ಕಲಬುರಗಿ: ‘ಅರಣ್ಯ ಇಲಾಖೆಯ ವತಿಯಿಂದ ನೆಡಲಾಗುವ ಸಸಿಗಳ ಬೆಳವಣಿಗೆ ಮೇಲೆ ನಿಗಾವಹಿಸಲು ಪ್ರತಿ ಸಸಿಯನ್ನು ಜಿಯೊ ಟ್ಯಾಗ್ ಮೂಲಕ ದಾಖಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮಣ್ಣಿಗೆ ಹೊಂದಿಕೊಂಡು ಉತ್ತಮವಾಗಿ ಬೆಳೆಯುವ ಸಸಿಗಳನ್ನು ಸರ್ವೆ ನಂಬರ್ ಸಹಿತ ಜಿಯೊ ಟ್ಯಾಗ್ ಮಾಡಲಾಗುವುದು. ಸಸಿ ಯಾವ ವರ್ಷ ಎಷ್ಟು ಬೆಳೆಯಿತು? ಸ್ಥಿತಿಗತಿ ಏನಿದೆ ಎಂಬ ಮಾಹಿತಿ ಇಲಾಖೆ ವೆಬ್‌ಸೈಟ್‌ನಲ್ಲಿ ಸಿಗಲಿದೆ’ ಎಂದರು.
‘ನಮ್ಮ ಸರ್ಕಾರ ಬಂದ ಮೇಲೆ 8.50 ಕೋಟಿ ಸಸಿ ನೆಡಲಾಗಿದೆ. ಇವುಗಳಲ್ಲಿ ಶೇ 70ರಷ್ಟು ಉಳಿದಿವೆ. ಈ ವರ್ಷ ಪ್ರತಿ ನಗರದಲ್ಲಿ ತಲಾ ಒಂದು ಲಕ್ಷ ಸಸಿ ನೆಡಲಾಗುವುದು. ಅವುಗಳನ್ನು ಥರ್ಡ್ ಪಾರ್ಟಿ ಏಜೆನ್ಸಿಯಿಂದ ಪರಿಶೀಲನೆ ಸಹ ನಡೆಸಲಾಗುವುದು’ ಎಂದು ಹೇಳಿದರು.
‘ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳ ಬಗ್ಗೆ ವರದಿ ತರಿಸಿಕೊಂಡು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ದಂಡವನ್ನು ವಿಧಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.