ADVERTISEMENT

ವಂಚನೆ: ದ್ವಿತೀಯ ದರ್ಜೆ ಸಹಾಯಕ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:48 IST
Last Updated 21 ಜನವರಿ 2021, 2:48 IST
ಸಂತೋಷ ಕುಮಾರ
ಸಂತೋಷ ಕುಮಾರ   

ಚಿತ್ತಾಪುರ: ತಾಲ್ಲೂಕಿನ ವಾಡಿ ಪಟ್ಟಣದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ವೇತನವನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡು ಒಂದು ವರ್ಷದಿಂದ ಪರಾರಿಯಾಗಿದ್ದ ಆರೋಪಿಯನ್ನು ವಾಡಿ ಪೊಲೀಸರು ಬುಧವಾರ ಬೆಳಿಗ್ಗೆ ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ.

ಪ್ರಕರಣದ ವಿವರ: ದ್ವಿತೀಯ ದರ್ಜೆ ಸಹಾಯಕ ಸಂತೋಷಕುಮಾರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವೇತನದ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದ. ಈ ಕುರಿತು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಆಸ್ಪತ್ರೆಯ ವೈದ್ಯರಾದ ಡಾ.ಸೈಯದ್ ರಜಿವುಲ್ಲಾ ಸೈಯದ್ ಜಫರುಲ್ಲಾ ಖಾದ್ರಿ ಅವರು ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆಗಸ್ಟ್‌ 14, 2019 ರಂದು ₹ 75,047, ಡಿಸೆಂಬರ್ 11ರಂದು ₹ 1,64,413, 12ರಂದು ಒಮ್ಮೆ ₹77,313 ಮತ್ತೊಮ್ಮೆ ₹ 71,070, 13ರಂದು ₹ 93,240, 14ರಂದು ₹ 71,170 ಹೀಗೆ ಒಟ್ಟು ಆರು ಚೆಕ್‌ಗಳ ಮೂಲಕ ಒಟ್ಟು ₹ 5,46,253 ಸಿಬ್ಬಂದಿಯ ವೇತನವನ್ನು ಚಿತ್ತಾಪುರದ ಉಪ ಖಜಾನೆ ಇಲಾಖೆಯಿಂದ ಮಂಜೂರಾತಿ ಮಾಡಿಸಿಕೊಂಡು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದ ಎಂದು ವೈದ್ಯರು ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು.

ADVERTISEMENT

ಸಿಬ್ಬಂದಿಯ ವೇತನ ಬಿಲ್ ಚೆಕ್‌ನ ಮೇಲೆ ಮತ್ತು ಎಚ್.ಆರ್.ಎಂ.ಎಸ್ ಸ್ಟೇಟ್‌ಮೆಂಟ್‌ ಮೇಲೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಸಹಿ ಪಡೆದುಕೊಳ್ಳದೆ ತಾನೇ ಸಹಿ ಮಾಡಿ, ಮೊಹರು ಹಾಕಿಕೊಂಡು ಬ್ಯಾಂಕ್‌ಗೆ ಸಲ್ಲಿಸಿ ಸರ್ಕಾರ ಮತ್ತು ಸಿಬ್ಬಂದಿಗೆ ನಂಬಿಕೆ ದ್ರೋಹ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವೈದ್ಯರು ದೂರು ನೀಡಿದ್ದರು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದ ಸಂತೋಷಕುಮಾರನನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದರು. ಶಹಾಬಾದ್ ಡಿವೈಎಸ್ಪಿ ವೆಂಕನಗೌಡ ಪಾಟೀಲ, ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು ಮಾರ್ಗದರ್ಶನದಲ್ಲಿ ಪಿಎಸ್ಐ ವಿಜಯಕುಮಾರ ಬಾವಗಿ ಆರೋಪಿಯನ್ನು ಬಂಧಿಸಿದರು. ಆರೋಪಿಯನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.