ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಗುರುವಾರ ಕರೆ ನೀಡಿದ್ದ ಬಂದ್‌ಗೆ ಭೀಮಾ ನದಿ ಸೇತುವೆಯ ರಸ್ತೆಗೆ ಮುಳ್ಳು ಕಂಟಿಗಳನ್ನು ಬಡಿದ ಹೋರಾಟಗಾರರು
ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಕ್ಷೇತ್ರವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ಗುರುವಾರ ಕರೆ ನೀಡಿದ ಗಾಣಗಾಪುರ ಬಂದ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕ್ಷೇತ್ರದಲ್ಲಿನ ಪ್ರುಮುಖ ರಸ್ತೆಗಳು ಸೇರಿದಂತೆ ಎಲ್ಲೆಡೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಭೀಮಾ ನದಿ ಸೇತುವೆಯ ರಸ್ತೆಗೆ ಮುಳ್ಳು ಕಂಟಿಗಳನ್ನು ಬಡಿದು ಸಂಚಾರ ಸ್ಥಗಿತಗೊಳಿಸಲಾಗಿದೆ. ಅಫಜಲಪುರ ಮಾರ್ಗದಿಂದ ಬರುವ ರಸ್ತೆಯಲ್ಲಿ ವಾಹನಗಳು ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು, ಮಹಾರಾಷ್ಟ್ರ, ತೆಲಂಗಾಣ ಸೇರದಂತೆ ಅನ್ಯ ಜಿಲ್ಲೆಗಳ ಭಕ್ತರು ನಡೆದುಕೊಂಡು ದೇವಸ್ಥಾನದತ್ತ ತೆರಳಿದರು.
ಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಶಿವಕುಮಾರ ನಾಟೀಕರ ಅವರು ಕಳೆದ ಎರಡು ವಾರಗಳಿಂದ ಧರಣಿ ಸತ್ಯಾಗ್ರಹ ನಡೆಸಿದರೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಲಿಲ್ಲ. ಹೀಗಾಗಿ, ಬಂದ್‌ಗೆ ಕರೆಕೊಟ್ಟಿದ್ದು, ಯಾತ್ರಿಕರು ಪರದಾಡುವಂತೆ ಆಗಿದೆ.
ಧರಣಿ ನಿರತರನ್ನು ಶಾಸಕರು, ಮಾಜಿ ಶಾಸಕರು, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಭೇಟಿ ಮಾಡಿದ್ದರು. 'ಕ್ಷೇತ್ರದ ಅಭಿವೃದ್ಧಿ ಆಗಬೇಕಾಗಿರುವುದು ಅವಶ್ಯವಿದೆ, ಧರಣಿ ಸತ್ಯಾಗ್ರಹಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಜ್ಯ ಹಾಗೂ ಕೇಂದ್ರ ಮಟ್ಟದ ನಾಯಕರೊಂದಿಗೆ ಮಾತನಾಡುತ್ತೇವೆ' ಎಂದು ಭರವಸೆ ನೀಡಿ ಹೋಗಿದ್ದರು. ಇಲ್ಲಿಯವರೆಗೆ ಯಾವುದೇ ರೀತಿಯ ಸಕಾರಾತ್ಮಕ ಬೆಳವಣಿಗೆ ಸರ್ಕಾರಗಳ ಕಡೆಯಿಂದ ಬಂದಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.
ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರಕ್ಕೆ 15 ದಿನ ಪೂರೈಸಲಿದೆ. ಶಾಸಕರು, ರಾಜಕೀಯ ಮುಖಂಡರು ಧರಣಿಗೆ ಬೆಂಬಲಿಸಿದ್ದಾರೆ. ಆದರೆ, ದೇವಸ್ಥಾನದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸೌಜನ್ಯಕ್ಕೂ ಹೋರಾಟದ ಸ್ಥಳಕ್ಕೆ ಭೇಟಿ ನೀಡಿಲ್ಲ, ಸ್ಪಂದನೆಯೂ ವ್ಯಕ್ತಪಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಧರಣಿ ಸ್ಥಳಕ್ಕೆ ಬಂದು ಅಭಿವೃದ್ಧಿಯ ಭರವಸೆ ನೀಡಿಲ್ಲ. ಇದೆಲ್ಲವನ್ನೂ ನೋಡಿದರೆ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿ ಆಗುವುದು ಇವರಿಗೆ ಬೇಕಿಲ್ಲವೇನೋ ಎನ್ನುವಂತಿದೆ ಎಂದು ಹೋರಾಟಗಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಗ್ರಾಮಸ್ಥರೆಲ್ಲರೂ ಸೇರಿ ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ ಕಣ್ಣು, ಕಿವಿ ಮುಚ್ಚಿಕೊಂಡಿದೆ. ಜಿಲ್ಲಾಡಳಿತವನ್ನು ಎಚ್ಚರಗೊಳಿಸಲು ಗಾಣಗಾಪುರ ಬಂದ್‌ಗೆ ಕರೆ ಕೊಡಲಾಗಿದೆ. ಗ್ರಾಮಸ್ಥರು ಎಲ್ಲರೂ ಸೇರಿ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕಾರ ಕೊಟ್ಟಿದ್ದಾರೆ ಎಂದಿದ್ದಾರೆ.
ಬಂದ್‌ನಲ್ಲಿ ಮುಖಂಡರಾದ ಮಾರುತಿ ಮೂರನೆತ್ತಿ, ಗುಂಡಪ್ಪ ಹೊಸಮನಿ, ಉದಯಕುಮಾರ ಪೂಜಾರಿ, ಸಂಗಣ್ಣ ಹಸರಗುಂಡಗಿ, ಕರುಣಾಕರ ಪೂಜಾರಿ, ಪ್ರೀಯಾಂಕ್ ಪೂಜಾರಿ, ಬಲವಂತ ಜಕಬಾ
ದತ್ತು ಹೇರೂರ, ಅನ್ವರ್ ಸಾಬ್ ತಾಂಬೋಳಿ, ಪಿಂಟು ಮನಿಯಾರ್, ಶೇಖ್ಅಲಿ ತಾಂಬೋಳಿ, ಇಬ್ರಾಹಿಂ ಮನಿಯಾರ್, ನಾಗೇಶ ಹೊಸಮನಿ, ಈರಣ್ಣ ಹಾಗರಗುಂಡಗಿ, ತಿಪ್ಪಣ್ಣ ಚಿನ್ಮಳ್ಳಿ, ಸಂತೋಷ ವಡಗೇರಿ, ದಿಂಗಬರ ಕರಜಗಿ, ಸಿದ್ದು ಡಾಂಗೆ, ಶ್ರೀಪಾದ ಮಾಳಗಿ, ಪುಟ್ಟುಗೌಡ, ರಾಕೇಶ ವಡಗೇರಿ, ಯಲ್ಲಪ್ಪ ರಮಗಾ, ಕಾಂತು ಮಾಹೂರ ಸೇರಿ ಹಲವರು ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.