ADVERTISEMENT

ಕಲಬುರಗಿ: ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಸಂಭ್ರಮ

ಗ್ರಾಹಕರ ಮನ ಸೆಳೆಯುವ ವಿಶೇಷ ಮೋದಕಪ್ರಿಯ ಮೂರ್ತಿಗಳು; ಮಣ್ಣಿನ ಗಣಪನಿಗೆ ಬೇಡಿಕೆ

ರಾಮಮೂರ್ತಿ ಪಿ.
Published 29 ಆಗಸ್ಟ್ 2022, 19:30 IST
Last Updated 29 ಆಗಸ್ಟ್ 2022, 19:30 IST
ಕಲಬುರಗಿಯ ಬ್ರಹ್ಮಪುರ ಬಡಾವಣೆಯಲ್ಲಿನ ಮಣ್ಣಿನ ಉತ್ಪನ್ನಗಳ ಕೇಂದ್ರ ‘ಗ್ರಾಮ ಸ್ವರಾಜ್ಯ’ದಲ್ಲಿ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುತ್ತಿರುವ ಕಲಾವಿದರು -  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ಬ್ರಹ್ಮಪುರ ಬಡಾವಣೆಯಲ್ಲಿನ ಮಣ್ಣಿನ ಉತ್ಪನ್ನಗಳ ಕೇಂದ್ರ ‘ಗ್ರಾಮ ಸ್ವರಾಜ್ಯ’ದಲ್ಲಿ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುತ್ತಿರುವ ಕಲಾವಿದರು -  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಗಣೇಶ ಚತುರ್ಥಿ ಎಂದರೆ ಎಲ್ಲೆಡೆ ‘ವಿನಾಯಕ’ ಮೂರ್ತಿಗಳದ್ದೇ ದರ್ಶನ. ಅರ್ಧ ಅಡಿಯ ಬಾಲಗಣಪನಿಂದ ಹಿಡಿದು ಹತ್ತಾರು ಅಡಿ ಬೃಹತ್‌ ಸ್ವರೂಪಿ ‘ಗಜಾನನ’ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲದೇ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗಣೇಶನನ್ನು ಸ್ವಾಗತಿಸುವುದೇ ಸಂಭ್ರಮ.

ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌) ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಸರ್ಕಾರ ಹಲವು ಬಾರಿ ಹೇಳಿದೆ. ಈಗಂತೂ ನಿಷೇಧವೂ ಹೇರಿದೆ. ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗುತ್ತಿದೆ. ಆದರೆ, ನಿಷೇಧದ ಮಧ್ಯೆಯೂ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಪ್ರತಿಷ್ಠಾಪನೆ ನಿರಾತಂಕವಾಗಿ ಸಾಗಿದೆ.

ಕಲಬುರಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪಿಒಪಿ ‘ಲಂಬೋದರ’ ಮೂರ್ತಿಗಳ ಆರ್ಭಟದ ಮಧ್ಯೆ ಪರಿಸರ ಸ್ನೇಹಿ ‘ಗೌರಿಸುತ’ನ ಮೂರ್ತಿಗಳ ಪ್ರತಿಷ್ಠಾಪನೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ.

ADVERTISEMENT

‘ಮೋದಕಪ್ರಿಯ’ನ ಮಣ್ಣಿನ ಮೂರ್ತಿಗಳ ಬಳಕೆ ಬಗ್ಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳ ಜಾಗೃತಿ ಮುಂದುವರೆದಿದೆ. ಇದಕ್ಕೆ ಸಂಘ ಸಂಸ್ಥೆಗಳೂ ಕೈ ಜೋಡಿಸಿವೆ. ಮಣ್ಣಿನ ಗಣೇಶ ಮೂರ್ತಿಗಳ ಉಚಿತ ವಿತರಣೆಯೂ ನಡೆದಿದೆ.

ಮಣ್ಣಿನ ಮೂರ್ತಿಗೆ ಹೆಸರಾದ ಗ್ರಾಮಸ್ವರಾಜ್ಯ: ನಗರದ ಬ್ರಹ್ಮಪುರ ಬಡಾವಣೆಯ ಶರಣಬಸವೇಶ್ವರ ದೇವಸ್ಥಾನದ ಹಿಂಬದಿಯಿರುವ ಮಣ್ಣಿನ ಉತ್ಪನ್ನಗಳ ಕೇಂದ್ರ ‘ಗ್ರಾಮ ಸ್ವರಾಜ್ಯ’ದಲ್ಲಿ ಏಳು ವರ್ಷಗಳಿಂದ ‘ವಿದ್ಯಾಪತಿ’ ಮೂರ್ತಿಗಳನ್ನು ತಯಾರಿಸಿ, ಮಾರಲಾಗುತ್ತಿದೆ. ಹೆಚ್ಚಿನ ಮಣ್ಣಿನ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಆಗುತ್ತಿರುವುದು ಇದೇ ಕೇಂದ್ರದಲ್ಲಿ ಎಂಬುದು ವಿಶೇಷ.

ಈ ಬಾರಿ 15 ಸಾವಿರಕ್ಕೂ ಹೆಚ್ಚು ‘ಭಾಲಚಂದ್ರ’ ಮೂರ್ತಿಗಳನ್ನು ತಯಾರಿಸಲಾಗಿದ್ದು, ಮಾರಾಟ ಜೋರಾಗಿದೆ. ₹50 ರಿಂದ ₹ 12 ಸಾವಿರ ಬೆಲೆಯ ಮೂರ್ತಿಗಳನ್ನು ಇಲ್ಲಿ ಮಾರಲಾಗುತ್ತಿದೆ.

‘ಮಣ್ಣಿನ ಮೂರ್ತಿಗಳಿಗೆ ಗ್ರಾಹಕರು ಬಯಸಿದರೆ ಅಲಂಕರಿಸಲಾಗುತ್ತದೆ.ಕಣ್ಣು, ಮೂಗು, ಕಿವಿ, ಹಣೆಗೆ ಅಲ್ಪ ಪ್ರಮಾಣದ ಬಣ್ಣ ಹಚ್ಚುವ, ತಲೆಗೆ ಪೇಟ ತೊಡಿಸುವ, ರುಮಾಲು ಸುತ್ತುವ, ಫ್ಯಾನ್ಸಿ ಆಭರಣಗಳನ್ನು ತೊಡಿಸುವ ಕಾರ್ಯ ಮಾಡುತ್ತೇವೆ’ ಎಂದು ಕೇಂದ್ರದ ಕಲಾವಿದರು ತಿಳಿಸಿದರು.

‘ಬೆಳಗಾವಿ, ಬೀದರ್‌ ಜಿಲ್ಲೆಗಳಿಂದ ಜೇಡಿ ಮಣ್ಣು ತಂದು ಮೂರ್ತಿ ತಯಾರಿಸುತ್ತೇವೆ. ಮೊದಲು 35ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದೆವು. ಕೋವಿಡ್‌ ಹೊಡೆತದ ಪರಿಣಾಮ ವ್ಯಾಪಾರ ತಗ್ಗಿದ್ದು, ಇದೀಗ 10ರಿಂದ 15 ಜನ ಕೆಲಸ ಮಾಡುತ್ತಿದ್ದೇವೆ’ ಎಂದು ಕೇಂದ್ರದ ಮುಖ್ಯಸ್ಥ ಸಂಗಮೇಶ ತಿಳಿಸಿದರು.

‘ಮಣ್ಣಿನ ಮೂರ್ತಿ ತಯಾರಕರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಸೂಕ್ತ ಬೆಂಬಲ ದೊರೆಯುತ್ತಿಲ್ಲ. ಬಾಯಿ ಮಾತಿಗಷ್ಟೇ ಹೇಳಿದರೆ ಸಾಲದು, ಮಣ್ಣಿನ ಗಣಪ ಬಳಕೆ ಬಗ್ಗೆ ವ್ಯಾಪಕ ಪ್ರಚಾರ ನಡೆಯಬೇಕು. ಪಿಒಪಿ ಮೂರ್ತಿಯಿಂದಾಗುವ ಹಾನಿ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕು’ ಎಂದು ಸಂಗಮೇಶ ಒತ್ತಾಯಿಸಿದರು.

ಎನ್‌.ವಿ.ಕಾಲೇಜಿನಲ್ಲಿ ಕಾರ್ಯಾಗಾರ: ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಹತ್ವ ತಿಳಿಪಡಿಸುವ ಅಭಿಯಾನ ಶಾಲಾ – ಕಾಲೇಜುಗಳಲ್ಲೂ ನಡೆದಿವೆ. ಕಲಬುರಗಿಯ ನೂತನ ವಿದ್ಯಾಲಯ ಪದವಿ ಕಾಲೇಜಿನಲ್ಲಿ ಈ ಬಗ್ಗೆ ಎರಡು ದಿನಗಳ ಕಾರ್ಯಾಗಾರ ನಡೆಯಿತು. ಮಣ್ಣಿನ ಮೂರ್ತಿಗಳ ತಯಾರಿಕೆ ಬಗ್ಗೆ ಉಪನ್ಯಾಸ ನೀಡಿದ ಕಲಾವಿದರು, ನಂತರ ಅದರ ಪ್ರಾತ್ಯಕ್ಷಿಕೆಯನ್ನೂ ತೋರಿಸಿದರು.

ಚಿತ್ತಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ

ಚಿತ್ತಾಪುರ: ಪಟ್ಟಣದಲ್ಲಿರುವ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಯುವಕ ಮಂಡಳದಿಂದ 38 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾ‍‍‍‍ಪಿಸಲಾಗುತ್ತಿದೆ.

1984ರಲ್ಲಿ ಸಮಾಜದ ವಿಠಲ್ ಮಂದಿರದಲ್ಲಿ ಗಣೇಶ ಹಬ್ಬದ ಪ‍್ರಯುಕ್ತ ಚಿಕ್ಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಅಂದು ಆರಂಭಗೊಂಡ ಸಂಪ್ರದಾಯ ಇಂದಿನವರೆಗೂ ಮುಂದುವರಿದಿದೆ ಎಂದು ಯುವಕ ಮಂಡಳದ ಮಾಜಿ ಅಧ್ಯಕ್ಷ ಬಾಲಾಜಿ ಬುರುಬರೆ ಹೇಳುತ್ತಾರೆ.

1996ರಿಂದ ಗಣೇಶ ಉತ್ಸವದ ಅದ್ಧೂರಿ ಆಚರಣೆ ಶುರುವಾಗಿದೆ. ಮೂರ್ತಿ ಪ್ರತಿಷ್ಠಾಪಿಸಿದ ಆರನೇ ದಿನ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮೇಂದಿ, ರಂಗೋಲಿ, ಗಾಯನ, ಕುರ್ಚಿಯಾಟ ಆಯೋಜಿಸಿ, ಬಹುಮಾನ ನೀಡಲಾಗುತ್ತದೆ. ಗಣೇಶ ವಿಸರ್ಜನೆ ದಿನ ಮಹಾರಾಷ್ಟ್ರದ ಸೊಲ್ಲಾಪುರದಿಂದ ನಾಶಿಕ್ ಡೋಲ್ ತಾಶಾ ತರಿಸಿ ಮೆರವಣಿಗೆ ಮಾಡಲಾಗುತ್ತದೆ.

ಇಲ್ಲಿನ ಫ್ರೆಂಡ್ಸ್ ಯೂಥ್ ಗಣೇಶ ಉತ್ಸವ ಮಂಡಳಿಯಿಂದಲೂ ಪಟ್ಟಣದಲ್ಲಿ 17 ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಗಣೇಶ ಮೂರ್ತಿ ಅದ್ದೂರಿಯಾಗಿ ಪ್ರತಿಷ್ಠಾಪಿಸಲಾಗುತ್ತಿದೆ. ವಿವಿಧ ಸಾಧಕರಿಗೆ ಸನ್ಮಾನಿಸಲಾಗುತ್ತದೆ.

ಪಿಒಪಿ ಮೂರ್ತಿ ಬಳಸಿದರೆ ದಂಡ; ಎಚ್ಚರಿಕೆ

ಜೇವರ್ಗಿ: ಪಟ್ಟಣದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿ ನಡೆದಿದೆ. ಮಣ್ಣಿನ ಮೂರ್ತಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಬೇಕಿದೆ. ತಾಲ್ಲೂಕಿನ ಚನ್ನೂರ, ಹರನೂರ ನೀರಲಕೋಡ್, ಹೆಗ್ಗಿನಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ಕುಂಬಾರ ಸಮುದಾಯದವರು ಪ್ರತಿ ವರ್ಷದಂತೆ ಈ ಸಲವೂ ಮಣ್ಣಿನ ಮೂರ್ತಿಗಳನ್ನು ಜೇವರ್ಗಿ ಮಾರುಕಟ್ಟೆಗೆ ತರುವ ನಿರೀಕ್ಷೆಯಿದೆ.

ಸಾರ್ವಜನಿಕರು ಮಣ್ಣಿನ ಮೂರ್ತಿಗಳನ್ನು ಖರೀದಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹರವಾಳ ಗ್ರಾಮಸ್ಥ ಮಲ್ಲಿಕಾರ್ಜುನ ಆದವಾನಿ ಮನವಿ ಮಾಡಿದರು.

ಪಿಒಪಿ ಮೂರ್ತಿಗಳ ಬೆಲೆ ₹100ರಿಂದ ₹5 ಸಾವಿರದ ವರೆಗೆ ಇದೆ. ಆಳಂದದಿಂದ ಮೂರ್ತಿ ತಂದು ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಶಿವಾಜಿ ತಗಟಗಾರ ತಿಳಿಸಿದರು. ‘ಪಿಒಪಿ ಮೂರ್ತಿಗಳನ್ನು ನದಿ, ಕೆರೆ, ತೆರೆದ ಬಾವಿಗಳಲ್ಲಿ ವಿಸರ್ಜನೆ ಮಾಡಿದರೆ ಜಲಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಿದರೆ ದಂಡ ವಿಧಿಸಲಾಗುವುದು’ ಎಂದು ವರ್ತಕರಿಗೆ ತಾಲ್ಲೂಕು ಆಡಳಿತ ಸೂಚಿಸಿದೆ.

ಲಂಬೋದರನ ಲಡ್ಡು ಹರಾಜು!

ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಸ್ವಾಮಿ ವಿವೇಕಾನಂದ ನವ ಯುವಕ ಸಂಘದವರು ಸಾರ್ವಜನಿಕರಿಂದ, ಚಾಲಕರಿಂದ, ಅಂಗಡಿಗಳಿಂದ ಚಂದಾ ವಸೂಲಿ ಮಾಡದೇ ಉತ್ಸವ ಆಚರಿಸುತ್ತಾರೆ. ಸಂಪ್ರದಾಯದಂತೆ ಗ್ರಾಮದ ಐದು ಜನ ಪ್ರಮುಖರಿಂದ ಮಾತ್ರವೇ ಕಾಣಿಕೆ ಸ್ವೀಕರಿಸಲಾಗುತ್ತದೆ. ತೆಲಂಗಾಣ ಗಡಿಗೆ ಹೊಂದಿಕೊಂಡ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಬರುವ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಸಂಘದ ವತಿಯಿಂದ ಕಳೆದ ಒಂದು ದಶಕದಿಂದ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ9 ದಿನ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಅನ್ನ ದಾಸೋಹ, ರಕ್ತದಾನ ಶಿಬಿರವನ್ನೂ ಆಯೋಜಿಸಲಾಗುತ್ತಿದೆ. ಇಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಯ ಕೈಯಲ್ಲಿರುವ ಲಡ್ಡುಗೆ ಹೆಚ್ಚಿನ ಬೇಡಿಕೆಯಿರುತ್ತದೆ. 5 ಕೆ.ಜಿ.ಯಿಂದ 11 ಕೆ.ಜಿ. ತೂಕದ ಲಡ್ಡು ಕನಿಷ್ಠ ₹1.11 ಲಕ್ಷದಿಂದ 2.11 ಲಕ್ಷದವರೆಗೆ ಹರಾಜಾಗಿರುವುದು ಈವರೆಗಿನ ದಾಖಲೆ. ಹರಾಜಿನಲ್ಲೇ ಬಂದ ಹಣದಲ್ಲೇ ಗಣೇಶೋತ್ಸವ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.