂದುವರೆಸಿಕೊಂಡು ಹೋಗುತ್ತಿದೆ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಮಾತನಾಡಿ, ‘ಡಿಜಿಟಲ್ ಯುಗದಲ್ಲಿಯೂ ಜಾನಪದ ಗೀತೆಗಳು ನೋವು ನಲಿವುಗಳು ಹೊರಗೆ ಬರಲು ಸಹಕಾರಿಯಾಗಿವೆ. ಯುವಕರು ಸಿನಿಮಾ ಹಾಡುಗಳ ಗೀಳಿಗೆ ಒಳಗಾಗುತ್ತಿದ್ದಾರೆ. ಜಾನಪದವು ಮಾನವನ ಮೂಲ ಕಲೆಯಾಗಿದೆ. ಇತ್ತೀಚಿನವರೆಗೂ ಈ ಕಲೆ ಮುಂದಿನ ತಲೆಮಾರಿಗೆ ಹೋಗುತ್ತಿತ್ತು. ಆದರೆ, ಈಗೀಗ ಅಂತಹ ಪ್ರಯತ್ನಗಳು ಕಂಡು ಬರುತ್ತಿಲ್ಲ. ಜಾನಪದ ಹಾಡುಗಳನ್ನು ಹಾಡುವವರೂ ಇಲ್ಲ, ಕೇಳುವವರೂ ಇಲ್ಲದಂತಾಗಿದೆ. ಈ ಕಲೆಯನ್ನು ಉಳಿಸಿಕೊಳ್ಳಲು ಯುವಜನರು ಪ್ರಯತ್ನ ಮಾಡಬೇಕು’ ಎಂದರು.  

ದಶಮಾನೋತ್ಸವ ಉದ್ಘಾಟಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್. ಬಾಲಾಜಿ ಮಾತನಾಡಿ, ‘ಅಶ್ಲೀಲ ಶಬ್ದಗಳ ಬಳಕೆಯ ಮೂಲಕ ಮೂಲ ಜಾನಪದಕ್ಕೆ ಧಕ್ಕೆ ಬರಬಾರದು. ಇವುಗಳ ಬಳಕೆ ಮಾಡಬಾರದು. 45 ವರ್ಷ ಮೀರಿದ ಜಾನಪದ ಕಲಾವಿದರಿಗೆ ಮಾಸಾಶನ ಕೊಡಿಸಲು ಪ್ರಯತ್ನಿಸಲಾಗುತ್ತಿದೆ. ಸಿಂಗಾಪುರ, ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶಗಳಲ್ಲಿ ಜಾನಪದ ಪರಿಷತ್ ಘಟಕಗಳನ್ನು ಆರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಾಹಿತಿ ಹಣಮಂತರಾವ್ ದೊಡ್ಡಮನಿ ಮಾತನಾಡಿದರು. ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಬಿ. ನಿಂಗಪ್ಪ, ಕಾರ್ಯದರ್ಶಿ ಎಚ್.ಬಿ. ಪಾಟೀಲ ಸೇರಿದಂತೆ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.