
ವಾಡಿ: ವಾಡಿ ಪಟ್ಟಣಕ್ಕೆ ಸರ್ಕಾರಿ ಕಾಲೇಜು, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಡಿ. 17 ರಿಂದ 10 ದಿನಗಳ ಕಾಲ ಪಟ್ಟಣದ ನಾಗರಿಕರಿಂದ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜನಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ಹೇಳಿದರು.
ಪಟ್ಟಣದಲ್ಲಿ ಬುಧವಾರ ಜನಧ್ವನಿ ಜಾಗೃತ ಸಮಿತಿ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ಪಟ್ಟಣದಲ್ಲಿ ಕನಿಷ್ಠ ನಾಗರಿಕ ಸೌಲಭ್ಯ ದೊರಕಿರುವುದು ದುರಂತವಾಗಿದ್ದು, ಇದಕ್ಕಾಗಿ ನಾಗರಿಕ ಸಂಘಟನೆಯಿಂದ ಹಂತಹಂತವಾಗಿ ಹೋರಾಟ ರೂಪಿಸಲಾಗುತ್ತಿದೆ ಎಂದರು.
ಬೃಹತ್ ನೀರು ಶುದ್ಧೀಕರಣ ಘಟಕ ಇದ್ದರೂ ಜನರಿಗೆ ಕುಡಿಯಲು ರಾಡಿ ನೀರೇ ಗತಿ. ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ, ಚರಂಡಿಗಳು ಹೂಳು ತುಂಬಿ ಗಬ್ಬು ನಾರುತ್ತಿರುವುದು. ಸುಲಭ ಶೌಚಾಲಯ ಮತ್ತು ಮೂತ್ರಾಲಯಗಳ ಸೌಕರ್ಯ ಕೊರತೆ, ಸೊಳ್ಳೆ, ಹಂದಿ, ಬೀದಿನಾಯಿಗಳ ಕಾಟದಿಂದ ಜನರು ಬೇಸತ್ತಿದ್ದಾರೆ ಎಂದು ಹೇಳಿದರು.
ಇನ್ನು ಹಲವಾರು ಕಾರಣಗಳಿಂದ ವಾಡಿ ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದುಳಿದಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹತ್ತು ಸಾವಿರ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಬಡಾವಣೆಯ ಜನರ ಮನೆ ಬಾಗಿಲಿಗೆ ತೆರಳಿ ಜನರಿಂದ ಸಹಿ ಪಡೆಯಲಾಗುತ್ತದೆ. ಅಂತಿಮವಾಗಿ ಡಿ.30 ರಂದು ಬೆಳಿಗ್ಗೆ 10:30ಕ್ಕೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸುವ ಮೂಲಕ ತಹಶೀಲ್ದಾರರಿಗೆ ಹತ್ತು ಸಾವಿರ ಸಹಿ ಹಸ್ತಾಂತರಿಸಲಾಗುವುದು. ಪಕ್ಷಭೇದ ಮರೆತು ಸಾರ್ವಜನಿಕರು ಈ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜನಧ್ವನಿ ಜಾಗೃತ ಸಮಿತಿಯ ಗೌರವಾಧ್ಯಕ್ಷ ಜಯದೇವ ಜೋಗಿಕಲ್ ಮಠ, ಉಪಾಧ್ಯಕ್ಷ ಸಿದ್ದಯ್ಯ ಶಾಸ್ತ್ರಿ ನಂದೂರಮಠ, ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ್, ಈರಣ್ಣ ಯಲಗಟ್ಟಿ, ವಿಠ್ಠಲ ರಾಠೋಡ, ಹರಿಶ್ಚಚಂದ್ರ ಕರಣಿಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.